ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕ ಹಗರಣ ಸಂಬಂಧ ದೆಹಲಿಯಲ್ಲಿ ವಶಕ್ಕೆ ಪಡೆಯಲಾಗಿದ್ದ ಬೀದರ್‌ ಜಿಲ್ಲೆ ಭಾಲ್ಕಿ ತಾಲೂಕಿನ ಬಿಜೆಪಿ ಮುಖಂಡ ಹಾಗೂ ಹಗರಣದ ಮಧ್ಯವರ್ತಿ ಎನ್ನಲಾದ ಬಸವರಾಜ ಕನ್ನಾಳೆಯನ್ನು ಸಿಐಡಿ ಬಂಧಿಸಿದೆ.

ಬೆಂಗಳೂರು : ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕ ಹಗರಣ ಸಂಬಂಧ ದೆಹಲಿಯಲ್ಲಿ ವಶಕ್ಕೆ ಪಡೆಯಲಾಗಿದ್ದ ಬೀದರ್‌ ಜಿಲ್ಲೆ ಭಾಲ್ಕಿ ತಾಲೂಕಿನ ಬಿಜೆಪಿ ಮುಖಂಡ ಹಾಗೂ ಹಗರಣದ ಮಧ್ಯವರ್ತಿ ಎನ್ನಲಾದ ಬಸವರಾಜ ಕನ್ನಾಳೆಯನ್ನು ಸಿಐಡಿ ಬಂಧಿಸಿದೆ.

ಈ ನಡುವೆ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಹಾಗೂ ಕನ್ನಾಳೆ ಇಬ್ಬರನ್ನೂ ಹೆಚ್ಚಿನ ತನಿಖೆಗೆ 10 ದಿನಗಳ ಕಾಲ ಸಿಐಡಿ ಅಧಿಕಾರಿಗಳು ಸೋಮವಾರ ವಶಕ್ಕೆ ಪಡೆದಿದ್ದಾರೆ.ಈ ಪ್ರಕರಣದಲ್ಲಿ ಮೊದಲೇ ಬಂಧಿತರಾಗಿದ್ದ ಜ್ಞಾನೇಂದ್ರ ಹಾಗೂ ಇದೀಗ ಬಂಧಿಸಲಾಗದ ಬಸವರಾಜ್ ಕನ್ನಾಳೆಯನ್ನು ನ್ಯಾಯಾಯಲದ ಮುಂದೆ ಸಿಐಡಿ ಹಾಜರುಪಡಿಸಿತು. ಬಳಿಕ ಹೆಚ್ಚಿನ ತನಿಖೆ ಸಲುವಾಗಿ ವಶಕ್ಕೆ ನೀಡುವಂತೆ ಸಿಐಡಿ ಮನವಿಯನ್ನು ನ್ಯಾಯಾಲಯವು ಪುರಸ್ಕರಿಸಿತು.

ಈ ಆದೇಶ ಬೆನ್ನಲ್ಲೇ ಅರಮನೆ ರಸ್ತೆಯಲ್ಲಿರುವ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ಕೇಂದ್ರ ಕಚೇರಿಗೆ ಜ್ಞಾನೇಂದ್ರ ಗಂಗ್ವಾರ್ ಹಾಗೂ ಬಸವರಾಜುನನ್ನು ಕರೆತಂದು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.

ಪಶುವೈದ್ಯಾಧಿಕಾರಿಗಳ ನೇಮಕಾತಿ ನಡೆದಾಗ ಕೆಪಿಎಸ್‌ಸಿಯ ಪರೀಕ್ಷಾ ನಿಯಂತ್ರಕರಾಗಿ ಜ್ಞಾನೇಂದ್ರ ಕಾರ್ಯನಿರ್ವಹಿಸಿದ್ದರು. ಆ ವೇಳೆ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮಕ್ಕೆ ಅವರು ಸಾಥ್ ಕೊಟ್ಟಿದ್ದಾರೆ ಎಂದು ದೂರಲಾಗಿದೆ. ಈ ಕೃತ್ಯದಲ್ಲಿ ಜ್ಞಾನೇಂದ್ರ ಗಂಗ್ವಾರ್ ಅವರಿಗೆ ಬಸವರಾಜು ಮಧ್ಯವರ್ತಿ ಆಗಿದ್ದ ಎನ್ನಲಾಗಿದೆ.

ಜಾಮೀನು ಮನವಿ ತಿರಸ್ಕಾರ:

ಕೆಪಿಎಸ್‌ಸಿ ಹಗರಣ ಬಯಲಾದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಅಜ್ಞಾತವಾಸಿಯಾಗಿದ್ದ ಜ್ಞಾನೇಂದ್ರ ಅವರು ಶುಕ್ರವಾರ ಸಿಐಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಎರಡು ದಿನಗಳ ವಿಚಾರಣೆ ಬಳಿಕ ಶನಿವಾರ ರಾತ್ರಿ ಅವರನ್ನು ಸಿಐಡಿ ಬಂಧಿಸಿತ್ತು.

ಬಳಿಕ ಭಾನುವಾರ ನ್ಯಾಯಾಲಯದ ಆದೇಶದ ಮೇರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸಿಐಡಿ ಅಧಿಕಾರಿಗಳು ಕಳುಹಿಸಿದ್ದರು. ಇದೇ ಪ್ರಕರಣದಲ್ಲಿ ಭಾನುವಾರ ಬಸವರಾಜು ಕನ್ನಾಳೆ ಬಂಧನವಾಯಿತು. ನಂತರ ನಗರದ ಸಿಐಡಿ ವಿಶೇಷ ನ್ಯಾಯಾಲಯಕ್ಕೆ ಇಬ್ಬರನ್ನೂ ಕರೆತಂದು ಸಿಐಡಿ ಅಧಿಕಾರಿಗಳು ಹಾಜರುಪಡಿಸಿದರು.

ಈ ವೇಳೆ ತನಿಖೆಗೆ ಜ್ಞಾನೇಂದ್ರ ಸಂಪೂರ್ಣವಾಗಿ ಸಹಕರಿಸಿದ್ದಾರೆ. ಯಾವುದೇ ಸೂಕ್ತ ಪುರಾವೆ ಇಲ್ಲದೆ ಅವರನ್ನು ಬಂಧಿಸಲಾಗಿದ್ದು, ಜಾಮೀನು ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಜ್ಞಾನೇಂದ್ರ ಪರ ವಕೀಲರು ಮನವಿ ಮಾಡಿದರು. ಆದರೆ ಇದಕ್ಕೆ ಆಕ್ಷೇಪಿಸಿದ ಸರ್ಕಾರಿ ಅಭಿಯೋಜಕರು, ನೇಮಕಾತಿ ಹಗರಣದಲ್ಲಿ ಜ್ಞಾನೇಂದ್ರ ಪಾತ್ರವಿದೆ. ಹೀಗಾಗಿ ಅವರನ್ನು ಹೆಚ್ಚಿನ ತನಿಖೆಗೆ ಪೊಲೀಸ್ ವಶಕ್ಕೆ ನೀಡುವಂತೆ ವಿನಂತಿಸಿದರು. ಕೊನೆಗೆ ಸಿಐಡಿ ಮನವಿ ಪುರಸ್ಕರಿಸಿದ ನ್ಯಾಯಾಲಯವು, ಇಬ್ಬರೂ ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಿ ಆದೇಶಿಸಿತು.