ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗೆ ।ಶ್ರೀ ಮಠದ ನದಿ ತೀರದ ಕಪ್ಪೆಶಂಕರ । ತಗ್ಗು ಪ್ರದೇಶ ಮುಳುಗಡೆ.
ತಾಲೂಕಿನಾದ್ಯಂತ ಮೃಗಶಿರ ಮಳೆ ಅಬ್ಬರ ಮುಂದುವರಿದಿದ್ದು ಭಾನುವಾರ ರಾತ್ರಿಯಿಡೀ ಮತ್ತು ಸೋಮವಾರವೂ ಸುರಿದ ಮಳೆಯಿಂದಾಗಿ ವಿವಿಧೆಡೆ ಭೂ-ಗುಡ್ಡಕುಸಿತ, ಗಾಳಿ ಮಳೆಗೆ ಮರಗಳು ರಸ್ತೆ, ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಡಿತ, ರಸ್ತೆ ಸಂಪರ್ಕ ಕಡಿತ ಸಹಿತ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ಸೋಮವಾರ ಅಂಗನವಾಡಿ, ಶಾಲೆಗಳಿಗೆ ರಜೆ ನೀಡಲಾಗಿತ್ತು. ವಾರದ ಸಂತೆ ದಿನವಾದ ಸೋಮವಾರ ಸಂತೆ ವ್ಯಾಪಾರ ವಹಿವಾಟಿಗೂ ಪರಿಣಾಮ ಬೀರಿತು. ಭಾನುವಾರ ಸಂಜೆಯಿಂದಲೇ ಮಂಗಳೂರು ಶೃಂಗೇರಿ ಸಂಪರ್ಕ ಬಂದ್ ಆಗಿದ್ದರಿಂದ ಎಸ್.ಕೆ.ಬಾರ್ಡರ್, ಕೆರೆಕಟ್ಟೆ,ನೆಮ್ಮಾರು ಮಾರ್ಗದಲ್ಲಿ ಪ್ರಯಾಣಿಕರು ಬಸ್ ಸೌಕರ್ಯವಿಲ್ಲದೇ, ವಾಹನ ಸೌಕರ್ಯವಿಲ್ಲದೇ ಪರದಾಡಬೇಕಾಯಿತು.ಕೆರೆಕಟ್ಟೆ, ಎಸ್.ಕೆ.ಬಾರ್ಡರ್, ನೆಮ್ಮಾರು, ಕಿಗ್ಗ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆ ಯಾಗುತ್ತಿದ್ದು, ತುಂಗಾನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿವೆ. ಶ್ರೀ ಮಠದ ತುಂಗಾನದಿ ತೀರದ ಕಪ್ಪೆ ಶಂಕರ ದೇಗುಲಕ್ಕೂ ನೀರು ನುಗ್ಗಿದ್ದು ಜಲಾವೃತಗೊಂಡಿದೆ. ಪ್ರವಾಹ ಪೀಡಿತ ಗಾಂಧಿ ಮೈದಾನ, ಕುರುಬಗೇರಿಗೂ ಪ್ರವಾಹದ ಭೀತಿ ಉಂಟಾಗಲಿದೆ.
ಮುಂದುವರಿದ ಭೂಮಿ ಹಾಗು ಗುಡ್ಡಕುಸಿತ:
ಆನೆಗುಂದ ಬಳಿ ರಸ್ತೆ ಸಮೀಪವೇ ಗುಡ್ಡಕುಸಿಯುತ್ತಿರುವುದರಿಂದ ಶೃಂಗೇರಿ, ಕೊಪ್ಪ, ಶಿವಮೊಗ್ಗ ಸಂಪರ್ಕಕ್ಕೆ ಅಡಚಣೆಯಾಗುತ್ತಿದೆ. ಆನೆಗುಂದ ಸಮೀಪ ರಸ್ತೆ ಅಗಲೀಕರಣದಲ್ಲಿ ಗುಡ್ಡ ಕೊರೆದ ಪರಿಣಾಮ ಈಗ ಮಳೆಯಿಂದ ಗುಡ್ಡಕುಸಿಯುತ್ತಿದ್ದು ಕೆಲಮನೆಗಳು ಕುಸಿಯುವ ಭೀತಿಯಲ್ಲಿದೆ. ವಿದ್ಯಾರಣ್ಯಪುರ ಪಂಚಾಯಿತಿ ವ್ಯಾಪ್ತಿಯ ತ್ಯಾವಣ ಬಳಿ ನಿರ್ಮಾಣ ಹಂತದ ಸಾರಿಗೆ ಸಂಸ್ಥೆ ಡಿಪೋ ಬಳಿ ಗುಡ್ಡಕುಸಿದು ಮಣ್ಣು ರಸ್ತೆ ಮೇಲೆ ಬೀಳುತ್ತಾ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
16 ಶ್ರೀ ಚಿತ್ರ 1-