ಜೂ.21 ರಂದು ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಆಚರಣೆಗೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜೂ.21 ರಂದು ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಆಚರಣೆಗೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಯೋಗ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಅವರು ಜೂ.21 ಕ್ಕೆ ‘ಯೋಗ ಫಾರ್ ಒನ್ ಅರ್ಥ್ ಒನ್ ಹೆಲ್ತ್’ ಘೋಷವಾಕ್ಯದಡಿ ಈ ಬಾರಿ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳಗ್ಗೆ 9.30 ಕ್ಕೆ ವಿದ್ಯಾರ್ಥಿಗಳು, ಸ್ವಯಂ ಸೇವಕರು, ಸಾರ್ವಜನಿಕರು ಮತ್ತು ಅಧಿಕಾರಿಗಳು ಸೇರಿದಂತೆ ಸುಮಾರು 800 ಜನರು ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು. ಜೂ.21 ರಂದು ಬೆಳಗ್ಗೆ 6.30ಕ್ಕೆ ಎಲ್ಲರೂ ಒಂದೆಡೆ ಸೇರಿ, ಬೆಳಗ್ಗೆ 6.45 ರಿಂದ 7 ಗಂಟೆವರೆಗೆ ಯೋಗ ಗೀತೆ, ಬೆಳಗ್ಗೆ 7 ರಿಂದ 7.45 ರವರೆಗೆ ಭಾರತ ಸರ್ಕಾರದ ಮಾರ್ಗಸೂಚಿಯನ್ವಯ ಯೋಗ ಪ್ರದರ್ಶನ, ಬೆಳಗ್ಗೆ 8 ರಿಂದ 8.45 ರವರೆಗೆ ವೇದಿಕೆ ಕಾರ್ಯಕ್ರಮ. 9 ರಿಂದ 10 ರವರೆಗೆ ಲಘು ಉಪಹಾರ ವ್ಯವಸ್ಥೆ ಇರುತ್ತದೆ ಎಂದರು. ಪೊಲೀಸ್ ಇಲಾಖೆಯವರು ಕಾರ್ಯಕ್ರಮ ನಡೆಯುವ ಸ್ಥಳದ ಭದ್ರತೆ , ವಾಹನ ದಟ್ಟಣೆ ನಿರ್ವಹಣೆ, ಹಾಗೂ ಮಹಾನಗರಪಾಲಿಕೆ ವತಿಯಿಂದ ಕುಡಿಯುವ ನೀರು, ಸ್ವಚ್ಚತಾ ವ್ಯವಸ್ಥೆ ಮತ್ತು ಮಾಹಿತಿ ಫಲಕ ಹಾಕಲು ಸಹಕರಿಸಬೇಕು. ಆಯುರ್ವೇದ ಮಹಾವಿದ್ಯಾಲಯ ಹಾಗೂ ಡಿಡಿಪಿಯು ಅವರು ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆ ತರಬೇಕು. ಹಾಗೂ ಯೋಗ ದಿನಾಚರಣೆಗೆ ಅಗತ್ಯವಾದ ಇತರೆ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಆಯುಷ್ ಅಧಿಕಾರಿಯಾದ ಡಾ. ಲಿಂಗರಾಜ ಎಸ್ ಹಿಂಡಸಗಟ್ಟಿ ಮಾತನಾಡಿ, ಜೂ.10 ರಿಂದ 20 ವರೆಗೆ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಲ್ಲಿ ಯೋಗ ಅಭ್ಯಾಸ ಆಯೋಜಿಸಲಾಗುತ್ತಿದೆ. ಈಗಾಗಲೇ ನಗರದ ಅನನ್ಯ, ಸರ್ವೋದಯ, ಡಿವಿಎಸ್, ಚನ್ನಬಸವೇಶ್ವರ ಮತ್ತು ಸಾಂದೀಪಿನಿ ಪ್ರೌಢಶಾಲೆಗಳಲ್ಲಿ ಯೋಗಾಭ್ಯಾಸ ಮತ್ತು ಆಯುಷ್ ಅರಿವು ಕಾರ್ಯಕ್ರಮಗಳನ್ನು ನಡೆಸಲಾಗಿದ್ದು ಇನ್ನೂ ಹಲವು ಶಾಲೆಗಳಲ್ಲಿ ನಡೆಸಲಾಗುವುದು ಎಂದರು.ಖೈದಿಗಳು, ವಿಕಲಚೇತನರು, ಎಂಎನ್‌ಸಿ ಉದ್ಯೋಗಿಗಳು, ವಾಣಿಜ್ಯ ಮಳಿಗೆ, ವಸತಿ ಸಮುಚ್ಚಗಳು, ಗ್ರಾ.ಪಮ, ನ್ಯಾಯಾಲಯಗಳು, ಸರ್ಕಾರಿ ಕಚೇರಿಗಳು ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಹಾಗೂ ಇನ್ನಿತರೆ ಸ್ಥಳಗಳಲ್ಲಿ 10 ರಿಂದ 15 ನಿಮಿಷಗಳ ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಎನ್‌ಎಸ್‌ಎಸ್, ಸ್ಕೌಟ್ ಅಂಡ್ ಗೈಡ್ಸ್, ಎನ್‌ಸಿಸಿ, ಅರಣ್ಯ ಇಲಾಖೆ ಇತರೆ ಸರ್ಕಾರಿ ಇಲಾಖೆಗಳು, ಸರ್ಕಾರೇತರ ಸಂಘ ಸಂಸ್ಥೆಗಳು ಇವರ ಸಹಯೋಗದೊಂದಿಗೆ ನಿರ್ದಿಷ್ಟಪಡಿಸಿದ ಸ್ಥಳಗಳಲ್ಲಿ ಮೊದಲಿಗೆ ಯೋಗಾಭ್ಯಾಸವನ್ನು ನಡೆಸಿ ನಂತರ ಶ್ರಮದಾನ, ಸ್ವಚ್ಚತಾ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಐಎಎಸ್ ಪ್ರೊಬೇಷನರಿ ಅಧಿಕಾರಿ ಮಹೀಂದ್ರ ಬಾಬು ಕುಮಾರ್, ಡಿ.ಹೆಚ್.ಒ ಡಾ.ನಟರಾಜ್, ಪೋಲಿಸ್ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಯೋಗ ಸಂಸ್ಥೆಗಳ ಪದಾಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.