;Resize=(412,232))
ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಹುಟ್ಟುಹಬ್ಬದ ದಿನ ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ವಿಶೇಷ ಸಂದೇಶದೊಂದಿಗೆ ಶುಭಾಶಯ ಸ್ವೀಕರಿಸಲಿದ್ದಾರೆ.
1 ರಿಂದ 10ನೇ ತರಗತಿವರೆಗಿನ 98 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಅವರವರ ಹುಟ್ಟುಹಬ್ಬದ ದಿನದಂದು ಶಾಲಾ ನೋಂದಣಿ ವೇಳೆ ಅವರು ನೀಡಿರುವ ಮೊಬೈಲ್ ಸಂಖ್ಯೆಗೆ ವಾಟ್ಸ್‌ಅಪ್ ಮೂಲಕ ಶಿಕ್ಷಣ ಇಲಾಖೆಯ ಮೂಲಕ ಮುಖ್ಯಮಂತ್ರಿ ಅವರ ಫೋಟೋ ಸಹಿತ ಹುಟ್ಟುಹಬ್ಬದ ಶುಭಾಶಯ ಬರಲಿದೆ.
ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ(ಇಡಿಸಿಎಸ್) ಮೂಲಕ ಶಿಕ್ಷಣ ಇಲಾಖೆಯು ಇದೇ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ವೇಳೆ ಇಂತಹದ್ದೊಂದು ಪ್ರಯೋಗ ನಡೆಸಿತ್ತು. ಅದು ಯಶಸ್ವಿ ಆಗಿದ್ದರಿಂದ ಇಡೀ ವರ್ಷ ಈ ಕಾರ್ಯಕ್ರಮದ ಅಂದಾಜು ವೆಚ್ಚದೊಂದಿಗೆ ಆಗಸ್ಟ್ 28ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಿದೆ. ಮಕ್ಕಳ ಹುಟ್ಟುಹಬ್ಬದಂದು ಯಾವುದಾದರೂ ರಾಷ್ಟ್ರೀಯ ಹಬ್ಬ, ಧಾರ್ಮಿಕ ಆಚರಣೆಯ ಹಬ್ಬ, ನಾಡ ಹಬ್ಬ, ಮಹನೀಯರು, ಗಣ್ಯವ್ಯಕ್ತಿಗಳ ಹುಟ್ಟುಹಬ್ಬ, ಸ್ಮರಣಾ ದಿನ ಹೀಗೆ ಏನಾದರೂ ವಿಶೇಷತೆಗಳಿದ್ದರೆ ಅದಕ್ಕೆ ತಕ್ಕಂತೆ ಪ್ರೇರಣದಾಯಕ ಸಂದೇಶವನ್ನೂ ನೀಡಲಾಗುತ್ತಿದೆ.
ಮುಖ್ಯಮಂತ್ರಿಯವರ ಕಾರ್ಯಾಲಯದಿಂದ ಬಂದ ಪ್ರಸ್ತಾವನೆಯ ಮೇರೆಗೆ ರಾಜ್ಯದ ಎಲ್ಲ ಶಾಲಾ ಮಕ್ಕಳಿಗೆ ಅವರವರ ಹುಟ್ಟುಹಬ್ಬದ ದಿನದಂದು ಶಿಕ್ಷಣ ಇಲಾಖೆಯಿಂದ ಮುಖ್ಯಮಂತ್ರಿ ಅವರ ಪೋಟೋ ಸಹಿತ ಹುಟ್ಟುಹಬ್ಬದ ಸಂದೇಶ ನೀಡಲಾಗುತ್ತಿದೆ. ಆಯಾ ದಿನದ ವಿಶೇಷತೆಗೆ ಅನುಗುಣವಾದ ಉತ್ತಮ ಸಂದೇಶವೂ ಅದರಲ್ಲಿರುತ್ತದೆ.
-ವಿಕಾಸ್ ಕಿಶೋರ್ ಸುರಳ್ಕರ್, ಶಾಲಾ ಶಿಕ್ಷಣ ಇಲಾಖೆ ಆಯುಕ್ತ