ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಪ್ರವಾಹ ಮತ್ತು ಅತಿವೃಷ್ಟಿಗಳಂತಹ ಪರಿಸ್ಥಿತಿಗಳನ್ನು ಎದುರಿಸಲು ಅಧಿಕಾರಿಗಳು ಸರ್ವ ರೀತಿಯಿಂದ ಸನ್ನದ್ಧರಾಗಿರಬೇಕು. ನದಿ, ಹಳ್ಳಗಳು ಹಾಗೂ ತಗ್ಗು ಪ್ರದೇಶಗಳ ವ್ಯಾಪ್ತಿಯಲ್ಲಿರುವ ಗ್ರಾಮಗಳು, ರಸ್ತೆ ಹಾಗೂ ರೈಲ್ವೆ ಕ್ರಾಸಿಂಗ್‌ಗಳನ್ನು ಈಗಿನಿಂದಲೇ ಗುರುತಿಸಿ ಇಟ್ಟುಕೊಳ್ಳಬೇಕು. ನೋಡಲ್ ಅಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವ ಮೂಲಕ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಮುಂದಿನ ದಿನಗಳಲ್ಲಿ ಸನ್ನದ್ಧರಾಗಿರುವಂತೆ ಸೂಚನೆ ನೀಡಿದರು.
ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ:ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ವಿಶೇಷವಾಗಿ ಕೊಳವೆ ಭಾವಿಗಳ ಮೇಲೆ ಅವಲಂಬನೆ ಇರುವ ವಿವಿಧ ಗ್ರಾಮಗಳ ಬಗ್ಗೆ ಯೋಜನೆ ರೂಪಿಸಿ ಅತ್ಯಂತ ಕಡಿಮೆ ಜಲ ಸಂಪನ್ಮೂಲ ಇರುವ ಗ್ರಾಮಗಳಿಗೆ ಆದ್ಯತೆ ನೀಡಿ, ಆ ಗ್ರಾಮಗಳ ವ್ಯಾಪ್ತಿಯಲ್ಲಿ ಅಂತರ್ಜಲ ಹೆಚ್ಚಿಸುವಂತಹ ಸಣ್ಣಪುಟ್ಟ 10 ರಿಂದ 20 ಅಡಿ ಅಗಲವಿರುವ ಮತ್ತು ಕಾಂಕ್ರೀಟ್ ನಿಂದ ಮುಚ್ಚಳ ಇರುವಂತಹ ಗುಂಡಿಗಳನ್ನು ತೋಡುವ ಮೂಲಕ ಅಂತರ್ಜಲ ಹೆಚ್ಚಿಸಲು ವಿಶೇಷ ಗಮನ ನೀಡುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿರುವ ಕೃಷ್ಣಭಾಗ್ಯ ಜಲ ನಿಗಮ ವ್ಯಾಪ್ತಿಯ ವಿಶೇಷವಾಗಿ ಕಾಲುವೆ ವ್ಯಾಪ್ತಿ ಮತ್ತು ಉಪಕಾಲವೆಗಳ ವ್ಯಾಪ್ತಿಯಲ್ಲಿನ ಜಾಗವನ್ನು ಪರಿಶೀಲಿಸಿಕೊಳ್ಳಬೇಕು. ಅದರಂತೆ ಗ್ರಾಮ ಮತ್ತು ನಗರಗಳ ವ್ಯಾಪ್ತಿಯಲ್ಲಿರುವ ಜಾಗಕ್ಕೆ ಸಂಬಂಧಿಸಿದಂತೆ ಅಧಿಕೃತ ದಾಖಲಾತಿಗಳನ್ನು ಇಟ್ಟುಕೊಳ್ಳುವಂತೆ ತಿಳಿಸಿದರು.
ಜಲಜೀವನ ಮಿಷನ್ ಯೋಜನೆಯಡಿ 1 ರಿಂದ 4 ನೇ ಹಂತದವರೆಗಿನ ಭೌತಿಕ ಕಾಮಗಾರಿಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು. ಮೌಖಿಕವಾಗಿ ಹಿಂದೆ ಉಳಿದಿರುವ 18 ಕಾಮಗಾರಿಗಳನ್ನು ತಕ್ಷಣ ಆರಂಭಿಸಬೇಕು. ಜಲಧಾರೆ ಯೋಜನೆಯಡಿ ಜಲ ಸಂಗ್ರಹಾಗಾರಗಳ ನಿರ್ಮಾಣದಲ್ಲಿ ಸಾಧಿಸಿದ ಪ್ರಗತಿ ಮತ್ತು ಇತರೆ ಕಾಮಗಾರಿಗಳ ಮತ್ತು ನಿವೇಶನಗಳ ಸಮಸ್ಯೆಯ ವರದಿಯನ್ನು ನೀಡಲು ಸೂಚಿಸಿದರು.
ಜಿಲ್ಲೆಯಲ್ಲಿ ಸಾಮಾಜಿಕ ಅರಣ್ಯೀಕರಣಕ್ಕೆ ಹೆಚ್ಚಿನ ಗಮನ ನೀಡಬೇಕು. ಪಶು ಸಂಗೋಪನೆ ಇಲಾಖೆಯ ಪಶು ವೈದ್ಯಾಧಿಕಾರಿಗಳಿಗೆ ಎಲೆಕ್ಟ್ರಿಕಲ್ ಸ್ಕೂಟಿ ಒದಗಿಸುವ ಕುರಿತು ಪ್ರಸ್ತಾವನೆ ಸಲ್ಲಿಸಬೇಕು. ಇದರಿಂದ ರೈತರ ಜಾನುವಾರುಗಳಿಗೆ ಸಕಾಲಕ್ಕೆ ಸ್ಪಂದಿಸಲು ನೆರವಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯ ಕಾಮಗಾರಿಗಳ ನಿರ್ವಹಿಸುವವರ ಕುರಿತು ವಿಶೇಷ ಗಮನ ನೀಡುವಂತೆ ಅವರು ಸೂಚನೆ ನೀಡಿ ರೈತರಿಗೆ ನೀಡಲಾಗುತ್ತಿರುವ ಪರಿಹಾರಕ್ಕೆ ಸಂಬಂಧಿಸಿದಂತೆ ಪಹಣಿಗೆ ಆಧಾರ್ ಲಿಂಕ್ ಮಾಡುವ ಕಾರ್ಯವನ್ನು ಮುಂಬರುವ ಒಂದು ವಾರದೊಳಗಾಗಿ ಪೂರ್ಣಗೊಳಿಸಲು ಸಂಬಂಧಿಸಿದ ತಹಸೀಲ್ದಾರರಿಗೆ ಸೂಚಿಸಿದರು.