ಮತ್ತೆ ಮುನ್ನೆಲೆಗೆ ಬಂದ ಬೇಡ್ತಿ-ವರದಾ ನದಿ ಜೋಡಣೆ

KannadaprabhaNewsNetwork |  
Published : Sep 08, 2025, 01:01 AM IST
ಯೋಜನೆಯ ನಕ್ಷೆ | Kannada Prabha

ಸಾರಾಂಶ

ಬೇಡ್ತಿ-ವರದಾ ನದಿ ಜೋಡಣೆಯ ಭೂತ ಮತ್ತೆ ಜಿಲ್ಲೆಯ ಜನತೆಯನ್ನು ಕಾಡುತ್ತಿದೆ.

ವಸಂತಕುಮಾರ್ ಕತಗಾಲ

ಕಾರವಾರ: ಬೇಡ್ತಿ-ವರದಾ ನದಿ ಜೋಡಣೆಯ ಭೂತ ಮತ್ತೆ ಜಿಲ್ಲೆಯ ಜನತೆಯನ್ನು ಕಾಡುತ್ತಿದೆ. 30 ವರ್ಷಗಳ ಹಿಂದೆ ಸಿದ್ಧವಾದ ಈ ಯೋಜನೆಗೆ ಜಿಲ್ಲೆಯ ಜನತೆಯಿಂದ ತೀವ್ರ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನನೆಗುದಿಗೆ ಬಿದ್ದಿತ್ತು. ಈಗ ಮತ್ತೆ ಹಾವೇರಿ ಜನಪ್ರತಿನಿಧಿಗಳಿಂದ ಈ ಯೋಜನೆ ಮುನ್ನೆಲೆಗೆ ಬಂದಿದೆ.

ಘಟ್ಟದ ಮೇಲಿನ ಬೇಡ್ತಿ ನದಿ ಘಟ್ಟ ಇಳಿಯುತ್ತಿದ್ದಂತೆ ಗಂಗಾವಳಿ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತದೆ. ಜಿಲ್ಲೆಯ ಜನತೆ ಎಚ್ಚೆತ್ತುಕೊಳ್ಳಲು ಇದು ಸಕಾಲ. ಈ ಯೋಜನೆಯಿಂದ ಜಿಲ್ಲೆಯ ರೈತರು, ಪರಿಸರ, ಜೀವ ವೈವಿಧ್ಯತೆಯ ಮೇಲೆ ಉಂಟಾಗಲಿರುವ ದುಷ್ಪರಿಣಾಮಗಳ ಕುರಿತು ಕನ್ನಡಪ್ರಭ ಸರಣಿ ವರದಿ ಪ್ರಕಟಿಸಲಿದೆ.

30 ವರ್ಷಗಳ ಹಳೆಯದಾದ ಬೇಡ್ತಿ- ವರದಾ ನದಿ ಜೋಡಣೆಗೆ ಮತ್ತೆ ಮರುಜೀವ ಬಂದಿದೆ. ಬೇಡ್ತಿ ನದಿ ನೀರನ್ನು ಹಾವೇರಿ ಜಿಲ್ಲೆಗೆ ಒಯ್ಯುವ ಈ ಯೋಜನೆ ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ (ಗಂಗಾವಳಿ) ನದಿ ತೀರದ ರೈತರಿಗೆ, ಕುಡಿಯುವ ನೀರಿಗಾಗಿ ಈ ನದಿಯನ್ನು ಅವಲಂಬಿಸಿದ ಕಾರವಾರ, ಅಂಕೋಲಾ, ಗೋಕರ್ಣದ ಜನತೆಗೆ, ಪರಿಸರ, ಜೀವ ವೈವಿಧ್ಯತೆಗೆ ಮಾರಕವಾದ ಈ ಯೋಜನೆ ಜಾರಿಗೆ ಹಾವೇರಿ ಜಿಲ್ಲೆಯ ಜನಪ್ರತಿನಿಧಿಗಳು ಸದ್ದಿಲ್ಲದೆ ಕಸರತ್ತು ಆರಂಭಿಸಿದ್ದಾರೆ.

ಯಲ್ಲಾಪುರ ತಾಲೂಕಿನ ಸುರೇಮನೆ ಎಂಬಲ್ಲಿ ಅಣೆಕಟ್ಟೆ ನಿರ್ಮಿಸಿ ಅಲ್ಲಿಂದ ಕಾಲುವೆ, ಸುರಂಗ ಹಾಗೂ ಪೈಪ್ ಲೈನ್ ಮೂಲಕ 18.54 ಟಿಎಂಸಿ ನೀರನ್ನು ಲಿಫ್ಟ್‌ ಮಾಡಿ ಶಿರಸಿ ಬಳಿ ವರದಾ ನದಿಗೆ ಸೇರ್ಪಡೆ ಮಾಡುವ ಯೋಜನೆ ಇದಾಗಿದೆ. ಹಾವೇರಿ, ಹಾನಗಲ್ ಹಾಗೂ ಸವಣೂರು ತಾಲೂಕುಗಳಲ್ಲಿ ಹರಿದಿರುವ ವರದಾ ನದಿ ಮೂಲಕ ತುಂಗಭದ್ರಾ ನದಿ ಸೇರಿ ಗದಗ, ರಾಯಚೂರು ಹಾಗೂ ಸಿಂಧನೂರ ತನಕ 1.49 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಹಾಗೂ ಕುಡಿಯುವ ನೀರು ಒದಗಿಸುವ ಉದ್ದೇಶ ಯೋಜನೆಯಲ್ಲಿದೆ.

1995ರಲ್ಲಿ ಈ ಯೋಜನೆ ಮೊದಲು ಪ್ರಸ್ತಾಪಗೊಂಡಿತ್ತು. 2022ರಲ್ಲಿ ಡಿಪಿಆರ್ ಕೂಡ ಸಿದ್ಧವಾಗಿತ್ತು. ಆದರೆ ಪರಿಸರ, ಜೀವ ವೈವಿಧ್ಯತೆ ನಾಶ, ಕುಡಿಯುವ ನೀರಿಗೆ ಸಮಸ್ಯೆ ಮತ್ತಿತರ ಕಾರಣಗಳಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಈಗ ಮತ್ತೆ ಯೋಜನೆಯ ಕುರಿತು ಹಾವೇರಿ ಜಿಲ್ಲೆಯಲ್ಲಿ ಬೆಳವಣಿಗೆಗಳಾಗುತ್ತಿವೆ.

ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಮುತುವರ್ಜಿಯಿಂದಾಗಿ ನ್ಯಾಶನಲ್ ವಾಟರ್ ಡೆವಲಪಮೆಂಟ್ ಏಜೆನ್ಸಿ ಈ ಜೋಜನೆ ಕುರಿತು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ಯೋಜನೆಯ ಪೂರ್ವ ಸಿದ್ಧತಾ ವರದಿಯೂ ಸಿದ್ಧವಾಗಿದೆ. ವಿಸ್ತೃತ ಯೋಜನಾ ವರದಿ ತಯಾರಿಸುವ ಸಿದ್ಧತೆ ಆರಂಭವಾಗಿದೆ. ನಂತರ ಅರಣ್ಯ, ಪರಿಸರ, ಜೀವ ವೈವಿಧ್ಯ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅನುಮತಿ ದೊರೆತ ಮೇಲೆ ಕೇಂದ್ರ ಜಲಶಕ್ತಿ ಸಚಿವಾಲಯ ಯೋಜನೆಗೆ ಅನುಮತಿ ನೀಡಬೇಕು. ಇದೆಲ್ಲ ಪ್ರಕ್ರಿಯೆಗೆ ಸಾಕಷ್ಟು ಸಮಯ ಬೇಕಾಗಲಿದ್ದರೂ ಜಿಲ್ಲೆಯ ಜನತೆ ಎಚ್ಚೆತ್ತುಕೊಳ್ಳಲು ಇದು ಸಕಾಲವಾಗಿದೆ.

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌