ಕೌಶಲ್ಯವರ್ಧಿತ ಶಿಕ್ಷಣ ಮನುಷ್ಯನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ: ಡಾ.ಎಂ.ಸಿ.ಸುಧಾಕರ್ ಅಭಿಮತ

KannadaprabhaNewsNetwork | Published : Jun 12, 2024 12:31 AM

ಸಾರಾಂಶ

ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಯಾಗುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವುದೇ ಮುಂದಿನ ಸವಾಲಾಗಿದೆ. ಇದಕ್ಕೆ ವಿದ್ಯಾವಂತ ಯುವಕರ ಸಹಕಾರ ಬೇಕಿದೆ. ಅಧಿಕಾರಿಗಳು ಮತ್ತು ಶಿಕ್ಷಣ ತಜ್ಞರ ಜೊತೆಗೆ ಯುವಶಕ್ತಿಯ ಬೆಂಬಲವಿದ್ದರೆ ಉತ್ತಮವಾದುದನ್ನು ಸಾಧಿಸಬಹುದು.

ಕನ್ನಡಪ್ರಭ ವಾರ್ತೆ ನಾಗಮಂಗಲಕೌಶಲ್ಯವರ್ಧಿತ ಶಿಕ್ಷಣ ಮಾತ್ರ ಮನುಷ್ಯನನ್ನು ಬಹು ಎತ್ತರಕ್ಕೆ ಕೊಂಡೊಯ್ಯಬಲ್ಲದು. ತಂದೆ ತಾಯಿಯರ ಸಮ್ಮುಖದಲ್ಲಿ ವಿದ್ವಜ್ಜನರ ಅಮೃತ ಹಸ್ತದಿಂದ ಪಡೆಯುವ ಪದವಿ ಪಾರಿತೋಷಕ ಅಮೃತಕ್ಕೆ ಸಮಾನ ಎಂದು ವಿಶ್ವವಿದ್ಯಾಲಯದ ಪರ ಸಂದರ್ಶಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.ತಾಲೂಕಿನ ಬಿ.ಜಿ. ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಆಡಿಟೋರಿಯಂನಲ್ಲಿ ಮಂಗಳವಾರ ಆಯೋಜಿಸಿದ್ದ 4ನೇ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಉನ್ನತ ವ್ಯಾಸಂಗ ಮುಗಿಸಿ ಪದವಿ ಪಡೆಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳ ಪ್ರಮುಖ ಘಟ್ಟವೇ ಈ ಘಟಿಕೋತ್ಸವ ಎಂದರು.ರಾಜ್ಯ ಸರ್ಕಾರವು ವೈದ್ಯರುಗಳನ್ನು ಒಪ್ಪಂದದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಸಿದ್ಧವಿದೆ. ಆದರೆ, ನೇಮಕಗೊಂಡ ವೈದ್ಯರು ದೂರದ ಚಿಕ್ಕಪುಟ್ಟ ಪಟ್ಟಣಗಳಲ್ಲಿ ಕರ್ತವ್ಯ ನಿರ್ವಹಿಸಲು ಮನಸ್ಸು ಮಾಡಬೇಕಿದೆ ಎಂದು ತಿಳಿಸಿದರು.ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಯಾಗುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವುದೇ ಮುಂದಿನ ಸವಾಲಾಗಿದೆ. ಇದಕ್ಕೆ ವಿದ್ಯಾವಂತ ಯುವಕರ ಸಹಕಾರ ಬೇಕಿದೆ. ಅಧಿಕಾರಿಗಳು ಮತ್ತು ಶಿಕ್ಷಣ ತಜ್ಞರ ಜೊತೆಗೆ ಯುವಶಕ್ತಿಯ ಬೆಂಬಲವಿದ್ದರೆ ಉತ್ತಮವಾದುದನ್ನು ಸಾಧಿಸಬಹುದು ಎಂದು ಹೇಳಿದರು.ವಿದ್ಯಾರ್ಥಿಗಳಿಗೆ ಇದು ಭವಿಷ್ಯದ ಬುನಾದಿ. ನಾನು ಮೂಲತಃ ಪ್ರಾಧ್ಯಾಪಕನಾಗಿ ಶಿಕ್ಷಣ ಕ್ಷೇತ್ರದ ಏರಿಳಿತಗಳನ್ನು ಕಂಡವನು. ಕಠಿಣ ಪರಿಶ್ರಮದಿಂದ ಕಲಿತವನು ಮಾತ್ರ ಇಂದು ಚಿನ್ನದ ಪದಕ ರ್‍ಯಾಂಕ್ ಇತ್ಯಾದಿ ಸನ್ಮಾನಕ್ಕೆ ಭಾಜನನಾಗುತ್ತಾನೆಯೇ ಹೊರತು ಸೋಮಾರಿಗಲ್ಲ ಎಂಬುದನ್ನು ಹತ್ತಿರದಿಂದ ಬಲ್ಲವನು. ಜೀವನ ಎಂದರೇನು ಎಂದು ತಿಳಿಯುವ ಪ್ರಮುಖ ಕ್ಷಣ ಇದಾಗಿದೆ ಎಂದರು.ವಿದೇಶದಲ್ಲಿ ತಮ್ಮ ಮಗನ ಘಟಿಕೋತ್ಸವದಲ್ಲಿ ಪೋಷಕನಾಗಿ ಭಾಗವಹಿಸಿದ ಸುಂದರ ಅನುಭವವನ್ನು ಸ್ಮರಿಸಿಕೊಂಡ ಸಚಿವರು ಪದವಿಗಳಿಸಿದ ಎಲ್ಲಾ ಪದವಿದರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಗುರಿ ಶ್ರದ್ಧೆಯಿದ್ದರೇ ಮಾತ್ರಾ ಯಶಸ್ಸು:

ಬಾಹ್ಯಾಕಾಶ ಆಯೋಗದ ಸದಸ್ಯ, ಇಸ್ರೋ ಸಂಸ್ಥೆ ಮಾಜಿ ಅಧ್ಯಕ್ಷ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಡಾ.ಎ.ಎಸ್.ಕಿರಣ್‌ಕುಮಾರ್ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆಯುತ್ತಿದೆ. ಅವುಗಳ ಮಾಹಿತಿ ಪಡೆದು ದೇಶಕ್ಕೆ ಯಾವ ಕೊಡುಗೆ ನೀಡಬಹುದು ಎಂಬುದರ ಕುರಿತು ವಿದ್ಯಾರ್ಥಿಗಳು ಗಂಭೀರ ಚಿಂತನೆ ನಡೆಸಬೇಕು. ಪದವಿ ಪಡೆದ ವಿದ್ಯಾರ್ಥಿಗಳು ಸಾಧನೆಯ ಗುರಿಯೊಂದಿಗೆ ಶ್ರದ್ಧೆಯಿಂದ ಮುಂದೆ ನಡೆಯಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು. ಸಮಾರಂಭದ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಹಾಗೂ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ನಿರ್ಮಲಾನಂದನಾಥಸ್ವಾಮೀಜಿ ಮಾತನಾಡಿ, ಕೃತಕ ಬುದ್ಧಿಮತ್ತೆಯೇ ಪ್ರಚಲಿತವಿರುವ ಪ್ರಸ್ತುತ ಯುಗದಲ್ಲಿ ಔಪಚಾರಿಕ ಶಿಕ್ಷಣದ ಜೊತೆಗೆ ನೂತನ ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುವುದು ಬಹುಮುಖ್ಯವಾಗಿದೆ ಎಂದರು.ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳು ನೀಡಿರುವ ಸಾ ವಿದ್ಯಾ ಯಾ ವಿಮುಕ್ತಯೇ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುತ್ತಿರುವ ಈ ವಿಶ್ವವಿದ್ಯಾಲಯವು ಲಕ್ಷಾಂತರ ವಿದ್ಯಾರ್ಥಿಗಳ ಜ್ಞಾನ-ಕಲಿಕೆಯ ಕೇಂದ್ರವಾಗಿದೆ ಎಂದು ತಿಳಿಸಿದರು.ಆಧ್ಯಾತ್ಮಿಕ ಸಂಸ್ಕಾರದೊಂದಿಗೆ ಕಲಿತ ಜ್ಞಾನ ಚಿಗುರುಗಳು ದೇಶಾದ್ಯಂತ ಕಲಿಕಾ ಸೌರಭವನ್ನು ಹಂಚುತ್ತಿರುವುದು ಬಹಳ ಖುಷಿ ತರುವ ವಿಷಯವಾಗಿದೆ. ೨೫ ವರ್ಷದ ಕಲಿಕೆ ಭವಿಷ್ಯದ 75 ವರ್ಷಗಳ ಸಾರ್ಥಕ ಜೀವನದ ಮೈಲಿಗಲ್ಲುಗಳಾಗುತ್ತವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.ದೇಶದಲ್ಲಿ ಜನಸಂಖ್ಯೆ ಜೊತೆಗೆ ವಿದ್ಯಾವಂತರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಆದರೆ, ಉದ್ಯೋಗಾವಕಾಶಗಳ ಹುಡುಕಾಟವನ್ನು ಇಲ್ಲಿಂದಲೇ ಆರಂಭಿಸಬೇಕೆನ್ನುವುದು ಪ್ರಮುಖ ವಿಷಯವೇ ಆಗಿದೆ. ಇಂದು ಘಟಿಕೋತ್ಸವದಲ್ಲಿ ತಮ್ಮ ಮಕ್ಕಳ ಸಾಧನೆಯನ್ನು ವೀಕ್ಷಿಸಲು ಆಗಮಿಸಿರುವ ಪೋಷಕರ ನಿರೀಕ್ಷೆ ತುಸು ಹೆಚ್ಚೇ ಇರುತ್ತದೆ. ಅವರ ಆಕಾಂಕ್ಷೆಗಳನ್ನು ಸಾಕಾರಗೊಳಿಸಿ ಎಂದರು. ಗುರುಕುಲ ಪದ್ಧತಿಯು ದೂರವಾಗಿ ರೋಬೋಟ್ ಯುಗ ನಮ್ಮ ಮುಂದಿದೆ. ಅಧ್ಯಾಪಕರ ಮಾರ್ಗದರ್ಶನ ಜೊತೆಗೆ ತಂದೆ ತಾಯಂದಿರ ಆಶೀರ್ವಾದದಿಂದ ಪಡೆದ ಶಿಕ್ಷಣ, ಜ್ಞಾನದಿಂದ ಹೊಸ ಸಮಾಜವನ್ನು ಕಟ್ಟಿ, ದೇಶದ ಉತ್ತಮ ಪ್ರಜೆಗಳಾಗಿ ಎಂದು ವಿದ್ಯಾರ್ಥಿಗಳಿಗೆ ಆಶೀರ್ವದಿಸಿದರು. ಘಟಿಕೋತ್ಸವ ಸಮಾರಂಭದಲ್ಲಿ 5 ಪಿಎಚ್‌ಡಿ, 137 ಚಿನ್ನದ ಪದಕ ಸೇರಿದಂತೆ ಒಟ್ಟು 1200 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ. ರಾಜಕುಮಾರ್‌ ಖತ್ರಿ, ಡಾ.ಸತೀಶ್ ಕುಮಾರ್ ಭಂಡಾರಿ, ಕುಲಕರ್ಣಿ, ಆದಿಚುಂಚನಗಿರಿ ವಿವಿ ಕುಲಪತಿ ಡಾ.ಎಂ.ಎ.ಶೇಖರ್, ಕುಲಸಚಿವರಾದ ಡಾ.ಪ್ರಾಣೇಶ್ ಗುಡೂರು, ಡಾ.ಸಿ.ಕೆ.ಸುಬ್ಬರಾಯ, ಟ್ರಸ್ಟಿ ದೇವರಾಜ್, ಸಿಇಓ ಡಾ. ಎನ್.ಎಸ್. ರಾಮೇಗೌಡ, ಡಾ.ಚಂದ್ರಶೇಖರ ಶೆಟ್ಟಿ, ಡಾ.ಎಂ.ಜಿ.ಶಿವರಾಮು, ಡಾ.ಎ.ಟಿ.ಶಿವರಾಮು ಹಾಗೂ ಹಲವರು ಇದ್ದರು.

Share this article