ಉದ್ಯೋಗ ಅರಸುವ ಬದಲು ಉದ್ಯೋಗದಾತರಾಗಿ

KannadaprabhaNewsNetwork |  
Published : Sep 24, 2026, 01:15 AM IST
23ಕೆಆರ್ ಎಂಎನ್ 4.ಜೆಪಿಜಿವಿಜಯ (ಎಂ.ಆರ್.ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ 74ನೇ ರಾಮನಗರ ಶಾಖೆಯನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಮನಗರ: ರಾಜಕಾರಣ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಸಾಧನೆಗೆ ಗಾಡ್‌ಫಾದರ್‌ಗಳು ಬೇಕಾಗಿಲ್ಲ. ಸಾಧಿಸುವ ಗುರಿ ಮತ್ತು ಛಲವಿದ್ದರೆ ಸಾಧನೆ ಸಾಧ್ಯ. ಉದ್ಯೋಗ ಅರಸಿಕೊಂಡು ಹೋಗುವ ಬದಲು ಉದ್ಯೋಗದಾತರಾಗಬೇಕು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು

ರಾಮನಗರ: ರಾಜಕಾರಣ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಸಾಧನೆಗೆ ಗಾಡ್‌ಫಾದರ್‌ಗಳು ಬೇಕಾಗಿಲ್ಲ. ಸಾಧಿಸುವ ಗುರಿ ಮತ್ತು ಛಲವಿದ್ದರೆ ಸಾಧನೆ ಸಾಧ್ಯ. ಉದ್ಯೋಗ ಅರಸಿಕೊಂಡು ಹೋಗುವ ಬದಲು ಉದ್ಯೋಗದಾತರಾಗಬೇಕು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ನಗರದಲ್ಲಿ ವಿಜಯ (ಎಂಆರ್‌ಎನ್) ಸೌಹಾರ್ದ ಕ್ರೆಡಿಟ್ ಸಹಕಾರ ಸಂಘದ 74ನೇ ರಾಮನಗರ ಶಾಖೆ ಉದ್ಘಾಟಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೆಲ್ಲರು ಸಹ ತಮ್ಮ ಸ್ವಸ್ವಾಮರ್ಥ್ಯದಿಂದಲೇ ಉನ್ನತ ಸ್ಥಾನ ಅಲಂಕರಿಸಿದವರು. ಛಲ ಇದ್ದರೆ ನಿಶ್ಚಿತವಾಗಿ ಯಶಸ್ಸು ಸಾಧಿಸುತ್ತೀರಾ ಎಂದರು.

ತಾವು ಕೈಗಾರಿಕೆಯನ್ನು ಸ್ಥಾಪಿಸಲು 10 ಲಕ್ಷ ರು.ಗಳನ್ನು ಕೆಎಸ್‌ಎಫ್‌ಸಿಯಿಂದ ಸಾಲ ಪಡೆದಿದ್ದೆ. 25 ವರ್ಷದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ಕಾರ್ಖಾನೆಯಾಗಿದೆ. ರಾಜ್ಯದ ದಕ್ಷಿಣ ಭಾಗದ 5 ಜಿಲ್ಲೆಗಳಲ್ಲಿ 35 ಸಾವಿರ ಟನ್ ಸಕ್ಕರೆ ಉತ್ಪಾದನೆಯಾಗುತ್ತಿದೆ. ನಿರಾಣಿ ಗ್ರೂಪ್ ಕಾರ್ಖಾನೆಗಳಲ್ಲಿ 1 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗುತ್ತಿದೆ. ದೇಶದಲ್ಲೇ ನಮ್ಮ ಕಾರ್ಖಾನೆಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಎಥನಾಲ್ ಉತ್ಪಾದನೆಯಾಗುತ್ತಿದೆ. ಇಂದು ಪೆಟ್ರೋಲ್‌ ಗೆ ಶೇ.20 ಎಥನಾಲ್ ಬಳಕೆಯಾಗುತ್ತಿದ್ದು, ಕಚ್ಚಾ ತೈಲ ಆಮದಿನ ಮೇಲೆ 20 ಲಕ್ಷ ಕೋಟಿ ರು. ಉಳಿತಾಯವಾಗುತ್ತಿದೆ ಎಂದು ಹೇಳಿದರು.

ಪ್ರತಿ ದಿನ 14 ಕಾರ್ಖಾನೆಗಳಲ್ಲಿ 140 ಟನ್ ಸಿಎನ್‌ಜಿ ಉತ್ಪಾದಿಸುತ್ತಿದ್ದೇವೆ. ದೇಶವ್ಯಾಪ್ತಿ 1 ಸಾವಿರ ಪೆಟ್ರೋಲ್ ಬಂಕ್ ಗಳನ್ನು ಸ್ಥಾಪಿಸಲು ಪ್ರಧಾನಿ ಮೋದಿ ಅವರು ನಿರಾಣಿ ಗ್ರೂಪ್ ಗೆ ಅವಕಾಶ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬಯೋ ಡೀಗ್ರೆಡೆಬಲ್ ಪ್ಲಾಸ್ಟಿಕ್ ಮತ್ತು ವಿಮಾನದಲ್ಲಿ ಬಳಸುವ ಇಂಧನದ ಉತ್ಪಾದನೆ ನಮ್ಮ ಗುರಿಯಾಗಿದೆ ಎಂದರು. ರಾಮನಗರ, ಮಂಡ್ಯ, ಮೈಸೂರಿನಲ್ಲಿ ರೈತರು ಬೆಳೆಯುತ್ತಿರುವ ಕಬ್ಬು, ಮೆಕ್ಕೆಜೋಳ, ಅಕ್ಕಿಗೆ ಉತ್ತಮ ಬೆಲೆ ಬರುತ್ತಿದ್ದು ರೈತರ ಆರ್ಥಿಕ ಮಟ್ಟ ಹೆಚ್ಚಲು ಪ್ರಮುಖ ಕಾರಣವಾಗಿದೆ. 2007ರಲ್ಲಿ ಮುಧೋಳದಲ್ಲಿ ವಿಜಯ ಸೌಹಾರ್ದ ಕೆಡ್ರಿಟ್ ಸಹಕಾರ ಸಂಘ ಆರಂಭವಾಯಿತು. ಇಂದು ರಾಮನಗರದಲ್ಲಿ 74ನೇ ಶಾಖೆ ಉದ್ಘಾಟನೆಯಾಗಿದ್ದು, 75ನೇ ಶಾಖೆಯನ್ನು ಮೈಸೂರಿನಲ್ಲಿ ಉದ್ಘಾಟಿಸಲಾಗುವುದು. ಒಟ್ಟು 125 ಶಾಖೆಗಳನ್ನು ಸ್ಥಾಪಿಸುವ ಗುರಿ ಇದೆ ಎಂದು ಹೇಳಿದರು.

ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಕಬ್ಬಿನ ನಾಡಿನಿಂದ ರೇಷ್ಮೆನಾಡಿಗೆ ಬ್ಯಾಂಕ್ ವಿಸ್ತರಣೆ ಆಗಿದೆ. ಸಾಧಿಸಬೇಕಾದ್ದು ಬಹಳಷ್ಟು ಎನ್ನುವ ನಿರಾಣಿ ಅವರ ಮಾತಿನಂತೆ ಬೆಂಗಳೂರು ದಕ್ಷಿಣ ಜಿಲ್ಲೆಗೆ ನಿರಾಣಿ ಅವರು ಆಗಮಿಸಿದ್ದು, ಇದುವರೆಗೆ 72 ಸಾವಿರ ಜನರಿಗೆ ವಿವಿಧ ಉದ್ಯಮಗಳಲ್ಲಿ ಉದ್ಯೋಗ ಕೊಟ್ಟಿದ್ದಾರೆ. ಈ ಭಾಗದ ರೈತರಿಗೆ ಕೈಗೆಟುವ ರೀತಿಯಲ್ಲಿ ಸಹಕಾರ ಬ್ಯಾಂಕ್ ಸೇವೆ ಸಲ್ಲಿಸಲಿ, ಬಹುರಾಷ್ಟ್ರೀಯ ಕಂಪನಿಗಳ ಜೊತೆ ಸೌಹಾರ್ಧ ಸಹಕಾರ ಬ್ಯಾಂಕ್ ಸ್ಪರ್ಧೆ ಮಾಡುತ್ತಿದೆ. ನಿರಾಣಿ ಅವರ ಕನಸುಗಳು ಸಾಕಾರವಾಗಲಿ ಎಂದು ಶುಭ ಕೋರಿದರು.

ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಒಕ್ಕೂಟ ಜಿಲ್ಲಾಧ್ಯಕ್ಷ ಪೊಲೀಸ್ ರುದ್ರೇಶ್‌, ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಮೇಲಣಗವಿ ಮಠದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್, ಡಾ.ಪುಣ್ಯವತಿ, ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರ ಸೊಸೈಟಿ ವ್ಯವಸ್ಥಾಪಕ ಆನಂದ ಕುಲಕರ್ಣಿ, ಡಿಜಿಎಂ ಪಟ್ಟಣ್ಣನವರ್, ಗಣೇಶ್ ಜ್ಯೂವೆಲರ್ಸ್ ಮಾಲೀಕ ಲಕ್ಷ್ಮಣ್ , ಮುಖಂಡರಾದ ಪ್ರಸನ್ನ ಚಾಟೆ, ಚೇತನ್‌ಕುಮಾರ್, ಗುರುಪ್ರಸಾದ್ ಹಾಜರಿದ್ದರು.

ಕೋಟ್...

ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಗ್ರೂಪ್ ನಿರ್ವಹಿಸಲು ಪ್ರಾರಂಭಿಸಿದ ಬಳಿಕ ಲಾಭದತ್ತ ಮುನ್ನಡೆಯುತ್ತಿದೆ. ಮಂಡ್ಯ ಸಕ್ಕರೆ ಕಾರ್ಖಾನೆಯ ನಿರ್ವಹಣೆಗೆ ಸರ್ಕಾರ ಇ ಟೆಂಡರ್ ಕರೆಯಲಿ, ಯಾರಾದರೂ ನಿರ್ವಹಣೆ ಮಾಡಲಿ, ಒಟ್ಟಾರೆ ಕಾರ್ಖಾನೆ ಮತ್ತು ಕಾರ್ಮಿಕರಿಗೆ ನೆರವಾಗಬೇಕು ಎನ್ನುವುದು ರಾಜ್ಯ ಸರ್ಕಾರಕ್ಕೆ ನನ್ನ ಸಲಹೆ.

-ಮುರುಗೇಶ್ ನಿರಾಣಿ, ಮಾಜಿ ಸಚಿವ

23ಕೆಆರ್ ಎಂಎನ್ 4.ಜೆಪಿಜಿ

ವಿಜಯ (ಎಂಆರ್‌ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ 74ನೇ ರಾಮನಗರ ಶಾಖೆಯನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಸಜ್ಜಿತ ಪ್ರಜಾಸೌಧವಿದ್ದರೂ ಜನರಿಗಿಲ್ಲ ಸರ್ಕಾರಿ ಸೇವೆ
ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ: ಶಾಸಕ ಅಲ್ಲಂಪ್ರಭು