ಹಾವೇರಿ:ಬೇಡ್ತಿ-ವರದಾ ನದಿ ಜೋಡಣೆ ಅನುಷ್ಠಾನ ಕುರಿತು ತಜ್ಞರು ನೀಡುವ ಅಂತಿಮ ವರದಿಯನ್ನು ಸೌಹಾರ್ದ ಭಾವದಿಂದ ಒಪ್ಪಿಕೊಳ್ಳೋಣ. ಸಂಘರ್ಷದ ಬದಲಾಗಿ ಸಾಮರಸ್ಯದ ಕಡೆಗೆ ಸಾಗೋಣ. ಅಲ್ಲಿಯವರೆಗೂ ಪರಸ್ಪರ ಆರೋಪ, ಪ್ರತ್ಯಾರೋಪ ಕೈಬಿಡೋಣ ಎಂಬ ನಿರ್ಣಯಕ್ಕೆ ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮಠಾಧೀಶರು ಸಹಮತ ವ್ಯಕ್ತಪಡಿಸಿದರು.
ಶ್ರೀಗಳ ಪ್ರಶ್ನೆಗೆ ತಜ್ಞರಾದ ಕೇಶವ ಕೂರ್ಸೆ ಹಾಗೂ ವಿ.ಆರ್. ಹೆಗಡೆ ಅವರು ಬೇಡ್ತಿ-ವರದಾ ನದಿ ಜೋಡಣೆಯಿಂದ ಗುಡ್ಡ ಕುಸಿತ, ಪರಿಸರ ನಾಶ ಆಗುತ್ತದೆ. ಪಶ್ಚಿಮ ಘಟ್ಟದ ಜೀವವೈವಿಧ್ಯಕ್ಕೂ ಧಕ್ಕೆ ಆಗಲಿದೆ. ಅಲ್ಲದೇ ಬೇಡ್ತಿ ನದಿಯಲ್ಲೇ ನೀರಿಲ್ಲದಿರುವಾಗ ಹೊಸ ಯೋಜನೆ ವ್ಯರ್ಥ ಎಂದು ವಾದ ಮುಂದಿಟ್ಟರು. ಆಗ ಹಾವೇರಿ ಜಿಲ್ಲೆಯ ಪರವಾಗಿ ತಜ್ಞರಾದ ಚೆನ್ನಯ್ಯ ಮಾತನಾಡಿ, ಬೇಡ್ತಿ-ವರದಾ ನದಿ ಜೋಡಣೆಯಿಂದ ಪಶ್ಚಿಮ ಘಟ್ಟಕ್ಕೆ ಧಕ್ಕೆ ಆಗಲ್ಲ. ಈ ಭಾಗದಲ್ಲಿ ಪ್ರತಿ ವರ್ಷ ವಾಡಿಕೆಯ ಮಳೆ ಪ್ರಮಾಣ ಹೆಚ್ಚು ಆಗುತ್ತದೆ. ಸಮುದ್ರಕ್ಕೆ ಅನವಶ್ಯಕವಾಗಿ ಹೋಗುವ ನೀರನ್ನು ಹಿಡಿದಿಡಬಹುದು. ಇದರಿಂದ ಈ ಭಾಗದ ಪ್ರಾಣಿ-ಪಕ್ಷಿಗಳಿಗೂ ಅನುಕೂಲ ಆಗುತ್ತದೆ ಎಂದರು.
ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಕೇವಲ ನೀರಾವರಿ ಯೋಜನೆ ಜಾರಿಗೊಳಿಸುವುದರಿಂದ ಪಶ್ಚಿಮ ಘಟ್ಟಕ್ಕೆ ಧಕ್ಕೆ ಆಗಲ್ಲ. ಈಗಾಗಲೇ ಈ ಭಾಗದಲ್ಲಿ ಅಡಿಕೆ ತೋಟ, ಭತ್ತದ ಗದ್ದೆಯ ಉಳುಮೆಗೆ ಗುಡ್ಡಗಳು ಹಾಳಾಗಿರಬಹುದು. ಜೊತೆಗೆ ರಸ್ತೆ ನಿರ್ಮಾಣದ ನೆಪದಲ್ಲಿ ಗುಡ್ಡಗಳನ್ನು ಅಗೆಯಲಾಗಿದೆ. ಹೀಗಿರುವಾಗ ನಮ್ಮ ಭಾಗಕ್ಕೆ ನೀರು ಕೊಂಡೊಯ್ಯುವುದನ್ನು ತಾವು ವಿರೋಧಿಸಬಾರದು ಎಂದರು.ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿದರು. ಸಂತರ ಚಿಂತನಾ ಸಭೆಗೂ ಮುನ್ನ ಬೇಡ್ತಿ ನದಿ ಉಗಮದ ಜಲಾನಯನ ಪ್ರದೇಶವಾದ ಕಲಘಟಗಿ ತಾಲೂಕಿನ ಗಳಗಿನಗಟ್ಟಿ ಭಾಗಕ್ಕೂ ಮಠಾಧೀಶರು ಭೇಟಿ ನೀಡಿದರು. ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ಬೊಮ್ಮನಹಳ್ಳಿಯ ಶಿವಯೋಗೀಶ್ವರ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯರು, ಸವಣೂರಿನ ದೊಡ್ಡಹುಣಸೆ ಕಲ್ಮಠದ ಚನ್ನಬಸವ ಸ್ವಾಮೀಜಿ, ಹೊಸರಿತ್ತಿ ಗುದ್ದಲೀಶ್ವರ ಮಠದ ಗುದ್ದಲೀಶ್ವರ ಸ್ವಾಮೀಜಿ, ಕರ್ಜಗಿ ಗೌರಿಮಠದ ಶಿವಾಚಾರ್ಯ ಸ್ವಾಮೀಜಿ, ಬಣ್ಣದ ಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ, ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯರು, ದುಂಢಶಿಯ ಕುಮಾರಸ್ವಾಮಿಗಳು, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ತಿಳವಳ್ಳಿ ಕಲ್ಮಠದ ನಿರಂಜನ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಸ್ವಾಮಿಗಳು, ಹೇರೂರಿನ ಗುಬ್ಬಿ ಅಜ್ಜಯ್ಯನಮಠದ ನಿರಂಜನ ಸ್ವಾಮೀಜಿ, ನಾಗವಂದದ ಶಿವಯೋಗಿ ಶಿವಾನಂದ ಶಿವಾಚಾರ್ಯರು, ತೊಗರ್ಸಿಯ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಮಠಾಧೀಶರ ನಿಯೋಗದಲ್ಲಿದ್ದರು.
ನಮ್ಮ ಆತಂಕವನ್ನು ಸರ್ಕಾರವೂ ಕೇಳಿರಲಿಲ್ಲ. ನೀವು ಇಲ್ಲಿಗೆ ಬಂದು ನಮ್ಮ ಭಾವನೆ ಅರ್ಥ ಮಾಡಿಕೊಂಡಿರುವುದು ಖುಷಿಯಾಗಿದೆ. ಜೀವ ವೈವಿಧ್ಯಕ್ಕೆ ಧಕ್ಕೆ ಆಗದ ರೀತಿಯಲ್ಲಿ ಸಮೀಕ್ಷೆ ನಡೆಸಲು ತಜ್ಞರಿಗೆ ತಿಳಿಸೋಣ. ಈ ವಿಷಯದಲ್ಲಿ ಯಾರೂ ಸರ್ಕಾರದ ಮೇಲೆ ಪ್ರಭಾವ ಬೀರಬಾರದು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.