ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ಎಲ್ಲಡೆ ಬರದ ಛಾಯೇ ಆವರಿಸುತ್ತಿದ್ದು, ಮಳೆಯನ್ನೇ ನಂಬಿರುವ ರೈತರು, ಕುಡಿಯುವ ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿ ಆರಂಭವಾಗಿದೆ. ಇಷ್ಟು ದಿನ ಮಳೆಗಾಗಿ ಕಾದು ಕುಳಿತಿದ್ದ ಮಂದಿ ಮಾರ್ಬಲವು ಇದೀಗ ದೈವದ ಮೊರೆ ಹೋಗುತ್ತಿದ್ದು, ಕಾಯೋ ಮಳೆರಾಯ ಬಿಡಬೇಡ ಜನರ ಕೈಯ್ಯ ಎನ್ನುವ ಪ್ರಾರ್ಥನಾ ಮಾರ್ದನಿ ಘೋಷವ್ಯಾಖ್ಯಗಳು ಎಲ್ಲೆಡೆ ಮೊಳಗಲಾರಂಭಿಸಿವೆ.

ರೈತರ ಜೊತೆಗೆ ಜನಸಾಮಾನ್ಯರು ಆಗಸದ ಕಡೆಗೆ ಮುಖಮಾಡಿದ್ದು, ಮಳೆಗಾಗಿ ನಾನಾ ರೀತಿಯ ಪೂಜೆ,ಪುನಸ್ಕಾರಗಳು, ವಿಶೇಷ ಪ್ರಾರ್ಥನೆ, ಕಪ್ಪೆಗಳ ಮದುವೆ ಮಾಡಿ ಮೆರವಣಿಗೆ, ಮೌನಾನುಷ್ಠಾನ, ದೇವಸ್ಥಾನಗಳಿಗೆ ಪಾದಯಾತ್ರೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳ ಮುಖಾಂತರ ಮಳೆರಾಯ ಕರುಣಿಸುವಂತೆ ಬೇಡಿಕೊಳ್ಳುತ್ತಿದ್ದಾರೆ. ಕಳೆದ ಜೂನ್‌ನಲ್ಲಿ ಶೇ.42 ರಷ್ಟು ಇದ್ದ ಮಳೆ ಕೊರತೆಯು ಇದೀಗ ಸುಮಾರು ಶೇ.65 ಆಸುಪಾಸಿಗೆ ತಲುಪುತ್ತಿದ್ದು, ತುಂಗಭದ್ರಾ - ಕೃಷ್ಣಾ ನದಿಗಳು ಮತ್ತು ಜಲಾಶಯಗಳಲ್ಲಿಯೂ ನೀರಿನ ಮಟ್ಟವು ನಿಗದಿತ ಪ್ರಮಾಣದಲ್ಲಿ ತಲುಪದ ಕಾರಣಕ್ಕೆ ಮಳೆಯಾಶ್ರಿತ ಹಾಗೂ ನೀರಾವರಿ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಸ್ತಬ್ಧಗೊಂಡಿವೆ. ರೈತರು ಬಿತ್ತಿದ ಬೆಳೆಗಳನ್ನು ನಾಶ ಪಡಿಸುತ್ತಿದ್ದು, ಸುಮಾರು 200ಕ್ಕೂ ಹೆಚ್ಚು ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳೆಂದು ಜಿಲ್ಲಾಡಳಿತ ಗುರುತಿಸಿ ಪರ್ಯಾಯ ಮೂಲಗಳಿಂದ ನೀರು ಪಡೆದುಕೊಳ್ಳುವ ಕಾರ್ಯಕ್ಕೆ ಮುಂದಾಗಿದೆ. ಇತ್ತ ವಿವಿಧ ಸಂಘಟನೆಗಳು ಬರ ಘೋಷಣೆ ಮಾಡಿ, ಸಮೀಕ್ಷೆ ಕೈಗೊಂಡು ಪರಿಹಾರ ನೀಡಲು ಕ್ರಮ ವಹಿಸಬೇಕು. ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಉಂಟಾಗುವ ನೀರಿನ ಸಮಸ್ಯೆಯನ್ನು ಎದುರಿಸಲು ಅಗತ್ಯ ಯೋಜನೆಗಳ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಡಳಿತದ ಮುಖಾಂತರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.

ಜಿಲ್ಲಾ ಕೇಂದ್ರವಾದ ರಾಯಚೂರು ನಗರ, ಗ್ರಾಮೀಣ ಭಾಗದ ಜೊತೆಗೆ ಸಿಂಧನೂರು, ದೇವದುರ್ಗ, ಮಾನ್ವಿ, ಲಿಂಗಸುಗೂರು, ಸಿರವಾರ, ಅರಕೇರಾ ಮತ್ತು ಮಸ್ಕಿ ತಾಲೂಕುಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರು,ವಿವಿಧ ಸಂಘ-ಸಂಸ್ಥೆಗಳು, ರೈತರು, ಮಹಿಳೆಯರು ಹಾಗೂ ಜನಸಾಮಾನ್ಯರು ವಿವಿಧ ರೀತಿಯಲ್ಲಿ ಪೂಜೆಗಳನ್ನು ಮಾಡಿ ಮಳೆರಾಯನಿಗೆ ನಿವೇದನೆಯನ್ನು ಸಮರ್ಪಿಸುತ್ತಿದ್ದಾರೆ.


ರಾಯಚೂರು ತಾಲೂಕಿನ ಬಾಯಿದೊಡ್ಡಿ ಗ್ರಾಮಸ್ಥರು ಮಳೆಗಾಗಿ ಕಪ್ಪೆಗಳ ಮದುವೆ ಮಾಡಿಸಿ ಮೆರವಣಿಗೆ ಮಾಡಿದರು. ವಿವಿಧ ದೇವಸ್ಥಾನಗಳ ದೇವರುಗಳಿಗೆ ಪೂಜೆಯನ್ನು ನೆರವೇರಿಸಿದರು ನಂತರ ಪರಸ್ಪರ ನೀರು ಎರಚಿಕೊಂಡು ಮಳೆಗಾಗಿ ಪ್ರಾರ್ಥಿಸಿದರು. ಅದೇ ರೀತಿ ರಾಯಚೂರಿನ ಮಡ್ಡಿಪೇಟೆಯ ನಿವಾಸಿಗಳು ಜೋಡಿ ಕಪ್ಪೆಗಳಿಗೆ ಮದುವೆ ಮಾಡಿಸಿದರು ಮತ್ತು ಸ್ಥಳೀಯ ನಿಜಲಿಂಗಪ್ಪ ಕಾಲೋನಿಯ ಮಾರೆಮ್ಮ ದೇವಸ್ಥಾನದಲ್ಲಿ ಮಹಿಳೆಯರು ಮಳೆಗಾಗಿ ಪ್ರಾರ್ಥಿಸಿ ಮಾರೆಮ್ಮ ದೇವಿಗೆ ಜಲಾಭಿಷೇಕ ಮಾಡಿ ವಿಶೇಷ ಪೂಜೆಯನ್ನು ನೆರವೇರಿಸಿದ್ದಾರೆ. ಸಿಂಧನೂರು ಮತ್ತು ಮಾನ್ವಿಯಲ್ಲಿ ಜೆಡಿಎಸ್‌ ನಾಯಕರು ಮಳೆಗಾಗಿ ವಿವಿಧ ದೇವಸ್ಥಾನಗಳಿಗೆ ಪಾದಯಾತ್ರೆ ಮುಖಾಂತರ ತೆರಳಿ ವಿಶೇಷ ಪೂಜೆಯನ್ನು ಮಾಡುತ್ತಿದ್ದಾರೆ.

ಮಳೆಗಾಗಿ ನಿವೃತ್ತ ಶಿಕ್ಷಕನ ಮೌನವ್ರತ:

ದೇವದುರ್ಗ:ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು,ರೈತರ ಬದುಕು ಗಾಳಿಗೆ ಇಟ್ಟಂತಾಗಿದೆ.ರೈತರ ಸಂಕಷ್ಟದ ಪರಿಸ್ಥಿತಿಯನ್ನು ನೋಡಿ ನಿವೃತ್ತ ಶಿಕ್ಷಕರೊಬ್ಬರು ಮೌನವೃತ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ತಾಲೂಕಿನ ಗೋಪಾಳಪೂರ ಗ್ರಾಮದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಜು.11ರಿಂದ ಮೌನವೃತ ಮಾಡುತ್ತಿರುವ ತಾಲೂಕು ನಿವೃತ್ತ ಶಿಕ್ಷಕರ ಸಂಘದ ಅಧ್ಯಕ್ಷರೂ ಅಗಿರುವ ಸದಾಶಿವಪ್ಪ ಗೋಪಾಳಪೂರ,ನಿತ್ಯ ಕೇವಲ ಬಾಳೆಹಣ್ಣು ಮತ್ತು ಹಾಲು ಮಾತ್ರ ಸೇವನೆ ಮಾಡುತ್ತಾರೆ.ಬೆಳಗ್ಗೆ 8ರಿಂದ 12ರವರೆಗೆ ಮತ್ತು ಸಂಜೆ 4 ಗಂಟೆಯಿಂದ ರಾತ್ರಿ 8ಗಂಟೆಯವರೆಗೆ ಧ್ಯಾನದಲ್ಲಿ ನಿರತರಾಗಿರುತ್ತಾರೆ. ಇತ್ತೀಚಿಗೆ ಕಾಶಿ ಜ್ಞಾನ ಸಿಂಹಾಸನಾಧೀಶ್ವರ 1008 ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಭಗವತ್ಪಾದರು ಭೇಟಿಯಾದಾಗ, ಭಕ್ತರೆಲ್ಲರೂ ಸಪ್ತಭಜನೆ ಮಾಡಲು ಸಲಹೆ ನೀಡಿದ್ದರಂತೆ. ಆದರೆ ಅದನ್ನೇ ಮನದಲ್ಲಿಟ್ಟುಕೊಂಡು ರೈತ ಸಮುದಾಯದ ಒಳಿತಿಗಾಗಿ ದೇವರು ಮಳೆ ತರಿಸಲಿ ಎಂದು ತಾವೇ ಮೌನವೃತ ಮಾಡುತ್ತಿದ್ದಾರೆ. ಇದೇ ಜು.17ರಂದು 7ದಿನಗಳ ಮೌನವ್ರತ ಪೂರ್ಣಗೊಳ್ಳಲಿದೆ. ಗ್ರಾಮದ ಶ್ರೀಮಠದ 1008 ಸರಸ್ವತಿ ಪುತ್ರ ಮಹಾಮಂಡಳೇಶ್ವರ ಪ್ರಭು ಪಂಡಿತಾರಾಧ್ಯ ಶಿವಾಚಾರ್ಯರು ವಾಡಂಗಳಿ ನಾಶಿಕ್‌ರವರು ಗ್ರಾಮಕ್ಕೆ ಆಗಮಿಸುತ್ತಿದ್ದು ಮೌನವೃತ ಮುಕ್ತಾಯ ಕಾರ್ಯಕ್ರಮ ಜರುಗಲಿವೆ ಎಂದು ಗ್ರಾಮಸ್ತರು ತಿಳಿಸಿದ್ದಾರೆ.

---

ಜಿನ್ನಾಪುರದಲ್ಲಿ ಮಹಿಳೆಯರಿಂದ ಜಲಾಭಿಷೇಕ

ಮಸ್ಕಿ ತಾಲೂಕಿನ ಜಿನ್ನಾಪುರ ಗ್ರಾಮದಲ್ಲಿ ಮಳೆಗಾಗಿ ಮಹಿಳೆಯರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬರಗಾಲದ ಭೀತಿ ನೀಗಿ, ಉತ್ತಮ ಮಳೆಯಾಗಲಿ ಎಂಬ ಆಶಯದೊಂದಿಗೆ ಬಾವಿಯ ಪವಿತ್ರ ಜಲವನ್ನು ತಂದು ಗ್ರಾಮದ ದುರ್ಗಾದೇವಿ, ಆಂಜನೇಯ, ಬಸವಣ್ಣ, ತಾಯಮ್ಮ, ಸುಂಕಲಮ್ಮ ದೇವಸ್ಥಾನಗಳು ಹಾಗೂ ಅಗಸಿ ಬುಡ್ಡೆಕಲ್ಲಿಗೆ ಭಕ್ತಿಯಿಂದ ಜಲಾಭಿಷೇಕ ಮಾಡಿದರು.ದೇವಸ್ಥಾನಗಳಲ್ಲಿ ಉಡಿ ತುಂಬು ಕಾರ್ಯ ಜರುಗಿತು ಮತ್ತು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿ, ಮಹಾಮಂಗಳಾರತಿ ಮಾಡಲಾಯಿತು.

---

15ಕೆಪಿಆರ್‌ಸಿಆರ್ 01: ದೇವದುರ್ಗ ತಾಲೂಕಿನ ಗೋಪಾಳಪೂರ ಗ್ರಾಮದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ನಿವೃತ್ತ ಶಿಕ್ಷಕರ ಸದಾಶಿವಪ್ಪ ಮೌನವ್ರತವನ್ನು ವಹಿಸಿದ್ದಾರೆ.

15ಕೆಪಿಆರ್‌ಸಿಆರ್ 02: ಮಸ್ಕಿ ತಾಲೂಕಿನ ಜಿನ್ನಾಪುರ ಗ್ರಾಮದಲ್ಲಿ ಮಳೆಗಾಗಿ ಮಹಿಳೆಯರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಿದರು.