ಹಲ್ಲೆ ಮಾಡಿದ್ದ ಗೆಳೆಯನ ಅಟ್ಟಾಡಿಸಿಹತ್ಯೆ ಮಾಡಿದ್ದ 4 ಸ್ನೇಹಿತರ ಬಂಧನ

KannadaprabhaNewsNetwork |  
Published : Oct 04, 2023, 01:00 PM IST

ಸಾರಾಂಶ

ಹಲ್ಲೆ ಮಾಡಿದ್ದ ಗೆಳೆಯನ ಅಟ್ಟಾಡಿಸಿಹತ್ಯೆ ಮಾಡಿದ್ದ 4 ಸ್ನೇಹಿತರ ಬಂಧನ

ಕನ್ನಡಪ್ರಭ ವಾರ್ತೆ ಬೆಂಗಳೂರು ಇತ್ತೀಚೆಗೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಸ್ನೇಹಿತನನ್ನೇ ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಟಿಪ್ಪುನಗರದ ಖಾಸೀಫ್‌, ಅರ್ಮಾನ್‌, ಶಬ್ಬೀರ್‌, ಶಫೀ ಬಂಧಿತರು. ಆರೋಪಿಗಳು ಸೆ.22ರಂದು ಮಧ್ಯಾಹ್ನ 1.30ರ ಸುಮಾರಿಗೆ ಬಸವನಗುಡಿಯ ಖಾಜಿ ಸ್ಟ್ರೀಟ್‌ ನಿವಾಸಿ ಅರ್ಬಾಜ್‌(26) ಎಂಬಾತನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆಗೈದು ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹತ್ಯೆಯಾದ ಅರ್ಬಾಜ್‌ ಮತ್ತು ಆರೋಪಿಗಳು ಸ್ನೇಹಿತರಾಗಿದ್ದಾರೆ. ಈ ಹಿಂದೆ ಸರಗಳವು, ಕಳ್ಳತನ, ಸುಲಿಗೆ, ದರೋಡೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇತ್ತೀಚೆಗೆ ಅರ್ಬಾಜ್‌ನನ್ನು ಬಿಟ್ಟು ಈ ನಾಲ್ವರು ಆರೋಪಿಗಳು ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ವಿಚಾರಣೆ ವೇಳೆ ಅರ್ಬಾಜ್‌ ಹೆಸರು ಹೇಳಿದ್ದರು. ಪ್ರಕರಣದಲ್ಲಿ ಭಾಗಿ ಆಗದಿದ್ದರೂ ಪೊಲೀಸರ ಬಳಿ ಹೆಸರು ಹೇಳಿ ಪ್ರಕರಣದಲ್ಲಿ ಸಿಲುಕಿಸಿದ್ದಕ್ಕೆ ಆರೋಪಿಗಳ ವಿರುದ್ಧ ಆಕ್ರೋಶಗೊಂಡಿದ್ದ ಅರ್ಬಾಜ್‌, ಜಯನಗರದ ಬಳಿ ನಾಲ್ವರಿಗೂ ಹಲ್ಲೆ ಮಾಡಿದ್ದ. ಇದರಿಂದ ರೊಚ್ಚಿಗೆದ್ದ ಆರೋಪಿಗಳು, ಅರ್ಬಾಜ್‌ ಹತ್ಯೆಗೆ ಹೊಂಚು ಹಾಕುತ್ತಿದ್ದರು. ಅದರಂತೆ ಸೆ.22ರಂದು ಅರ್ಬಾಜ್‌ ಮನೆ ಬಳಿ ನಿಂತಿರುವಾಗ ಎರಡು ದ್ವಿಚಕ್ರ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳು, ಏಕಾಏಕಿ ಮಾರಸ್ತ್ರಗಳಿಂದ ಅರ್ಬಾಜ್‌ ಮೇಲೆ ಹಲ್ಲೆಗೈದು ಪರಾರಿಯಾಗಿದ್ದರು. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಅರ್ಬಾಜ್‌ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ---

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ