ಜಿಲ್ಲೆಯ ಪೊಲೀಸ್ ಅಧಿಕಾರಿಗಳೊಂದಿಗೆ ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕಿ ಸಭೆ ಕನ್ನಡಪ್ರಭ ವಾರ್ತೆ ಬಳ್ಳಾರಿ
ಜಿಲ್ಲೆಯಾದ್ಯಂತ ಪ್ರಸಕ್ತ ಸಾಲಿನಲ್ಲಿ ಆಚರಿಸುವ ಗಣೇಶ ಹಬ್ಬದ ಸಂದರ್ಭದಲ್ಲಿ ಸೂಕ್ತ ಅಗತ್ಯ ಮುಂಜಾಗ್ರತಾ ಕ್ರಮ ಪಾಲಿಸುವಂತೆ ಸೂಚಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು ಎಂದು ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕಿ ವರ್ತಿಕಾ ಕಟಿಯಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಜಿಲ್ಲೆಯ ಪೊಲೀಸ್ ಅಧಿಕಾರಿಗಳೊಂದಿಗೆ ನಗರದ ಎಸ್‌ಪಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣೇಶ ಪ್ರತಿಷ್ಠಾಪನೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮಗಳ ಕುರಿತಂತೆ ಸಂಬಂಧಪಟ್ಟ ಇಲಾಖೆಗಳಿಂದ ಪೂರ್ವಾನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ಒಂದು ವೇಳೆ ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.ಬಳ್ಳಾರಿ ವಲಯದ ಎಲ್ಲಾ ಜಿಲ್ಲೆಯ ಪೊಲೀಸ್ ಠಾಣೆ, ವೃತ್ತ ಕಚೇರಿ, ಉಪ-ವಿಭಾಗದ ಮತ್ತು ಪೊಲೀಸ್ ಅಧೀಕ್ಷಕರ ಮಟ್ಟದಲ್ಲಿ ಎಲ್ಲಾ ಧರ್ಮದ ಮುಖಂಡರುಗಳನ್ನು ಕರೆದು ಶಾಂತಿ ಸಭೆ ನಡೆಸಿ, ಸಭೆಗೆ ಹಾಜರಾದವರ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆ ಇತ್ಯಾದಿಗಳ ಜೊತೆಗೆ ಅವರ ಸಹಿ ಪಡೆದು, ಅವಶ್ಯಕ ಸಲಹೆ ಸೂಚನೆಗಳನ್ನು ನೀಡಿ, ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಹೊಂದಿರಬೇಕು ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಆಕ್ಷೇಪಾರ್ಹ, ಪ್ರಚೋದನಕಾರಿ ಸಂದೇಶ, ಚಿತ್ರ ಮತ್ತು ವಿಡಿಯೋಗಳ ಬಗ್ಗೆ ಗಮನಹರಿಸಿ. ಅಂತಹವುಗಳು ಕಂಡುಬಂದಲ್ಲಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಳವಡಿಸುವ ಬ್ಯಾನರ್ಸ್, ಬಂಟಿಂಗ್ಸ್, ಫ್ಲೆಕ್ಸ್ ಗಳಿಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಪಿಡಿಓಗಳ ಜೊತೆ ಸಭೆ ನಡೆಸಿ ಅನುಮತಿ ನೀಡುವ ಮೊದಲು ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಎನ್‌ಓಸಿ ಪಡೆದು ಪರವಾನಿಗೆ ನೀಡಬೇಕು ಎಂದು ಹೇಳಿದರು.
ಗಣೇಶ ಮೂರ್ತಿಗಳ ಮೆರವಣಿಗೆ ಸಮಯದಲ್ಲಿ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಪಟಾಕಿ ಸಿಡಿಸಲು ಪೂರ್ವಾನುಮತಿ ಪಡೆದುಕೊಳ್ಳದೇ ಇರುವವರಿಗೆ ಪಟಾಕಿ ಬಳಕೆಗೆ ಅವಕಾಶ ನೀಡಬಾರದು. ಯಾವುದೇ ಇತರೇ ಧರ್ಮದ ಧಾರ್ಮಿಕ ಕೇಂದ್ರಗಳ ಮುಂದೆ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪಟಾಕಿ ಸಿಡಿಸದಂತೆ ಸೂಚಿಸಬೇಕು ಎಂದರು.ಗಣೇಶ ಮೂರ್ತಿಗಳ ಮೆರವಣಿಗೆ ಸಮಯದಲ್ಲಿ ವಿಡಿಯೋ ಗ್ರಾಫಿಂಗ್ ಮಾಡಬೇಕು. ಸಿಬ್ಬಂದಿ ಸಮವಸ್ತ್ರದಲ್ಲಿದ್ದು ಸಾರ್ವಜನಿಕವಾಗಿ ಕಾಣಿಸುವಂತೆ ಹಾಜರಿದ್ದು ಕರ್ತವ್ಯ ನಿರ್ವಹಿಸಬೇಕು. ಮೆರವಣಿಗೆಯ ಸಮಯದಲ್ಲಿ ಸಾರ್ವಜನಿಕರಿಗೆ ತಾವು ಸಿಸಿಟಿವಿ ಕ್ಯಾಮೆರಾದಲ್ಲಿ ಹಾಗೂ ವಿಡಿಯೋ ಗ್ರಾಫಿಂಗ್‌ನಲ್ಲಿ ಸೆರೆಯಾಗುತ್ತಿದ್ದೀರಿ ಎಂದು ಮನವರಿಕೆ ಮಾಡಿಕೊಡಬೇಕು ಎಂದರು.
ಕಳೆದ ವರ್ಷಗಳಲ್ಲಿ ಗಣೇಶ ಪ್ರತಿಷ್ಠಾಪಿಸುವ ಸಂಬಂಧ ಗಲಾಟೆ ನಡೆದ ಪ್ರದೇಶಗಳಲ್ಲಿ ಪ್ರಸ್ತುತದಲ್ಲಿ ಸೂಕ್ತ ರೀತಿಯ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪತ್ರ ಪಡೆದಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಅನುಮತಿ ಪಡೆಯದೇ ಇದ್ದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ರಾತ್ರಿ ಗಸ್ತು ಚೆಕ್ಕಿಂಗ್, ಉಸ್ತುವಾರಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಪ್ರಮುಖ ಗಣೇಶ ಪ್ರತಿಷ್ಠಾಪನಾ ಸ್ಥಳಗಳು, ಮಸೀದಿಗಳು ಮತ್ತು ಇತರ ಪ್ರಮುಖ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕು. ಭೇಟಿ ನೀಡಿದ ಕುರಿತಾದ ಮಾಹಿತಿಯನ್ನು ಕಂಟ್ರೋಲ್ ರೂಂಗೆ ರವಾನಿಸಬೇಕು. ರಾತ್ರಿ ಗಸ್ತು ಅಧಿಕಾರಿಗಳು ತಮ್ಮ ವಾಹನಗಳ ಟಾಪ್ ಲೈಟ್‌ಗಳನ್ನು ಕಡ್ಡಾಯವಾಗಿ ಬಳಸಬೇಕು. ತಮ್ಮ ಗಸ್ತು ಪುಸ್ತಕದಲ್ಲಿ ನಮೂದು ಮಾಡಬೇಕು. ಈ ಕುರಿತು ಪಿಐ, ಜಿಲ್ಲಾ ನಿಸ್ತಂತು ಘಟಕ ದವರು ರಿಜಿಸ್ಟರ್‌ನಲ್ಲಿ (ಆಯಾ ದಿನದ) ನಮೂದಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ. ರವಿಕುಮಾರ್, ಡಿವೈಎಸ್ಪಿ, ವಿವಿಧ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ಹಾಗೂ ಇತರರಿದ್ದರು.ವಿಸರ್ಜನೆ ದಿನದಂದು ಕಟ್ಟೆಚ್ಚರ ವಹಿಸಿ:ಗಣೇಶ ಮೂರ್ತಿ ವಿಸರ್ಜನೆಯ ದಿನಗಳಂದು ಮೆರವಣಿಗೆಯ ಸಮಯದಲ್ಲಿ ಎಸ್ಪಿ, ಎಎಸ್ಪಿ, ಡಿಎಸ್ಪಿ, ಸಿಪಿಐ, ಪಿಐ, ಪಿಎಸ್‌ಐ ಅಧಿಕಾರಿಗಳು ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಾದ ದೇವಸ್ಥಾನ, ಚರ್ಚ್, ಮಸೀದಿ ಇತ್ಯಾದಿ ಜನಸಂದಣಿ ಪ್ರದೇಶಗಳಲ್ಲಿ ಹಾಜರಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚರ ವಹಿಸಬೇಕು ಎಂದು ಐಜಿಪಿ ವರ್ತಿಕಾ ಕಟಿಯಾರ್ ಹೇಳಿದರು.ಗಣೇಶ ಪ್ರತಿಷ್ಠಾಪನಾ ಸ್ಥಳಗಳಲ್ಲಿ, ವಿಸರ್ಜನಾ ಮೆರವಣಿಗೆ ಮಾರ್ಗ ಮತ್ತು ವಿಸರ್ಜನಾ ಸ್ಥಳಗಳಲ್ಲಿ ಸಿಸಿಕ್ಯಾಮೆರಾ ಅಳವಡಿಸಬೇಕು. ವಿಸರ್ಜನಾ ಮೆರೆವಣಿಗೆ ಮಾರ್ಗ ಹಾಗೂ ವಿಸರ್ಜನಾ ಸ್ಥಳಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಬೇರೆ ಬೇರೆ ವಿಸರ್ಜನಾ ಮಾರ್ಗ ಹಾಗೂ ಸ್ಥಳ ನಿಗದಿಪಡಿಸಬೇಕು. ವಿಸರ್ಜನೆ ಸ್ಥಳಗಳ ಹತ್ತಿರ ಸಾಕಷ್ಟು ಬೆಳಕಿನ ವ್ಯವಸ್ಥೆ ಮಾಡಬೇಕು ಎಂದರು.ಗಣೇಶ ವಿಸರ್ಜನಾ ಮೆರವಣಿಗೆ ಮಾರ್ಗದಲ್ಲಿನ ವ್ಯವಸ್ಥೆಗಳ ಕುರಿತು ಸ್ಥಳೀಯ ಆಡಳಿತ ಸಂಸ್ಥೆ, ವಿದ್ಯುತ್ ವಿತರಣಾ ಸಂಸ್ಥೆ, ಅಗ್ನಿಶಾಮಕ ದಳ ಹಾಗೂ ಇತರೆ ಇಲಾಖೆಗಳೊಂದಿಗೆ ಸಂಪರ್ಕದಲ್ಲಿದ್ದು, ಅವರಿಂದ ಅಗತ್ಯ ಸಹಕಾರ ಪಡೆದು ಯಾವುದೇ ಅವ್ಯವಸ್ಥೆ ಉಂಟಾಗದಂತೆ ನೋಡಿಕೊಳ್ಳಬೇಕು. ಸಂಬಂಧಪಟ್ಟ ಪೊಲೀಸ್ ಅಧೀಕ್ಷಕರು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಕೃತಕ ವಿಸರ್ಜನಾ ಸ್ಥಳ ನಿರ್ಮಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.