ಕುಕನೂರು: ಬೆದವಟ್ಟಿಯ ಹಿರೇಮಠದ ಶ್ರೀಶಿವಸಂಗಮೇಶ್ವರ ಶಿವಾಚಾರ್ಯರು ಆಧ್ಯಾತ್ಮೀಕ ಬೆಳಕು ಚೆಲ್ಲಿದವರು ಎಂದು ಚಳಗೇರಿಯ ಶ್ರೀವೀರಸಂಗಮೇಶ್ವರ ಸ್ವಾಮೀಜಿ ಹೇಳಿದರು.
ಯಲಬುರ್ಗಾ ಹಿರೇಮಠದ ಶ್ರೀಸಿದ್ದಾರಾಮೇಶ್ವರ ಸ್ವಾಮೀಜಿ ಮಾತನಾಡಿ, ಶ್ರೀಗಳು ಮೂರ್ತಿ ಸ್ಥಾಪನೆ ಮಾಡಿದರಷ್ಟೇ ಅಲ್ಲ, ಜನರ ಮನದಲ್ಲಿ ಭಕ್ತಿ-ಭಾವನೆ ಸ್ಥಾಪಿಸಿದರು. ಅವರ ಆದರ್ಶ ನಮಗೆ ದಾರಿದೀಪ. ಅವರ ಸ್ಮರಣೆ ಮಾಡುವುದೇ ಪುಣ್ಯ. ಸಮಾಜಕ್ಕೆ ಸಮರ್ಪಣೆ, ಸಮಾಜವೇ ಸರ್ವಸ್ವಂ, ಸತ್ಯಕ್ಕೆ ಮಿಡಿಯಲಿ ನಮ್ಮೆಲ್ಲರ ಹೃದಯ ಎಂಬ ಧ್ಯೇಯವಾಕ್ಯದೊಂದಿಗೆ ಶ್ರೀಗಳು ತಮ್ಮ ಜೀವನ ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದರು. ಶ್ರೀಮಠವನ್ನು ಧಾರ್ಮಿಕ ಕೇಂದ್ರದ ಜತೆಗೆ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿಸಿದ್ದರು ಎಂದರು.
ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಶ್ರೀಡಾ.ಮಹಾದೇವ ಸ್ವಾಮೀಜಿ ಮಾತನಾಡಿ, ಲಿಂ.ಶ್ರೀಗಳು ನಮ್ಮ ತಾಲೂಕಿನ ಹೆಮ್ಮೆ. ಸಮಾಜಕ್ಕೆ ಸಮರ್ಪಣೆ ಎಂಬ ಧ್ಯೇಯದಂತೆ ಬದುಕಿದವರು. ಕುಕನೂರು ಭಾಗದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವಲ್ಲಿ ಅವರ ಪಾತ್ರ ದೊಡ್ಡದು. ಅವರ ತ್ರಿವಿಧ ದಾಸೋಹ ಸದಾ ಮುಂದುವರಿಯಲಿ ಎಂದು ಹೇಳಿದರು.ಬೆದವಟ್ಟಿಯಲ್ಲಿ ಬೆಳಗ್ಗೆ ಶ್ರೀಗಳ ಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ಪೂಜ್ಯರ ಭಾವಚಿತ್ರ ಮೆರವಣಿಗೆ ಜರುಗಿತು. ನಂತರ ಜರುಗಿದ ಧರ್ಮಸಭೆಯಲ್ಲಿ ನೀಲಗುಮದ, ಗುದ್ನೇಪ್ಪನಮಠದ ಶ್ರೀ ಪ್ರಭುಲಿಂಗ ದೇವರು, ಮೈನಳ್ಳಿಯ ಶ್ರೀಸಿದ್ದೇಶ್ವರ ಸ್ವಾಮೀಜಿ ಹಾಗೂ ಅನೇಕ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.