ಪೂರಕ ಕಾನೂನಿಲ್ಲದೆ ವಿಶೇಷ ಕಾರ್ಯಪಡೆ ‘ಹಲ್ಲಿಲ್ಲದ ಹಾವು’: ಎಸ್‌.ಬಾಲನ್‌

KannadaprabhaNewsNetwork |  
Published : Jun 17, 2025, 03:02 AM IST
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಎಸ್‌. ಬಾಲನ್‌ | Kannada Prabha

ಸಾರಾಂಶ

ರಾಜ್ಯ ಸರ್ಕಾರ ನೂತನವಾಗಿ ರಚನೆ ಮಾಡಿರುವ ವಿಶೇಷ ಕಾರ್ಯಪಡೆಗೆ ಪೂರಕ ಕಾನೂನೇ ಇಲ್ಲದಿರುವುದರಿಂದ ಈ ಕಾರ್ಯಪಡೆ ಹಲ್ಲಿಲ್ಲದ ಹಾವಿನಂತಾಗಿದೆ ಎಂದು ಹೈಕೋರ್ಟ್‌ನ ಹಿರಿಯ ವಕೀಲ, ಆಲ್‌ ಇಂಡಿಯಾ ಪ್ರಾಕ್ಟೀಸಿಂಗ್‌ ಲಾಯರ್ಸ್‌ ಕೌನ್ಸಿಲ್‌ ಕರ್ನಾಟಕ ರಾಜ್ಯಾಧ್ಯಕ್ಷ ಎಸ್‌. ಬಾಲನ್‌ ಹೇಳಿದ್ದಾರೆ.

‘ಬಿಎನ್‌ಎಸ್‌ನಲ್ಲಿ ದ್ವೇಷ ಭಾಷಣದ ಕಾನೂನು ದುರ್ಬಲ, ರಾಜ್ಯದ ಕಾನೂನು ತಿದ್ದುಪಡಿ ಆಗಲಿ’ಕನ್ನಡಪ್ರಭ ವಾರ್ತೆ ಮಂಗಳೂರುಕೋಮು ಸಂಘರ್ಷ ನಿಗ್ರಹಕ್ಕೆ ರಾಜ್ಯ ಸರ್ಕಾರ ನೂತನವಾಗಿ ರಚನೆ ಮಾಡಿರುವ ವಿಶೇಷ ಕಾರ್ಯಪಡೆಗೆ ಪೂರಕ ಕಾನೂನೇ ಇಲ್ಲದಿರುವುದರಿಂದ ಈ ಕಾರ್ಯಪಡೆ ಹಲ್ಲಿಲ್ಲದ ಹಾವಿನಂತಾಗಿದೆ ಎಂದು ಹೈಕೋರ್ಟ್‌ನ ಹಿರಿಯ ವಕೀಲ, ಆಲ್‌ ಇಂಡಿಯಾ ಪ್ರಾಕ್ಟೀಸಿಂಗ್‌ ಲಾಯರ್ಸ್‌ ಕೌನ್ಸಿಲ್‌ ಕರ್ನಾಟಕ ರಾಜ್ಯಾಧ್ಯಕ್ಷ ಎಸ್‌. ಬಾಲನ್‌ ಹೇಳಿದ್ದಾರೆ.

ದ.ಕ.ದಲ್ಲಿ ಇತ್ತೀಚೆಗೆ ನಡೆದ ಹತ್ಯೆ ಪ್ರಕರಣಗಳು ಹಾಗೂ ಅಹಿತಕರ ಘಟನೆಗಳ ಕುರಿತು ಕೌನ್ಸಿಲ್‌ ವತಿಯಿಂದ ಸತ್ಯಶೋಧನೆಗಾಗಿ ಮಂಗಳೂರಿಗೆ ಆಗಮಿಸಿದ ಅವರು ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಕೋಮು ಸಂಘರ್ಷ ನಿಗ್ರಹಕ್ಕಾಗಿ ‘ಆಂಟಿ ಕಮ್ಯೂನಲ್‌ ಲಾ’ ಮಾಡುವುದಾಗಿ ಹೇಳಲಾಗಿದ್ದರೂ ಇದುವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಇಂಥ ಸ್ಪಷ್ಟ, ಪೂರಕ ಕಾನೂನು ಇಲ್ಲದಿದ್ದರೆ ವಿಶೇಷ ಕಾರ್ಯಪಡೆ ಮಾಡಿ ಉಪಯೋಗವಿಲ್ಲದಂತಾಗಿದೆ ಎಂದರು.

ದ್ವೇಷಭಾಷಣ ಕಾನೂನೇ ದುರ್ಬಲ:

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌)ಯಲ್ಲಿ ಸೆಕ್ಷನ್‌ 173 ಸೇರಿಸಿ ಈ ಕಾನೂನನ್ನು ದುರ್ಬಲಗೊಳಿಸಿದ್ದರಿಂದಲೇ ಕೋಮು ದ್ವೇಷ ಭಾಷಣ ಪ್ರಕರಣಗಳಲ್ಲಿ ಹೈಕೋರ್ಟ್‌ನಲ್ಲಿ ತಡೆ ಸಿಗುತ್ತಿದೆ ಎಂದು ವಿಶ್ಲೇಷಿಸಿದ ಬಾಲನ್, ಈ ಕುರಿತಾದ ಕರ್ನಾಟಕದ ಕಾನೂನಿಗೆ ಸೂಕ್ತ ತಿದ್ದುಪಡಿ ತಂದರೆ ದ್ವೇಷ ಭಾಷಣ ಮಾಡುವವರಿಗೆ ಸೂಕ್ತ ಶಿಕ್ಷೆ ನೀಡಬಹುದು. ಈ ಕಾರ್ಯ ತುರ್ತಾಗಿ ಆಗಬೇಕಿದೆ ಎಂದು ಹೇಳಿದರು.

ಸಮುದಾಯ ಟಾರ್ಗೆಟ್‌ ಕೊಲೆಗಳಿಗೆ ಯುಎಪಿಎ:

ಯಾವುದೇ ಸಮುದಾಯಗಳನ್ನು ಟಾರ್ಗೆಟ್‌ ಮಾಡುವ ಎಲ್ಲ ಕೊಲೆ ಕೃತ್ಯಗಳಲ್ಲಿ ಯುಎಪಿಎ ಕಾಯ್ದೆಯನ್ವಯ ಪ್ರಕರಣ ದಾಖಲಿಸಬೇಕು, ಇಲ್ಲವೇ ಇರುವ ಕಾನೂನಿಗೆ ತಿದ್ದುಪಡಿ ತರಬೇಕು. ಆಗ ಮಾತ್ರ ಎಲ್ಲ ರೀತಿಯ ಕೋಮು ಆಧಾರಿತ ದುಷ್ಕೃತ್ಯಗಳನ್ನು ತಡೆಯಲು ಸಾಧ್ಯ ಎಂದರು.

ದ.ಕ.ದಲ್ಲಿ ನಡೆದ ಸುಹಾಸ್‌ ಶೆಟ್ಟಿ ಪ್ರಕರಣ ವೈಯಕ್ತಿಕ ಟಾರ್ಗೆಟೆಡ್‌ ಹತ್ಯೆಯಾದರೆ, ಅಶ್ರಫ್‌ ಹಾಗೂ ಅಬ್ದುಲ್‌ ರೆಹಮಾನ್‌ ಕೊಲೆ ಸಮುದಾಯ ಟಾರ್ಗೆಟೆಡ್‌ ಆಗಿದೆ ಎಂದು ವ್ಯಾಖ್ಯಾನಿಸಿದ ಬಾಲನ್‌, ತಮ್ಮ ಸಂಘಟನೆಯ ವತಿಯಿಂದ ನಡೆಸುವ ಸತ್ಯಶೋಧನಾ ಸಮಿತಿ ಅಬ್ದುಲ್‌ ರೆಹಮಾನ್‌ ಕುಟುಂಬದವರನ್ನು ಮಾತನಾಡಿಸಿದೆ. ಸುಹಾಸ್‌ ಶೆಟ್ಟಿ ಕುಟುಂಬದವರ ಭೇಟಿ ಮಾಡಿಲ್ಲ. ಆದರೆ ವಿವಿಧ ರೀತಿಗಳಲ್ಲಿ ಮಾಹಿತಿ ಕಲೆ ಹಾಕಿದ್ದು, ಇದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಸಮಿತಿಯ ಪ್ರಮುಖರಾದ ಮಜೀದ್‌ ಖಾನ್‌, ಜಯರಾಮ್‌ ಹಾಸನ್‌, ವಾಸಿಮ್‌ ಶರೀಫ್‌, ಆಸ್ಮ ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ