ನಗುನಗುತ್ತ ಬಾಳಿ ಶತಾಯುಷಿಗಳಾಗಿರಿ: ಗಂಗಾವತಿ ಪ್ರಾಣೇಶ್

KannadaprabhaNewsNetwork |  
Published : Jan 16, 2024, 01:51 AM ISTUpdated : Jan 16, 2024, 03:55 PM IST
ಜಾತ್ರಾ ಮಹೋತ್ಸವದಲ್ಲಿ ಗಂಗಾವತಿಯ ಪ್ರಾಣೇಶ್ ಮಾತನಾಡಿದರು. | Kannada Prabha

ಸಾರಾಂಶ

ಮನುಷ್ಯನ ಬದುಕು ಯಾವಾಗಲೂ ಚಿಂತೆಯಿಂದ ಕೂಡಿದ ಒಂದು ಸಂತೆಯಾಗಿದೆ. ಹೀಗಾಗಿ ಅವನು ನಗುವುದನ್ನೇ ಕಡಿಮೆ ಮಾಡಿದ್ದಾನೆ. ಇದರಿಂದ ಅವನಿಗೆ ಬಿಪಿ, ಶುಗರ್ ಮತ್ತಿತರ ಕಾಯಿಲೆಗಳು ಅಂಟಿಕೊಳ್ಳುತ್ತಿವೆ. 

ನರೇಗಲ್ಲ: ಮನುಷ್ಯನ ಬದುಕು ಯಾವಾಗಲೂ ಚಿಂತೆಯಿಂದ ಕೂಡಿದ ಒಂದು ಸಂತೆಯಾಗಿದೆ. ಹೀಗಾಗಿ ಅವನು ನಗುವುದನ್ನೇ ಕಡಿಮೆ ಮಾಡಿದ್ದಾನೆ. ಇದರಿಂದ ಅವನಿಗೆ ಬಿಪಿ, ಶುಗರ್ ಮತ್ತಿತರ ಕಾಯಿಲೆಗಳು ಅಂಟಿಕೊಳ್ಳುತ್ತಿವೆ. 

ಇದಾವುದೂ ಬೇಡವೆಂದರೆ ನಗುನಗುತ್ತ ಬಾಳಿರಿ ಶತಾಯುಷಿಗಳಾಗಿರಿ ಎಂದು ನಾಡಿನ ಖ್ಯಾತ ನಗೆ ಭಾಷಣಕಾರ ಗಂಗಾವತಿ ಪ್ರಾಣೇಶ್ ಹೇಳಿದರು.

ಅವರು ಸಮೀಪದ ಹಾಲಕೆರೆ ಗ್ರಾಮದ ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವದಲ್ಲಿ ನಡೆದ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗುವೆಂಬ ವರವನ್ನು ದೇವರು ಮನುಷ್ಯನಿಗೆ ಕೊಡದೆ ಹೋಗಿದ್ದರೆ ಏನಾಗುತ್ತಿತ್ತು ಎಂಬುದನ್ನು ಎಲ್ಲರೂ ಒಂದು ಕ್ಷಣ ಯೋಚಿಸಬೇಕು. ಭಗವಂತ ಮನುಷ್ಯನಿಗೆ ಎರಡು ದೊಡ್ಡ ವರಗಳನ್ನು ನೀಡಿದ್ದಾನೆ. 

ಒಂದು ಮರೆವು, ಇನ್ನೊಂದು ನಗು. ಇವೆರಡನ್ನೂ ಅವನು ನೀಡದೆ ಹೋಗಿದ್ದರೆ ಮನುಷ್ಯನ ಜೀವನವು ಕತ್ತಲೆಯ ಕೂಪವಾಗಿರುತ್ತಿತ್ತು. ಭಗವಂತ ನೀಡಿರುವ ಈ ವರಗಳನ್ನು ಬಳಸಿಕೊಂಡು ಮನುಷ್ಯ ನಿಶ್ಚಿಂತನಾಗಿ ಜೀವನ ಸಾಗಿಸುವುದನ್ನು ಕಲಿಯಬೇಕೆಂದು ತಿಳಿಸಿದರು.

ಸಾಮಾನ್ಯವಾಗಿ ನಾವುಗಳು ಜಾತ್ರಾ ಕಾರ್ಯಕ್ರಮಗಳಿಗೆ ಬರುವುದನ್ನು ನಿಲ್ಲಿಸಿ ಅದೆಷ್ಟೋ ದಿನಗಳಾದವು. ಆದರೆ ಇಲ್ಲಿನ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮಿಗಳವರ ಪ್ರೀತಿಯ ಆಹ್ವಾನಕ್ಕೆ ಮಣಿದು ನಾವಿಲ್ಲಿ ಬಂದಿದ್ದೇವೆ. 

ಇಲ್ಲಿನ ಜನರ ಶಿಸ್ತು, ಸಂಯಮ ಮತ್ತು ನಮ್ಮ ಮಾತುಗಳನ್ನು ಕೇಳಬೇಕೆನ್ನುವ ಅವರ ಕುತೂಹಲ ನಾವಿಲ್ಲಿಗೆ ಬಂದದ್ದು ಸಾರ್ಥಕ ಎಂದೆನಿಸಿದೆ. ಇಂತಹ ಪ್ರೇಕ್ಷಕ ವರ್ಗ ಇದ್ದರೆ ಖಂಡಿತವಾಗಿಯೂ ಕಲಾವಿದರಿಗೆ ಉತ್ತಮ ಗೌರವ ಸಿಕ್ಕೇ ಸಿಗುತ್ತದೆ ಎಂದರು.

ಈ ವೇಳೆ ಮುಪ್ಪಿನ ಬಸವಲಿಂಗ ಸ್ವಾಮಿಗಳನ್ನೊಳಗೊಂಡಂತೆ ಅನೇಕ ಹರಗುರು ಚರ ಮೂರ್ತಿಗಳು ಉಪಸ್ಥಿತರಿದ್ದರು. ಕುಷ್ಟಗಿಯ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಸಹ ಪ್ರಾಣೇಶ್ ಮತ್ತು ಅವರ ತಂಡದವರ ಹಾಸ್ಯದ ಮಾತುಗಳನ್ನು ಆನಂದಿಸಿದರು.

ನಂತರ ಪ್ರಾಣೇಶ್ ಹೇಳಿದ ಹಾಸ್ಯ ಪ್ರಸಂಗಗಳು, ನರಸಿಂಹ ಜೋಷಿಯವರ ಮಿಮಿಕ್ರಿ, ಹಾಡು, ಅಭಿನಯ ಎಲ್ಲವೂ ನೆರೆದ ಪ್ರೇಕ್ಷಕರ ಮನಸೂರೆಗೊಂಡವು. ನರಸಿಂಹ ಜೋಷಿಯವರ ಮಿಮಿಕ್ರಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಅನೇಕರು ಬಂದು ಹೋದರು. 

ಇನ್ನೋರ್ವ ಹಾಸ್ಯ ಕಲಾವಿದ ಬಸವರಾಜ ಮಹಾಮನಿಯವರೂ ಸಹ ಅನೇಕ ಹಾಸ್ಯ ಪ್ರಸಂಗಗಳನ್ನು ಹೇಳಿ ಜನರನ್ನು ನಗಿಸಿದರು. ಶಿಕ್ಷಕ ಆರ್.ಕೆ.ಬಾಗವಾನ ನಿರೂಪಿಸಿದರು. ಪ್ರಾಧ್ಯಾಪಕ ಡಾ. ಕಲ್ಲಯ್ಯ ಹಿರೇಮಠ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ವಂದಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ