ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ವಿದ್ಯಾರ್ಥಿಗಳಲ್ಲಿ ಮತ್ತು ಯುವಜನತೆಯಲ್ಲಿ ದೇಶ ಮೊದಲು ಎಂಬ ಭಾವನೆಯನ್ನು ನಡೆಸಿ ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ಧಾರಿಯನ್ನು ನಿರ್ವಹಿಸುವಂತಾಗಬೇಕು ಎಂದು ಸ್ವಾತಂತ್ರ್ಯೋತ್ಸವ ಸಮಾರಂಭದ ಮುಖ್ಯ ಭಾಷಣಕಾರ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಈಶ ಅವರು ಹೇಳಿದ್ದಾರೆ. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಸುಂಟಿಕೊಪ್ಪ ಗ್ರಾ.ಪಂ. ವತಿಯಿಂದ ಶುಕ್ರವಾರ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ 79ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಅವರು ಸ್ವಾತಂತ್ರ್ಯ ಬಂದ ಕೆಲವು ದಶಕಗಳಲ್ಲಿ ದೇಶ ಬಡತನ, ಆರೋಗ್ಯ ಸಂಬಂಧಿತ ಸಮಸ್ಯ, ವೈಜ್ಞಾನಿಕ ತಂತ್ರಜ್ಞಾನದ ಕೊರತೆ ಆಹಾರದ ಸಮಸ್ಯೆ ಹೀಗೆ ಹಿಂದುಳಿದ ದೇಶವಾಗಿತ್ತು. ಆದರೆ ಇಂದು ದೇಶದ ಪರಿಸ್ಥಿತಿಯನ್ನು ಅವಲೋಕನ ಮಾಡಿದಾಗ ನಾವು ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಕೂಡ ವಿಶ್ವ ಮಟ್ಟದ ಸಾಧನೆಯನ್ನು ಮಾಡಿದ್ದೇವೆ. ದೇಶವು ಕೈಗೊಂಡ ಚಂದ್ರಯಾನ ಇದಕ್ಕೆ ಉದಾಹರಣೆಯಾಗಿದ್ದು, ಮುಂದಿನ ದಿನಗಳಲ್ಲಿ ಸೂರ್ಯನತ್ತ ಸಂಶೋಧನೆಯನ್ನು ಕೈಗೊಳ್ಳಲಿದ್ದೇವೆ ಎಂದು ಈಶ ನುಡಿದರು.ನಮ್ಮ ರಾಷ್ಟ್ರಪತಿಗಳಾಗಿದ್ದ ಭಾರತ ರತ್ನ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ವೈಜ್ಞಾನಿಕ ತಂತ್ರಜ್ಞಾನದ ಪಿತಾಮಹರಾಗಿ ನಾನಾ ರೀತಿಯ ಸಂಶೋಧನೆಗಳ ಮೂಲಕ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ನಡೆಸುವ ಬಗ್ಗೆ ಕನಸುಗಳನ್ನು ಕಂಡಿದ್ದು ಮಕ್ಕಳು ಮತ್ತು ಯುವಜನತೆ ವೈಜ್ಞಾನಿಕ ಸಂಶೋಧನೆಗಳಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಎಂದು ಅವರು ಕರೆ ನೀಡುತ್ತಿದ್ದನ್ನು ಈಶ ಉಲ್ಲೇಖಿಸಿದರು. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಾನತೆಯ ಹಾದಿಯಲ್ಲಿ ದೇಶ ಮುನ್ನಡೆಯುವಂತಾಗಬೇಕು. ಪ್ರತಿಯೊಬ್ಬರೂ ದೇಶ ಮೊದಲು ಎಂಬ ಭಾವನೆಯಿಂದ ಕೆಲಸ ಮಾಡಬೇಕು ಎಂದು ಈಶ ಹೇಳಿದರು.
ಮೊದಲಿಗೆ ಗುಂಡುಗುಟ್ಟಿ ಮಂಜನಾಥಯ್ಯ ಮಿನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಗ್ರಾ.ಪಂ.ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಶುಭಾಶಯಗಳನ್ನು ಕೋರಿ ಎಲ್ಲಾ ಕ್ಷೇತ್ರದ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳಿದರು. ಸುಂಟಿಕೊಪ್ಪ ಗ್ರಾ.ಪಂ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಕ್ಕಳಿಗೆ ಹಿತನುಡಿಗಳಾನ್ನಾಡಿದರು. ವಿವಿಧ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ, ಪ್ರಮಾಣ ಪತ್ರ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನಿವೃತ್ತ ಯೋಧ ಓಡಿಯಪ್ಪನ ಮಂಜುನಾಥ್ ಅವರನ್ನು ಶಾಲುಹೊದೆಸಿ ಫಲ ತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಈ ಕಾರ್ಯಕ್ರಮದ ಮೊದಲಿಗೆ ಗ್ರಾ.ಪಂ.ಗಣಕಯಂತ್ರ ಸಿಬ್ಬಂದಿ ಸಂದ್ಯಾ ಪ್ರಾರ್ಥಿಸಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಾರ್ಯದರ್ಶಿ ರಹೆನಾ ಫೈರೋಜ್ ಸ್ವಾಗತಿಸಿ, ರಫೀಕ್‌ಖಾನ್ ನಿರೂಪಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರಾದ ಪಿ.ಎಫ್.ಸಬಾಸ್ಟೀನ್, ಆಲಿಕುಟ್ಟಿ, ಪ್ರಸಾದ್ ಕುಟ್ಟಪ್ಪ, ಶಬ್ಬೀರ್, ವಸಂತಿ, ನಾಗರತ್ನ, ಮಾಜಿ ಅಧ್ಯಕ್ಷ ಕೆ.ಇ.ಕರೀಂ, ಬಿ.ಐ.ಭವಾನಿ, ಪಂಚಾಯಿತಿ ಲೆಕ್ಕಪರಿಶೋಧಕಿ ಚಂದ್ರಕಲಾ, ಬಿಲ್‌ಕಲೆಕ್ಟರ್ ಶ್ರೀನಿವಾಸ್, ವಾಹನಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ವಿವಿಧ ಶಾಲಾ-ಕಾಲೇಜುಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಗೀತಾ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸ್ತ್ರೀ ಶಕ್ತಿ ಸಂಘಗಳ ಪ್ರತಿನಿಧಿಗಳು ಇದ್ದರು.