ಹೊನ್ನಾವರ: ಬೇಡ್ತಿ ಮತ್ತು ಅಘನಾಶಿನಿ ‌ನದಿ ತಿರುವು ಯೋಜನೆಯನ್ನು ಸಂಘಟಿತವಾಗಿ ನಿಲ್ಲಿಸಬೇಕು. ಈ ಯೋಜನೆ ಪರಿಸರಕ್ಕೆ ಮಾರಕ ಎಂದು ಸೋಂದಾ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.

ಅವರು ತಾಲೂಕಿನ ಮಂಕಿಯ ಬೋಳೆಬಸ್ತಿ ಹೊನ್ನಮಹಾಸತಿ ದೇವಾಲಯದ ಪುನರ್ ಪ್ರತಿಷ್ಠಾ ಮಹೋತ್ಸವದ ಪ್ರಧಾನ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.

ಪಶ್ಚಿಮಘಟ್ಟದ ಜೀವ ಸಂಕುಲಕ್ಕೆ ಅಪಾಯಕಾರಿ ಹಾಗೂ ಸಮುದ್ರದ ಉಪ್ಪು ನೀರು ಅವ್ಯಾಹತವಾಗಿ ಒಳಹೊಕ್ಕು ಕೃಷಿಗೆ ಅಂತರ್ಜಲಕ್ಕೆ ತೊಂದರೆಯಾಗುತ್ತಿದೆ ಎಂದರು. ಅಲ್ಲದೆ ಧರ್ಮಾಚರಣೆ ಕಡಿಮೆಯಾಗುತ್ತಿರುವ ಕಾರಣದಿಂದ ಜನರು ಮಾದಕ ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಧರ್ಮಾಚರಣೆ ಜತೆಗೆ ಉತ್ತಮ ಹವ್ಯಾಸಗಳು ಭಗವದ್ಗೀತೆ ಪಠಣ ಹಾಗೂ ರಾಮಾತಾರಕ ಮಂತ್ರದ ಪಠಣ ದಿನನಿತ್ಯದ ಕಾಯಕವಾಗಲಿ ಎಂದು ಉಪದೇಶಿಸಿದರು.

ಸಭೆಯಲ್ಲಿ ಎ.ಆರ್. ನಾಯ್ಕ, ರವಿರಾಜ ನಾಯ್ಕ, ಬಾಳಸು ಬಾಬಯ್ಯ ನಾಯ್ಕ, ಅರ್ಚಕರಾದ ಕಟ್ಟೆ ತಿಮ್ಮಣ್ಣ ಭಟ್ ಉಪಸ್ಥಿತರಿದ್ದರಿದ್ದರು.

ರವಿರಾಜ ನಾಯ್ಕ ಸ್ವಾಗತಿಸಿದರು. ಎ.ಆರ್. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು ₹2.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ದೇಗುಲಕ್ಕೆ ನಿರ್ಮಾಣದಲ್ಲಿ ತನುಮನಧನದಿಂದ ಸಹಕರಿಸಿದ ಸರ್ವರನ್ನು ಸ್ಮರಿಸುತ್ತಾ, ದೇವಾಲಯ ನಿರ್ಮಾಣದ ಹಾದಿಯನ್ನು ಸಂಕ್ಷಿಪ್ತವಾಗಿ ತೆರೆದಿಟ್ಟರು. ಕಟ್ಟೆ ತಿಮ್ಮಣ್ಣ ಭಟ್ಟ, ಸ್ಥಳ ದಾನಿಗಳಾದ ಪ್ರಭಾಕರ ಪ್ರಭು, ಬಾಲಯ್ಯ ಮಂಜುನಾಥ ನಾಯ್ಕ ಹಾಗೂ ದೇಗುಲಕ್ಕೆ ಸಹಕಾರ ನೀಡಿದ ಯುವ ಧುರಿಣ ಮಾಸ್ತಪ್ಪ ನಾಯ್ಕ ಬಲಸೆ ಅವರನ್ನು ಗುರುಗಳು ಸನ್ಮಾನಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀಗಳು ಮಂತ್ರಾಕ್ಷತೆ ನೀಡಿದರು. ಆನಂದ ನಾಯ್ಕ ಹಾಗೂ ಅಣ್ಣಪ್ಪ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.


ದೇವಾಲಯಗಳು ದೈವ ಪ್ರಜ್ಞೆಯ ಜತೆಗೆ ಸಂಸ್ಕಾರ ಬೆಳೆಸುವ ಸ್ಥಾನ

ಹೊನ್ನಾವರ ತಾಲೂಕಿನ ಮಂಕಿಯ ಬೋಳೆಬಸ್ತಿ ಗ್ರಾಮದಲ್ಲಿ ನಡೆದ ಶ್ರೀ ಹೊನ್ನ ಮಹಾಸತಿ ದೇವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವದ ದಿನವಾದ ಶುಕ್ರವಾರ ಸಂಜೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಭೇಟಿ ನೀಡಿ ಆಶೀರ್ವಚನ ನೀಡಿದರು.ಹೊನ್ನಮಹಾಸತಿ ದೇವಾಲಯದ ಸಮುಚ್ಚಯಗಳನ್ನು ವೀಕ್ಷಣೆ ಮಾಡಿ ಆಶೀರ್ವಚನ ನೀಡಿದ ಅವರು, ಊರಿನ ಯುವಕರೆಲ್ಲಾ ಸೇರಿ ಇಂತಹ ಭವ್ಯ ದೇವಾಲಯ ಕಟ್ಟಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ದೇವಾಲಯಗಳು ಜನರಲ್ಲಿ ದೈವ ಪ್ರಜ್ಞೆಯ ಜತೆಗೆ ಸಂಸ್ಕಾರ ಬೆಳೆಸುವ ಸ್ಥಾನ, ಧಾರ್ಮಿಕ ಕಾರ್ಯದ ಜತೆಗೆ ಸಾಮಾಜಿಕ ಜಾಗೃತಿ ಮಾಡುವಂತಾಗಲಿ ಎಂದರು.ಈ ವೇಳೆ ಸ್ಥಳೀಯ ಮುಖಂಡರಾದ ಚಂದ್ರಶೇಖರ ಜೆ. ಗೌಡ, ಎ.ಆರ್. ನಾಯ್ಕ, ರವಿರಾಜ ನಾಯ್ಕ ಉಪಸ್ಥಿತರಿದ್ದರು.