ಕನ್ನಡಪ್ರಭ ವಾರ್ತೆ ತಿಪಟೂರು

ನಮ್ಮ ಸಂಸ್ಥೆಯ ಸಿಎಸ್‌ಆರ್ ಅನುದಾನದ ಅಡಿಯಲ್ಲಿ ಪ್ರತಿ ವರ್ಷ ಈ ರೀತಿಯ ಹಲವಾರು ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ಗೋಕಲ್‌ದಾಸ್ ಎಕ್ಸ್‌ಪೋರ್ಟ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಾಲಕೃಷ್ಣಶೆಟ್ಟಿ ತಿಳಿಸಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಂಗಳೂರಿನ ಗೋಕಲ್‌ದಾಸ್ ಎಕ್ಸ್‌ ಪೋರ್ಟ್‌ ಫೌಂಡೇಶನ್ ವತಿಯಿಂದ ಸುಸಜ್ಜಿತವಾದ ಶೌಚಗೃಹ ಕಟ್ಟಡ ಮತ್ತು ಡಿಜಿಟಲ್ ಎಜ್ಯುಕೇಶನ್ ಟ್ರಾನ್ಸಫಾರ್ಮಿಂಗ್‌ ಕಾರ್ಯಕ್ರಮದ ಅಡಿಯಲ್ಲಿ ಕಂಪ್ಯೂಟರ್ ಲ್ಯಾಬ್‌ಗೆ ಅವಶ್ಯವಾದ ಕಂಪ್ಯೂಟರ್‌ಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಸರ್ಕಾರಿ ಶಾಲಾ ಮಕ್ಕಳಲ್ಲಿ ಆಧುನಿಕ ಮತ್ತು ಪ್ರಾಯೋಗಿಕ ಶಿಕ್ಷಣದ ಮಹತ್ವವನ್ನು ವೃದ್ಧಿಸಲು ಹಾಗೂ ಸ್ವಚ್ಛ ಹಾಗೂ ಸುಸಜ್ಜಿತ ಶೌಚಗೃಹ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನೀಡುವ ಶಿಕ್ಷಣವು ಇಲ್ಲಿಯೂ ಸಿಗಲೆನ್ನುವುದು ನಮ್ಮ ಆಶಯವಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ ಆಧಾರಿತ ಶಿಕ್ಷಣ ಪಡೆಯಲು ಉತ್ತಮ ಅವಕಾಶ ದೊರೆಯಲಿದ್ದು, ಸ್ವಚ್ಛ ಹಾಗೂ ಸುರಕ್ಷಿತ ಶೌಚಗೃಹ ಸೌಲಭ್ಯದಿಂದ ವಿದ್ಯಾರ್ಥಿಗಳ ಆರೋಗ್ಯ ಮತ್ತು ಕಲಿಕಾ ವಾತಾವರಣ ಮತ್ತಷ್ಟು ಉತ್ತಮಗೊಳ್ಳಲಿದೆ. ಸಮಾಜದ ಭವಿಷ್ಯವನ್ನು ರೂಪಿಸುವ ಯುವಜನತೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಉದ್ದೇಶ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಎಂ.ಡಿ. ಶಿವಕುಮಾರ್ ಮಾತನಾಡಿ ನಮ್ಮ ಕಾಲೇಜಿನಲ್ಲಿ ೧೨೦೦ ಜನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದು, ಶೌಚಗೃಹಗಳ ಸ್ಥಿತಿ ಹಾಳಾಗಿ ಬಳಸಲು ಕಷ್ಟಕರ ಹಂತಕ್ಕೆ ತಲುಪಿದ್ದವು. ಮತ್ತು ಕಂಪ್ಯೂಟರ್ಗಳ ಸಂಖ್ಯೆ ಕಡಿಮೆ ಇದ್ದುದರಿಂದ ಮಕ್ಕಳ ಕಲಿಕೆಗೆ ಪೂರಕ ಆಗುತ್ತಿರಲಿಲ್ಲ. ಆದ್ದರಿಂದ ಮೇಲಿನ ಸೌಲಭ್ಯ ಗಳನ್ನು ಕೊಡುಗೆಯಾಗಿ ನೀಡಿದ ಸದರಿ ಸಂಸ್ಥೆಗೆ ಧನ್ಯವಾದಗಳು ಎಂದು ಅವರ ಸೇವೆ ಶ್ಲಾಘಿಸಿದರು. ಜನರಲ್ ಮ್ಯಾನೇಜರ್ ಮಹಾಂತೇಶ್ ಬಂಗಾರಿ, ಸಿಎಸ್‌ಆರ್ ಮುಖ್ಯಸ್ಥ ಕೆ.ಟಿ. ರಾಜೇಂದ್ರ ಪ್ರಸಾದ್‌, ಗಿರೀಶ್ ಗೌಡ, ಲೋಕೇಶ್, ರವೀಂದ್ರ ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.