ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಗ್ರಾಮೀಣ ಪ್ರದೇಶದಲ್ಲಿ ರೈತರು ಹೊರ ಜಗತ್ತಿನ ಮೇಲೆ ಅವಲಂಬನೆಯಾಗದೇ, ಉಪಜೀವನಕ್ಕೆ ತಮ್ಮ ಹೊಲಗಳಲ್ಲಿ ಆಹಾರ ಬೆಳೆಗಳನ್ನು ಬೆಳೆಯಬೇಕು. ತಮ್ಮಲ್ಲಿಯೇ ವಸ್ತುಗಳನ್ನು ಉತ್ಪಾದಿಸಿ ಗ್ರಾಮಗಳು ಸ್ವಾವಲಂಬಿಗಳಾಗಲಿ ಎಂದು ಮಹಾರಾಷ್ಟ್ರದ ಕನ್ನೇರಿ ಮಠದ ರಾಷ್ಟ್ರಸಂತ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಹೇಳಿದರು.ಸಮೀಪದ ಹಂಸನೂರ- ರಾಘಾಪೂರ ಗ್ರಾಮದ ಶಿವಾನಂದ ಮಠದಲ್ಲಿ ಗುರುವಂದನೆ ಹಾಗೂ ಸ್ವಾವಲಂಬಿ ಗ್ರಾಮ ಚಿಂತನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ರೈತರು ಈ ಜಗತ್ತಿನ ಅನ್ನದಾತರು. ಆದರೆ ರೈತರು ಕೂಡಾ ಸದ್ಯ ಕೃಷಿಯನ್ನು ಕಲುಷಿತಗೊಳಿಸಿದ್ದಾರೆ. ಸಾವಯವ ಕೃಷಿಗೆ ಮಹತ್ವ ನೀಡುತ್ತಿಲ್ಲ. ಇದರಿಂದ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದೆ. ತಮ್ಮಲ್ಲಿಯೇ ಸಿಗುವ ವಸ್ತುಗಳ ಮೂಲಕ ಉಪಯುಕ್ತ ಗೊಬ್ಬರ, ಬೀಜ ತಯಾರಿಸಿ ಕೃಷಿ ಮಾಡಬೇಕು. ಹೊರಗಿನ ತಿಂಡಿ, ತಿನಿಸು ಸೇವಿಸಿ ಮನುಷ್ಯ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾನೆ. ಯುವಕರು ಗುಟಕಾ, ಮದ್ಯಪಾನ, ಸಿಗರೇಟ ಹೀಗೆ ಹಲವು ವ್ಯಸನಗಳಿಗೆ ದಾಸರಾಗುತ್ತಿದ್ದಾರೆ. ಇದು ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಗ್ರಾಮಗಳಲ್ಲಿ ಶೌಚಾಲಯ ನಿರ್ಮಿಸಿ ಮಹಿಳೆಯರ ಮರ್ಯಾದೆ ಉಳಿಸಬೇಕು. ಪ್ರತಿಯೊಬ್ಬರೂ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ. ರೈತರು ಹೆಚ್ಚು ಇಳುವರಿ ಪಡೆದು ಉತ್ತಮ ಆದಾಯ ಗಳಿಸಬೇಕು ಎಂದರು.
ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಪ್ರತಿಯೊಬ್ಬರೂ ಸ್ವಾವಲಂಬಿಯಾಗಿ ಬದುಕು ನಡೆಸಬೇಕು. ಮಕ್ಕಳಿಗೆ ಶಿಕ್ಷಣ ನೀಡಿ ಅವರಿಗೆ ಮನೆಯಲ್ಲಿ ಹಿರಿಯರನ್ನು ಗೌರಿಸುವ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ಅದರಿಂದ ಮಕ್ಕಳು ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಲು ಸಾಧ್ಯ ಎಂದರು.ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿ, ಸ್ವಾವಲಂಬಿ ಗ್ರಾಮಗಳಾಗಲು ಎಲ್ಲರೂ ಕೃಷಿ ಕಾಯಕಕ್ಕೆ ಮಹತ್ವ ನೀಡಬೇಕು. ಸಾವಯವ ಗೊಬ್ಬರ, ಬೀಜ ಬಳಸಬೇಕು. ಮಣ್ಣಿನ ರಕ್ಷಣೆ ಮಾಡಬೇಕು. ಮೂಢನಂಬಿಕೆ, ಕಂದಾಚಾರದಿಂದ ದೂರವಿದ್ದು ಮಕ್ಕಳಲ್ಲಿ ಆಧ್ಯಾತ್ಮದ ಅರವು, ಶಿಕ್ಷಣದ ಹಸಿವು ಹೆಚ್ಚಿಸಬೇಕೆಂದರು.
ಮಾಜಿ ಶಾಸಕ ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಬಿಜೆಪಿ ಮಂಡಳ ಅಧ್ಯಕ್ಷ ನಾಗರಾಜ ಕಾಚಟ್ಟಿ, ಶಿರೋಳದ ಶಂಕರಾರೂಢ ಶ್ರೀಗಳು, ಶ್ರೀಜಗದ್ಗುರು ಗುರುಸಿದ್ದ ಪಟ್ಟದಾರ್ಯ ಶ್ರೀಗಳು, ಶ್ರೀ ಒಪ್ಪತ್ತೇಶ್ವರ ಶ್ರೀಗಳು, ಚಿಕ್ಕಾಲಗುಂಡಿಯ ಶರಣಾನಂದ ಶ್ರೀಗಳು, ಶಿರೂರದ ಶ್ರೀಚಿನ್ಮಯಾನಂದ ಶ್ರೀಗಳು, ಕುಮಾರ ಮಹಾರಾಜರು, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ, ಎಸ್.ಎಸ್.ಮಿಟ್ಟಲಕೋಡ, ಕುಮಾರಗೌಡ ಜನಾಲಿ, ಹಂಸನೂರ ಗ್ರಾಪಂ ಅಧ್ಯಕ್ಷೆ ಆಶಾ ಚಿಂತಾಕಲ್ಲ, ಉಮೇಶ ಮುಗ್ಗಜೋಳ, ಹನಮವ್ವ ದಾದಿ, ಯಮನಪ್ಪ ಬಂಡಿವಡ್ಡರ ಇತರರು ಇದ್ದರು.ಇದೇ ಸಂದರ್ಭದಲ್ಲಿ ಶ್ರೀಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸೇರಿ ಎಲ್ಲ ಶ್ರೀಗಳಿಗೆ ಹಂಸನೂರ ಶಿವಾನಂದ ಮಠದ ಬಸವರಾಜೇಂದ್ರ ಶ್ರೀಗಳು ಪಾದಪೂಜೆ ನೆರವೇರಿಸಿ ಸನ್ಮಾನಿಸಿದರು. ಬಸವರಾಜ ಕುಂಬಾರ, ಪ್ರಭು ಕುಂಬಾರ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ರೈತರು, ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.