ಅಧಿಕಾರಿಗಳೇ ತಮ್ಮ ಬಳಿ ಬಂದು ಖಾತೆ ಮಾಡಿ ಕೊಡುವಂತಹದ್ದು ಪೌತಿ ಖಾತೆ ಆಂದೋಲನ ಕಾರ್ಯಕ್ರಮದ ಉದ್ದೇಶವಾಗಿದೆ. ಹಾಗಾಗಿ ಅಧಿಕಾರಿಗಳಿಗೆ ಒತ್ತಡ ನೀಡದೆ ತಾಳ್ಮೆಯಿಂದ ಅರ್ಜಿಗಳನ್ನು ನೀಡಿ ಪೌತಿ ಖಾತೆಗಳನ್ನು ಮಾಡಿಸಿಕೊಳ್ಳಿ ಎಂದು ಶಾಸಕ ಸ್ವರೂಪ್ ಸಲಹೆ ನೀಡಿದರು. ತಹಶೀಲ್ದಾರ್ ಅವರು ಕೂಡಾ ಕ್ರಿಯಾಶೀಲರಾಗಿ ಪಂಚಾಯಿತಿ, ಹೋಬಳಿ ಮಟ್ಟಕ್ಕೆ ಬಂದು ಕೆಲಸ ಮಾಡಿಕೊಡುತ್ತಿದ್ದಾರೆ. ಹಾಗಾಗಿ ಅವರಿಗೆ ಹೆಚ್ಚಿನ ಒತ್ತಡ ನೀಡದೇ ಖಾತೆ ಮಾಡಿಸಿಕೊಳ್ಳಿ ಎಂದರು. ಪೌತಿ ಖಾತೆಯ ಮಹತ್ವ ಹಾಗೂ ಅದನ್ನು ಮಾಡಿಸಿಕೊಳ್ಳುವ ವಿಧಾನದ ಕುರಿತು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹಾಸನ
ಅಧಿಕಾರಿಗಳೇ ತಮ್ಮ ಬಳಿ ಬಂದು ಖಾತೆ ಮಾಡಿ ಕೊಡುವಂತಹದ್ದು ಪೌತಿ ಖಾತೆ ಆಂದೋಲನ ಕಾರ್ಯಕ್ರಮದ ಉದ್ದೇಶವಾಗಿದೆ. ಹಾಗಾಗಿ ಅಧಿಕಾರಿಗಳಿಗೆ ಒತ್ತಡ ನೀಡದೆ ತಾಳ್ಮೆಯಿಂದ ಅರ್ಜಿಗಳನ್ನು ನೀಡಿ ಪೌತಿ ಖಾತೆಗಳನ್ನು ಮಾಡಿಸಿಕೊಳ್ಳಿ ಎಂದು ಶಾಸಕ ಸ್ವರೂಪ್ ಸಲಹೆ ನೀಡಿದರು. ತಾಲೂಕಿನ ಸಾಲಗಾಮೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಲಗಾಮೆ ಹೋಬಳಿಯ ಪೌತಿ ಖಾತಾ ಆಂದೋಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಚಿವರಾದ ಕೃಷ್ಣ ಬೈರೇಗೌಡ ಅವರು ಕಂದಾಯ ಇಲಾಖೆಯಲ್ಲಿ ಬಹಳಷ್ಟು ಸುಧಾರಣೆಗಳನ್ನ ಮಾಡಿದ್ದಾರೆ. ಪೌತಿ ಖಾತೆ ಯಾರಿಗೆ ತಲುಪಬೇಕೋ ಅವರಿಗೆ ತಲುಪಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಕಿವಿಮಾತು ಹೇಳಿದರು. ನಮ್ಮ ಹಾಸನ ತಾಲೂಕಿನಲ್ಲಿ ಅಧಿಕಾರಿಗಳು ನಿಮ್ಮ ಅರ್ಜಿಗಳನ್ನು ತೆಗೆದುಕೊಂಡು ಶೀಘ್ರದಲ್ಲೆ ತಮ್ಮ ಹೆಸರಿಗೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಹಲವಾರು ರೈತರು ದುರಸ್ತಿಯ ಬಗ್ಗೆ ಕೇಳುತ್ತಿದ್ದರು. ಈಗಾಗಲೇ ಹಾಸನ ತಾಲೂಕಿನಲ್ಲಿ ತಹಸೀಲ್ದಾರರ ಕಚೇರಿಯಿಂದ ೬೫೦೦ ಅರ್ಜಿಗಳು ಎಡಿಎಲ್‌ಆರ್ ಕಚೇರಿಗೆ ತಲುಪಿವೆ. ೨೫೦೦ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಇನ್ನುಳಿದ ೪೦೦೦ ಅರ್ಜಿಗಳು ಶೀಘ್ರದಲ್ಲೆ ಆಗುತ್ತವೆ. ತಮ್ಮಲ್ಲಿ ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೆ ವೇಗವಾಗಿ ಕೆಲಸಗಳು ಆಗುತ್ತವೆ. ಇಲ್ಲವೇ ಜಿಲ್ಲಾಧಿಕಾರಿಗಳ ಬಳಿ ಹೋಗಿ ತನಿಖೆಯಾದ ನಂತರ ತಮ್ಮ ಹೆಸರಿಗೆ ಖಾತೆಗಳು ಆಗುತ್ತವೆ ಎಂದರು. ತಹಶೀಲ್ದಾರ್ ಅವರು ಕೂಡಾ ಕ್ರಿಯಾಶೀಲರಾಗಿ ಪಂಚಾಯಿತಿ, ಹೋಬಳಿ ಮಟ್ಟಕ್ಕೆ ಬಂದು ಕೆಲಸ ಮಾಡಿಕೊಡುತ್ತಿದ್ದಾರೆ. ಹಾಗಾಗಿ ಅವರಿಗೆ ಹೆಚ್ಚಿನ ಒತ್ತಡ ನೀಡದೇ ಖಾತೆ ಮಾಡಿಸಿಕೊಳ್ಳಿ ಎಂದರಲ್ಲದೇ, ಮೆಕ್ಕೆಜೋಳಕ್ಕೆ ಇತ್ತೀಚೆಗೆ ರೋಗ ಬರುತ್ತಿದೆ. ಅದಕ್ಕೆ ಸಂಬಂಧಪಟ್ಟಂತೆ ಕೃಷಿ ಇಲಾಖೆ ನೀಡುವಂತಹ ಸಲಹೆ ಸೂಚನೆಗಳನ್ನು ತಮ್ಮ ಬೆಳೆಯಲ್ಲಿ ಅಳವಡಿಸಿಕೊಳ್ಳಿ ಎಂದು ತಿಳಿಸಲಾಯಿತು. ತಹಸೀಲ್ದಾರ್ ಗೀತಾ ಮಾತನಾಡಿ, ಸರ್ಕಾರದಿಂದ ಬಂದ ಅಧಿಸೂಚನೆಯಂತೆ ನಾವು ನಮ್ಮ ತಾಲೂಕಿನ ಎಲ್ಲಾ ಹೋಬಳಿಗಳಲ್ಲಿಯೂ ಪೌತಿ ಖಾತೆ ವಿತರಣೆ ಮಾಡುತ್ತಿದ್ದೇವೆ. ಇದು ೪ನೇ ಹೋಬಳಿಯಾಗಿದೆ. ಈಗಾಗಲೇ ೩೫೦೦ ಕಡತಗಳ ಖಾತೆ ಮಾಡಿದ್ದೇವೆ. ಇನ್ನು ೫೦,೦೦೦ ಪೌತಿ ಖಾತೆ ಬಾಕಿ ಇವೆ. ರೈತರು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಇದೊಂದು ಸುಲಭದ ರೀತಿಯಾಗಿದೆ ಇಂದು ಕೂಡ ಪೌತಿ ಖಾತೆಗೆ ಅರ್ಜಿ ಸಲ್ಲಿಸಬಹುದು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಪೌತಿ ಖಾತೆಯ ಮಹತ್ವ ಹಾಗೂ ಅದನ್ನು ಮಾಡಿಸಿಕೊಳ್ಳುವ ವಿಧಾನದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಕಂದಾಯ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಸಮಸ್ಯೆಯನ್ನು ಮನವಿ ಪತ್ರಗಳನ್ನು ರೈತರು ಶಾಸಕರಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಸಾಲಗಾಮೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು,ಮುಖಂಡರು, ಗ್ರಾಮ ಲೆಕ್ಕಾಧಿಕಾರಿಗಳು, ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.