ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಯೂನಿವರ್ಸಲ್ ಪದವಿ ಪೂರ್ವ ಕಾಲೇಜು ಹಾಗೂ ರೋಟರಿ ಸಿಲ್ಕ್ ಸಿಟಿ ವತಿಯಿಂದ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿ /ವಿದ್ಯಾರ್ಥಿನಿಯರ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಮಹತ್ತರವಾದ ಘಟ್ಟ. ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ವಿದ್ಯಾರ್ಥಿಗಳಿಗೆ ಅಟ ಮತ್ತು ಪಾಠ ಮನುಷ್ಯನ ಎರಡು ಕಣ್ಣುಗಳಿದ್ದಂತೆ. ಜೀವನಕ್ಕೆ ಶಿಕ್ಷಣ ಅವಶ್ಯ, ಆರೋಗ್ಯಕ್ಕೆ ಸದೃಢವಾದ ದೇಹ ಅವಶ್ಯಕ. ಆದ್ದರಿಂದ ವಿದ್ಯಾರ್ಥಿಗಳು ಮೊಬೈಲ್ ಗಳತ್ತ ಆಕರ್ಷಿತರಾಗದೆ ಕ್ರೀಡೆಗಳಲ್ಲಿ ಸಕ್ರಿಯರಾಗಬೇಕು ಎಂದು ಹೇಳಿದರು.ವಿದ್ಯಾರ್ಥಿಗಳು ಸದೃಢ ಮನಸ್ಸಿನ ಜೊತೆಗೆ ಸದೃಢ ದೇಹವನ್ನು ಹೊಂದಬೇಕಾದರೆ ನಿಯಮಿತ ರೂಪದಲ್ಲಿ ವ್ಯಾಯಾಮ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಹವ್ಯಾಸವಾಗಿ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಜಾತಿ, ಧರ್ಮ ಇಲ್ಲ. ಎಲ್ಲರೂ ಒಂದೇ ತಾಯಿಯ ಮಕ್ಕಳು. ಆ ಮುಗ್ದ ಮನಸ್ಸುಗಳಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಯಾರೂ ಮಾಡಬಾರದು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸಲು ಕ್ರೀಡಾಕೂಟಗಳು ಅತ್ಯುತ್ತಮ ವೇದಿಕೆಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಸೋಲಿಗೆ ಹೆದರದೆ ಉತ್ತಮ ಪ್ರದರ್ಶನ ನೀಡುವ ಗುರಿಯೊಂದಿಗೆ ಸ್ಪರ್ಧಿಸಬೇಕು ಎಂದು ಇಕ್ಬಾಲ್ ಹುಸೇನ್ ಹೇಳಿದರು.
ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಮಾತನಾಡಿ, ಕ್ರೀಡಾಕೂಟದಲ್ಲಿ ನಿರ್ಣಾಯಕರ ತೀರ್ಪು ನ್ಯಾಯಯುತವಾಗಿರುವುದು ಹಾಗೂ ಆ ತೀರ್ಪನ್ನು ಆಟಗಾರರು ಗೌರವಿಸುವುದು ಕ್ರೀಡೆಯ ನಿಜವಾದ ಮೌಲ್ಯವಾಗಿದೆ. ಕ್ರೀಡೆಗಳಲ್ಲಿ ಸೋಲು - ಗೆಲುವು ಸಾಮಾನ್ಯ. ಸೋಲಿನಿಂದ ನಿರಾಶರಾಗದೆ ಅದನ್ನು ಯಶಸ್ಸಿನ ಮೆಟ್ಟಿಲನ್ನಾಗಿ ಮಾಡಿಕೊಂಡು ಮುಂದೆ ಸಾಗಬೇಕು ಎಂದು ಸಲಹೆ ನೀಡಿದರು.
ಕ್ರೀಡಾ ಜ್ಯೋತಿ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಸೋಲು- ಗೆಲುವು ಏನೇ ಇರಲಿ, ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸುವುದು ಮುಖ್ಯ. ಅದು ಜೀವನದಲ್ಲಿ ನೆನಪಾಗಿ ಉಳಿಯುತ್ತದೆ. ಇಂದಿಲ್ಲದಿದ್ದರೆ ನಾಳೆ ಗೆಲ್ಲಬಹುದು. ಆ ರೀತಿಯ ಕ್ರೀಡಾ ಮನೋಭಾವನೆ ಇಂತಹ ಕ್ರೀಡಾಕೂಟಗಳು ಬೆಳೆಸುತ್ತವೆ ಎಂದು ಹೇಳಿದರು.