ಸಾರಾಂಶ
ಒಂದು ಲೆಕ್ಕಾಚಾರದ ಪ್ರಕಾರ ಒಂದು ಇದ್ದ ಪಾಲಿಕೆ ಈಗ ಐದು ಆಗುತ್ತಿದ್ದಂತೆ ಕೇವಲ ಐದು ಸಾವಿರ ಮತ ಪಡೆದವನು ಕಾರ್ಪೋರೇಟರ್ ಆಗಿ ಬಿಡುತ್ತಾನಂತೆ. ಅಂದರೆ, ಸುಮಾರು 20 ಸಾವಿರ ಮತದಾರರಿಗೆ ಒಂದು ವಾರ್ಡ್ ರಚನೆ ಮಾಡಲಾಗುತ್ತದೆಯಂತೆ.
ಏಕ ಆಗಿದ್ದ ಬೆಂಗಳೂರು ಮಹಾನಗರ ಪಾಲಿಕೆ ಈಗ ಅನೇಕವಾಗುತ್ತಿದ್ದಂತೆಯೇ ಪುಡಿ, ಗಿಡ್ಡಿ, ಮಡ್ಡಿ ರಾಜಕಾರಣಿಗಳೆಲ್ಲ ತಯಾರಾಗಿ ನಿಂತು ಬಿಟ್ಟಿದ್ದಾರೆ.
ಸರ್ಕಾರ ಅದ್ಯಾವಾಗ ಈ ಅನೇಕವಾಗಿರುವ ಪಾಲಿಕೆಗಳಿಗೆ ಚುನಾವಣೆ ಮಾಡುವುದೋ ಗೊತ್ತಿಲ್ಲ. ಹೀಗಾಗಿ, ರಿಸ್ಕ್ ಬೇಡ ಅಂತ ಈ ಪುಡಿ-ಗಿಡಿ-ಮಡಿ ರಾಜಕಾರಣಿಗಳು ಎಷ್ಟು ವೋಟ್ ಪಕ್ಕಾ ಮಾಡಿಕೊಂಡರೆ ಕಾರ್ಪೊರೇಟರ್ ಅನಿಸಿಕೊಳ್ಳಬಹುದು ಅಂತ ಲೆಕ್ಕಾಚಾರ ಆರಂಭಿಸಿದ್ದಾರೆ.
ಒಂದು ಲೆಕ್ಕಾಚಾರದ ಪ್ರಕಾರ ಒಂದು ಇದ್ದ ಪಾಲಿಕೆ ಈಗ ಐದು ಆಗುತ್ತಿದ್ದಂತೆ ಕೇವಲ ಐದು ಸಾವಿರ ಮತ ಪಡೆದವನು ಕಾರ್ಪೋರೇಟರ್ ಆಗಿ ಬಿಡುತ್ತಾನಂತೆ. ಅಂದರೆ, ಸುಮಾರು 20 ಸಾವಿರ ಮತದಾರರಿಗೆ ಒಂದು ವಾರ್ಡ್ ರಚನೆ ಮಾಡಲಾಗುತ್ತದೆಯಂತೆ.
ಬೆಂಗಳೂರಿನ ಹಿಂದಿನ ಯಾವ ಚುನಾವಣೆಯಲ್ಲೂ ಮತದಾನ ಪ್ರಮಾಣ ಶೇ.60 ಮೀರಿಲ್ಲ. ಅಂದರೆ, 20 ಸಾವಿರ ಮತದಾರರಿರುವ ಕಡೆ ಕೇವಲ 10 ರಿಂದ 12 ಸಾವಿರ ವೋಟಿಂಗ್ ಆಗಲಿದೆ. ಪ್ರತಿ ವಾರ್ಡ್‌ನಲ್ಲಿ ಮೂರ್ನಾಲ್ಕು ಅಭ್ಯರ್ಥಿ ನಡುವೆ ಪ್ರಬಲ ಸ್ಪರ್ಧೆ ಇರಲಿದೆ. ವೋಟ್ ಹಂಚಿಕೆಯಾಗಿ ಸರಿಸುಮಾರು ಐದು ಸಾವಿರ ಮತ ಗಳಿಸಿದವ ಕಾರ್ಪೋರೇಟರ್ ಆಗೋದು ಗ್ಯಾರಂಟಿ.
ಈ ಲೆಕ್ಕ ಪಕ್ಕಾ ಆಗುತ್ತಿದ್ದಂತೆಯೇ ಐದು ಸಾವಿರ ವೋಟ್ ಖರೀದಿಗೆ ಏನು ಮಾಡಬೇಕು? ಒಂದು ವೋಟ್‌ಗೆ ಎಷ್ಟು ಕೊಡಬೇಕು? ಎದುರಾಳಿ ಎಷ್ಟು ಕೊಡಬಹುದು? ಆಗ ನಾನೆಷ್ಟು ಕೊಡಬೇಕಾಗಬಹುದು ಎಂಬಿತ್ಯಾದಿ ಲೆಕ್ಕಾಚಾರ ನಗರದ ಪ್ರತಿ ಬಾರ್-ಬಾರ್ ಗಳಲ್ಲಿ ಜೋಪಾಹಿ ನಡೆಯುತ್ತಿದೆಯಂತೆ.
ಇದು ನಿಜವೇ ಆದಲ್ಲಿ. ಯಾರ್‍ಯಾರನ್ನು ನಾವು ನಗರ ಪಿತೃ ಎಂದು ಕರೆಯಬೇಕಾಗಬಹುದು ಎಂಬ ಅಳಲು ಬೆಂದಕಾಳೂರಿಗರದ್ದು.
ನ್ಯಾಯಾಧೀಶರ ಪ್ರಶ್ನೆಗೆ ದಂಗಾದ ವಕೀಲ
ಕೋರ್ಟ್ ಎಂದರೆ ಸಾಮಾನ್ಯವಾಗಿ ಸೀರಿಯಸ್ ಆದ, ವಾಗ್ವಾದಗಳ ಸ್ಥಳ ಎಂದೇ ಹೇಳಬಹುದು. ಹಾಸ್ಯಕ್ಕೆ ಅವಕಾಶ ಬಹು ಕಡಿಮೆ. ಇಂಥದ್ದರ ನಡುವೆ ಯಾವಾಗಲೂ ಒಮ್ಮೆ ಲಘು ಹಾಸ್ಯದ ಮಾತುಗಳು ಕೇಳಿ ಬಂದರೆ ಅದು ವಿಶೇಷವೆಂದೇ ಹೇಳಬಹುದು.
ಇತ್ತೀಚೆಗೆ ಕಿರಿಯ ವಕೀಲರೊಬ್ಬರು ನ್ಯಾಯಾಧೀಶರ ಮುಂದೆ ಹಾಜರಾಗಿ, ‘ನಮ್ಮ ಹಿರಿಯ ವಕೀಲರಿಗೆ ಹುಷಾರಿಲ್ಲ. ಇಂದು ಅವರು ವಿಚಾರಣೆಗೆ ಹಾಜರಾಗಲು ಆಗುತ್ತಿಲ್ಲ. ಇದರಿಂದ ಎರಡು ವಾರ ಪ್ರಕರಣದ ವಿಚಾರಣೆ ಮುಂದೂಡಬೇಕು’ ಎಂದು ಕೋರಿದರು. ನ್ಯಾಯಾಧೀಶರು ಒಪ್ಪಿ ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿದ್ದರು.
ಆ ಒಂದು ವಾರ ಕಳೆದು ಮತ್ತೆ ಪ್ರಕರಣ ವಿಚಾರಣೆಗೆ ಬಂದಿತ್ತು. ಈ ಬಾರಿ ಹಿರಿಯ ವಕೀಲರೇ ಹಾಜರಾಗಿದ್ದರು. ಅವರನ್ನು ಕಂಡು ಯೋಗಕ್ಷೇಮ ವಿಚಾರಿಸಲು ಮುಂದಾದ ನ್ಯಾಯಾಧೀಶರು, "ಏನ್ರೀ ಹಿರಿಯ ವಕೀಲರೇ, ನಿಮಗೇನೋ ‘ದೊಡ್ಡ ರೋಗ’ ಬಂದಿತ್ತಂತೆ. ನಿಮ್ಮ ಕಿರಿಯ ವಕೀಲರೇ ಈ ವಿಚಾರ ಹೇಳಿ ವಾದ ಮಂಡನೆಗೆ ಕಾಲಾವಕಾಶ ಪಡೆದರು? ಅಂತಹದ್ದು ಏನಾಗಿತ್ತು ನಿಮ್ಗೆ? ಎಂದು ಕೇಳಿದರು.
ನ್ಯಾಯಾಧೀಶರ ಬಾಯಲ್ಲಿ ‘ದೊಡ್ಡರೋಗ’ ಪದ ಕೇಳಿ ಹಿರಿಯ ವಕೀಲರು ತಬ್ಬಿಬ್ಬಾದರು. ನಂತರ ಸಾವರಿಸಿಕೊಂಡು ಸ್ವಾಮಿ ಅಂಥದ್ದೇನೂ ಆಗಿರಲಿಲ್ಲ. ‘ಜಸ್ಟ್ ವೈರಲ್ ಫಿವರ್‘ ಆಗಿತ್ತಷ್ಟೇ ಎಂದರು. ಅದಕ್ಕೆ ನ್ಯಾಯಾಧೀಶರು ಪ್ರತಿಕ್ರಿಯಿಸಿ, ನಿಮ್ಮ ಕಿರಿಯ ವಕೀಲರು ಮಾತು ಕೇಳಿ ನಿಮಗೆ ಏನೋ ಆಗೋಗಿದೆ ಎಂದು ಭಾವಿಸಿದ್ದೆ. ಈಗ ಚೆನ್ನಾಗಿದ್ದೀರಲ್ವಾ? ಆದರೂ ನಿಮ್ಮ ವಕೀಲರು ಎರಡು ವಾರ ವಿಚಾರಣೆ ಮುಂದೂಡಲು ಕೋರಿದ್ದರು. ನಾನು ಮಾತ್ರ ಒಂದೇ ವಾರ ಕೊಟ್ಟಿದ್ದೆ. ನೋಡಿ ಒಂದು ವಾರ ಕಳೆಯುವಷ್ಟರಲ್ಲಿ ವಿಚಾರಣೆಗೆ ನೀವೇ ಬಂದಿದ್ದೀರಿ ಎಂದು ತಮಾಷೆಯಾಗಿ ನುಡಿದರು.
ಇದೇ ವೇಳೆ ವೈರಲ್ ಫಿವರ್ ಇದ್ದರೆ ನಮ್ಮ ಹತ್ತಿರ ಬರಬೇಡಿ. ದೂರದಲ್ಲೇ ನಿಲ್ಲಿ ಎಂದು ಇದೇ ಪ್ರಕರಣದ ಮತ್ತೊಬ್ಬ ಪಕ್ಷಗಾರನ ಪರ ಹಾಜರಿದ್ದ ಹಿರಿಯ ವಕೀಲರು ನುಡಿದರು. ಇದರಿಂದ ವೈರಲ್ ಫೀವರ್‌ಗೆ ತುತ್ತಾಗಿದ್ದ ಹಿರಿಯ ವಕೀಲರು, ತಮ್ಮ ಸಹ ಹಿರಿಯ ವಕೀಲರ ಭುಜ ಮುಟ್ಟಿ. ನೀವು ಭಯ ಪಡುವಂತದ್ದೇನಿಲ್ಲ ಎಂದು ಅಭಯ ನೀಡಿದರು. ಈ ಸನ್ನಿವೇಶ ನೋಡಿ ಕೋರ್ಟ್ ಹಾಲ್‌ನಲ್ಲಿದ್ದವರೆಲ್ಲರೂ ಜೋರಾಗಿ ನಕ್ಕರು.
-ವಿಶ್ವನಾಥ್ ಮಲೆಬೆನ್ನೂರು
-ವೆಂಕಟೇಶ್ ಕಲಿಪಿ