ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಜಮೀನಿಗೆ ಹೋಗಿ ವಾಪಸ್ ಮನೆಗೆ ಬರುವಾಗ ಯುವಕನ ಮೇಲೆ ಕರಡಿಗಳು ದಾಳಿ ನಡೆಸಿ ಗಂಭೀರ ಗಾಯಗೊಳಿಸಿರುವ ಘಟನೆ ತಾಲೂಕಿನ ಕೆ. ಕಲ್ಲಹಳ್ಳಿ ಗ್ರಾಮದ ಹೊರವಲಯದಲ್ಲಿ ಶನಿವಾರ ನಡೆದಿದೆ.ರಂಗಾಪುರ ಗ್ರಾಮದ ಯುವಕ ಆನಂದ (28) ಗಾಯಗೊಂಡಿದ್ದಾರೆ. ಅವರು ಕೆ. ಕಲ್ಲಹಳ್ಳಿ ಗ್ರಾಮದಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದು, ಶನಿವಾರ ಬೆಳಗ್ಗೆ ಗ್ರಾಮದ ಹೊರವಲಯದಲ್ಲಿ ಇರುವ ಜಮೀನಿಗೆ ನೀರು ಹಾಯಿಸಲು ಹೋಗಿದ್ದರು. ವಾಪಸ್ ಮನೆಗೆ ಬರುವ ವೇಳೆ ದಾರಿ ಮಧ್ಯೆ ಇರುವ ಹಳ್ಳದಲ್ಲಿದ್ದ ಎರಡು ಕರಡಿಗಳು ಏಕಾಏಕಿ ದಾಳಿ ನಡೆಸಿವೆ. ಮುಖ ಹಾಗೂ ತಲೆಗೆ ಗಂಭೀರ ಗಾಯಗಳಾಗಿವೆ. ಯುವಕ ಚೀರಾಟ ಕೇಳಿದ ಅಕ್ಕಪಕ್ಕದ ಹೊಲದ ರೈತರು ಬಂದು ಕರಡಿಗಳನ್ನು ಓಡಿಸಿದ್ದಾರೆ.ರೈತರು, ಗ್ರಾಮಸ್ಥರು ಹರಪನಹಳ್ಳಿ ಸಾರ್ವಜನಿಕರ ಆಸ್ಪತ್ರೆಗೆ ಆನಂದ ಅವರನ್ನು ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕಳುಹಿಸಲಾಗಿದೆ.
ಕೆ. ಕಲ್ಲಹಳ್ಳಿ, ಹಂಪಾಪುರ, ಮಜ್ಜಿಗೇರಿ, ಅರೆ ಮಜ್ಜಿಗೇರಿ, ಇಟ್ಟಿಗುಡಿ, ಬೇವಿನಹಳ್ಳಿ ಸುತ್ತಮುತ್ತಲ ಗ್ರಾಮಗಳು ಅರಣ್ಯಪ್ರದೇಶಕ್ಕೆ ಹೊಂದಿಕೊಂಡಿದೆ. ಅಲ್ಲಿನ ರೈತರಿಗೆ ಹೊಲದಲ್ಲಿ ಕೆಲಸ ಮಾಡುವುದು ಕಷ್ಟಕರವಾಗಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಗಳನ್ನು ಹಿಡಿದು ಅರಣ್ಯಪ್ರದೇಶಕ್ಕೆ ಬಿಡಬೇಕು ಹಾಗೂ ಸೂಕ್ತ ರಕ್ಷಣೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ಹರಪನಹಳ್ಳಿ ವಲಯ ಅರಣ್ಯಾಧಿಕಾರಿ ಮಲ್ಲಪ್ಪ, ಕೂಡಲೇ ಕರಡಿಗಳನ್ನು ಅಲ್ಲಿಂದ ಅರಣ್ಯ ಪ್ರದೇಶಕ್ಕೆ ಓಡಿಸಲು 12 ಸಿಬ್ಬಂದಿ ನಿಯೋಜಿಸಲಾಗುವುದು. ಗ್ರಾಮದ ಜನತೆಗೆ ತೊಂದರೆಯಾಗದಂತೆ ರಕ್ಷಣೆ ನೀಡಲು ಕ್ರಮವಹಿಸಲಾಗುವುದು. ಯುವಕನ ಮೇಲೆ ಕರಡಿ ದಾಳಿ ನಡೆದಿರುವ ಕುರಿತು ಹಾಗೂ ಚಿಕಿತ್ಸೆಯ ವರದಿ ತರಿಸಿಕೊಂಡು ಪರಿಹಾರ ಕೊಡಿಸಲಾಗುವುದು ಎಂದರು.