ಕನ್ನಡಪ್ರಭ ವಾರ್ತೆ ಬಂಟ್ವಾಳ
ತಾಲೂಕಿನಲ್ಲಿ ಮಳೆ ಹಾಗೂ ನೆರೆಯಿಂದ ಜೀವ ಹಾನಿಯಾಗದಂತೆ ಅಧಿಕಾರಿಗಳು ಸದಾ ಜಾಗೃತರಾಗಿರಬೇಕು, ಸಾರ್ವಜನಿಕರಿಂದ ದೂರುಗಳು ಬಾರದಂತೆ ತಂಡವಾಗಿ ಕಾರ್ಯನಿರ್ವಹಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸೂಚಿಸಿದರು.ಗುರುವಾರ ಬಂಟ್ವಾಳ ತಾಲೂಕು ಪಂಚಾಯಿತಿಯ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆದ ಮಳೆ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆ ಹಾನಿ ಅಥವಾ ಇನ್ನಿತರ ಅನಾಹುತಗಳ ಬಗ್ಗೆ ಪಿಡಿಒ ಅಥವಾ ಕೆಳಹಂತದ ಅಧಿಕಾರಿಗಳು ನೀಡಿದ ವರದಿಯಲ್ಲಿ ಲೋಪವಿದ್ದರೆ ತಹಸೀಲ್ದಾರರು ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅದು ಬಿಟ್ಟು ಮೂರನೇ ವ್ಯಕ್ತಿ ಹೇಳಿದಾಕ್ಷಣ ಅದನ್ನು ಫಲಾನುಭವಿಗಳ ಆಯ್ಕೆ ಅಥವಾ ಸವಲತ್ತುಗಳನ್ನು ತಡೆಹಿಡಿಯುವುದು ಯಾವ ನೀತಿ. ಇಂತಹ ಬ್ಲ್ಯಾಕ್ ಮೇಲ್ ಗೆ ಅಧಿಕಾರಿಗಳು ಹೆದರಬೇಕಾಗಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು.ದುಸ್ಥಿತಿಯಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಅಗತ್ಯವಿದ್ದರೆ ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲಾ ಕೊಠಡಿಯಲ್ಲಿ ಅಂಗನವಾಡಿ ನಡೆಸುವಂತೆ ಶಾಸಕರು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಡಿಪಿಒ, ಅಂಗನವಾಡಿ ಮಕ್ಕಳನ್ನು ಸರ್ಕಾರಿ ಪ್ರಾಥಮಿಕ ಶಾಲೆಗೆ ಸ್ಥಳಾಂತರಕ್ಕೆ ಶಿಕ್ಷಣ ಇಲಾಖೆ ಅನುಮತಿ ನೀಡುವುದಿಲ್ಲ ಎಂದು ಸಭೆಗೆ ತಿಳಿಸಿದಾಗ ಗರಂ ಆದ ಶಾಸಕ ರಾಜೇಶ್ ನಾಯ್ಕ್ ಅಂಗನವಾಡಿ ಮಕ್ಕಳನ್ನು ಪ್ರಾಥಮಿಕ ಶಾಲಾ ಮಕ್ಕಳ ಜೊತೆ ಬೆರೆಯಲು ಬಿಟ್ಟಾಗ ಮಕ್ಕಳ ಮಾನಸಿಕ ಮತ್ತು ಬೌದ್ದಿಕ ಬೆಳವಣಿಗೆಯು ಸಾಧ್ಯವಾಗುತ್ತದೆ. ವಾಸ್ತವ ಅರಿತುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಬಿಟ್ಟು ಕಚೇರಿಯಲ್ಲಿ ಕುಳಿತು ಅದೇಶ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.
ಸಾಂಕ್ರಾಮಿಕ ರೋಗಗಳ ಬಗ್ಗೆ ನಿಗಾ ವಹಿಸಿ: ಮಳೆಗಾಲದಲ್ಲಿ ವಿಷಜಂತು ಕಡಿತಕ್ಕೊಳಗಾದರೆ ಅಂತಹ ಸಂದರ್ಭದಲ್ಲಿ ಸೂಕ್ತವಾದ ಚಿಕಿತ್ಸೆಗಾಗಿ ಔಷಧವನ್ನು ದಾಸ್ತಾನು ಮಾಡಿಕೊಂಡಿರಬೇಕು. ತಾಲೂಕಿನಲ್ಲಿ ಡೆಂಘೀ, ಮಲೇರಿಯಾದಂತಹ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಹೆಚ್ಚಿನ ನಿಗಾವಹಿಸುವಂತೆ ಹಾಗೂ ಎಲ್ಲೆಡೆ ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದರು.ತಾಲೂಕಿನಲ್ಲಿ ಇತ್ತೀಚೆಗೆ ಗಾಳಿ, ಮಳೆಗೆ ಸುಮಾರು 2.74 ಹೇಕ್ಟರ್‌ನಲ್ಲಿ ಅಡಕೆ ಮರಗಳಿಗೆ ಹಾನಿಯಾಗಿದ್ದು, ಕಳೆದವಾರ ಸುಂಟರಗಾಳಿಯಿಂದ ಇರ್ವತ್ತೂರು ಗ್ರಾಮದಲ್ಲಿ ಅಪಾರ ಪ್ರಮಾಣದಲ್ಲಿ ಅಡಕೆ ಸಹಿತ ತೆಂಗಿನ ಮರಗಳಿಗೆ ಹಾನಿಯಾಗಿದೆ ಎಂದು ತೋಟಗಾರಿಕಾ ಅಧಿಕಾರಿ ಸಭೆಗೆ ತಿಳಿಸಿದರು.
ಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ನೇತ್ರಾವತಿ ನದಿಯಿಂದ ಪಂಚಾಯತ್ ಗಮನಕ್ಕೆ ತಾರದೆ ಪುತ್ತೂರು ಕ್ಷೇತ್ರಕ್ಕೆ ನೀರು ಪೂರೈಕೆಗಾಗಿ ಜಾಕ್ ವೆಲ್ ಕಾಮಗಾರಿ ನಡೆಸಲಾಗುತ್ತಿರುವ ಬಗ್ಗೆ ಶಾಸಕ ರಾಜೇಶ್ ನಾಯ್ಕ್ ಅವರು ಅಧಿಕಾರಿಗಳಲ್ಲಿ ಮಾಹಿತಿ ಪಡೆದರು. ಪುತ್ತೂರಿಗೆ ನೀರು ಪೂರೈಸುವುದಕ್ಕೆ ನಮ್ಮ ಅಭ್ಯಂತರವಿಲ್ಲ ಆದರೆ ಇಲ್ಲಿನ ಗ್ರಾ.ಪಂ.ವ್ಯಾಪ್ತಿ ಹಾಗೂ ನರಿಕೊಂಬು ಗ್ರಾಮಸ್ಥರಿಗೆ ಮೊದಲ ಅದ್ಯತೆಯಲ್ಲಿ ನೀರು ಪೂರೈಸಿ ಆಬಳಿಕ ಪುತ್ತೂರಿಗೆ ನೀರು ಪೂರೈಸಿ ಎಂದು ತಾಕೀತು ಮಾಡಿದರು.ವೇದಿಕೆಯಲ್ಲಿ ತಹಸೀಲ್ದಾರ್ ಅರ್ಚನಾ ಭಟ್, ತಾ.ಪಂ. ಪ್ರಭಾರ ಇ.ಒ ಮಹೇಶ್ ಹೊಳ್ಳ, ಉಪಸ್ಥಿತರಿದ್ದರು.
ಮಂಗಳವಾರ ಪ್ರತ್ಯೇಕ ಸಭೆಶಾಲಾ ಮಕ್ಕಳಿಗೆ ಬೆಳಗ್ಗೆ ಮತ್ತು ಸಂಜೆ ಸಮಯಕ್ಕೆ ಸರಿಯಾಗಿ ಸರ್ಕಾರಿ ಬಸ್‌ಗಳ ಅಲಭ್ಯತೆ, ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರದ ಕೊರತೆ, ಧರ್ಮಸ್ಥಳ ರೂಟ್‌ನಲ್ಲಿ ಅಸಮರ್ಪಕ ಸಂಚಾರ ಹೀಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಈ ಕುರಿತಂತೆ ಮಂಗಳವಾರದಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲು ತೀರ್ಮಾನಿಸಲಾಯಿತು. ಶಕ್ತಿಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಎಂದು ಕೆಎಸ್ ಆರ್ ಟಿಸಿ ಅಧಿಕಾರಿಗಳು ಉತ್ತರಿಸಿದರು.
ಪ್ಲೆಕ್ಸ್ ವಿರುದ್ದ ಕ್ರಮಕ್ಕೆ ಸೂಚನೆ:ಬಿ.ಸಿ.ರೋಡು ಸಹಿತ ಗ್ರಾ.ಪಂ.ವ್ಯಾಪ್ತಿಯಲ್ಲಿ ಪ್ಲೆಕ್ಸ್ ಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ ಶಾಸಕರು ನಿರ್ದಿಷ್ಠ ದಿನಗಳಿಗೆ ಶುಲ್ಕ ವಿಧಿಸಿ ಅಳವಡಿಸಲು ಅನುಮತಿ ನೀಡಬೇಕು,ಬಳಿಕ ಅದನ್ನು ತೆರವುಗೊಳಿಸಬೇಕು, ಪ್ಲೆಕ್ಸ್ ನಲ್ಲಿರುವ ಪ್ರಚೋದನಕಾರಿ ಕಂಟೆಂಟ್ ಗಳಿದ್ದರೆ ಪೊಲೀಸರು ಕಾನೂನು ಕ್ರಮಕೈಗೊಳ್ಳಬೇಕು,ಖುದ್ದು ಶಾಸಕರ ಭಾವಚಿತ್ರವುಳ್ಳ ಪ್ಲಕ್ಸ್ ಗಳಿದ್ದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಹಾಗೂ ಮುಖ್ಯಾಧಿಕಾರಿಯವರಿಗೆ ಸೂಚಿಸಿದರು.