ಬೇಡ್ತಿ- ವರದಾ ನದಿ ಜೋಡಣೆ ಮತ್ತೆ ಮುನ್ನೆಲೆಗೆ

KannadaprabhaNewsNetwork |  
Published : Mar 26, 2025, 01:36 AM IST
ಫೋಟೋ : 25ಎಚ್‌ಎನ್‌ಎಲ್6 | Kannada Prabha

ಸಾರಾಂಶ

ಈ ಯೋಜನೆಯಿಂದ ಅಂತರ್ಜಲ ಹೆಚ್ಚಾಗಿ ರೈತರ ಕೃಷಿ ಭೂಮಿಯ ಕೊಳವೆ ಬಾವಿಗಳಿಗೆ ಉತ್ತಮ ನೀರು ದೊರೆತು ನೀರಾವರಿಗೆ ಸಹಕಾರಿಯಾಗಲಿದೆ.

ಮಾರುತಿ ಶಿಡ್ಲಾಪೂರ

ಹಾನಗಲ್ಲ: ವರದಾ- ಬೇಡ್ತಿ ನದಿ ಜೋಡಣೆಗೆ ಆಗ್ರಹಿಸಿ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಜಿಲ್ಲೆಯ ಶಾಸಕರು ಮನವಿ ಮಾಡಿದ್ದು, ಅದೇ ರೀತಿ ಲೋಕಸಭೆಯಲ್ಲಿಯೂ ಸಂಸದ ಬಸವರಾಜ ಬೊಮ್ಮಾಯಿ ಅವರು ಪ್ರಸ್ತಾಪಿಸಿ ಶೀಘ್ರ ಕಾಮಗಾರಿಗೆ ಒತ್ತಾಯಿಸಿದ್ದು, ಇದರಿಂದ ಈ ಭಾಗದ ರೈತರ ನಿರೀಕ್ಷೆಗೆ ಮತ್ತಷ್ಟು ಇಂಬು ನೀಡಿದಂತಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ. ಬಣಕಾರ, ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ, ಯಾಸಿರ್‌ಖಾನ ಪಠಾಣ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಜೀವ ನೀರಲಗಿ ಅವರು ರೈತ ಸಂಘದ ಮನವಿಯನ್ನು ಅನುಸರಿಸಿ ವರದಾ ಬೇಡ್ತಿ ಯೋಜನೆ ಜಾರಿಗೆ ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.ಮುಖ್ಯಮಂತ್ರಿಗಳು ಕೂಡ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಕ್ರಮ ಕೈಗೊಳ್ಳಲು ಸೂಚಿಸಿರುವ ಪತ್ರ ಜಾಲತಾಣದಲ್ಲಿ ಓಡಾಡುತ್ತಿದೆ. ವರದಾ- ಬೇಡ್ತಿ ನದಿ ಜೋಡಣೆ ಮಾಡಿ ಉತ್ತರ ಕರ್ನಾಟಕದ ಬಯಲು ಪ್ರದೇಶಗಳಿಗೆ ನೀರಾವರಿ ಕಲ್ಪಿಸುವುದು, ಧಾರವಾಡ ಜಿಲ್ಲೆಯಲ್ಲಿ ಉಗಮವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿಯುತ್ತಿರುವ ಗಂಗಾವಳಿ ನದಿಯ ನೀರು ಅರಬ್ಬೀ ಸಮುದ್ರ ಸೇರುತ್ತಿದ್ದು, ಈ ನದಿಯ ನೀರನ್ನು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳಲು ಯೋಜನೆ ರೂಪಿಸಬೇಕು. ಕೇಂದ್ರ ಜಲ ನೀತಿ ಅನ್ವಯ ವರದಾ- ಬೇಡ್ತಿ ನದಿ ಜೋಡಣೆಯಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಾಗುವುದರಿಂದ ರೈತರ ಕೃಷಿ ಭೂಮಿಗೆ ಹಾಗೂ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೊಳಿಸಲು ಶಿಫಾರಸ್ಸಿಗೆ ಮನವಿ ಮಾಡಿದ್ದಾರೆ.ಸಂಸದ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಲೋಕಸಭೆಯಲ್ಲಿ ವರದಾ- ಬೇಡ್ತಿ ಯೋಜನೆ ಜಾರಿ ಮಾಡುವ ಕುರಿತು ವಿಷಯ ಮಂಡಿಸಿದ ವಿಡಿಯೋ ಕೂಡ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಯೋಜನೆಯಿಂದ ಅಂತರ್ಜಲ ಹೆಚ್ಚಾಗಿ ರೈತರ ಕೃಷಿ ಭೂಮಿಯ ಕೊಳವೆ ಬಾವಿಗಳಿಗೆ ಉತ್ತಮ ನೀರು ದೊರೆತು ನೀರಾವರಿಗೆ ಸಹಕಾರಿಯಾಗಲಿದೆ. ಅಲ್ಲದೆ ಶುದ್ಧ ಕುಡಿಯುವ ನೀರನ್ನು ಗ್ರಾಮ, ಪಟ್ಟಣಗಳಿಗೆ ನೀಡಲು ಸಾಧ್ಯ. ನರೇಂದ್ರ ಮೋದಿ ಅವರ ನೇತೃತ್ವದ ಜನಪರ ಸರ್ಕಾರ ವರದಾ- ಬೇಡ್ತಿ ನದಿ ಜೋಡಣೆಗೆ ಸಹಕರಿಸುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.ಹೊಸ ನಿರೀಕ್ಷೆ: ಜಿಲ್ಲೆಯ ಅದರಲ್ಲೂ ವಿಶೇಷವಾಗಿ ಹಾನಗಲ್ಲ ತಾಲೂಕಿನ ರೈತರು ಕಂಡ ಕನಸು ನನಸಾಗುವ ಕ್ಷಣಗಳು ಹತ್ತಿರವೇ ಬರುತ್ತಿವೆ ಎಂದು ರೈತರು ಭಾವಿಸುತ್ತಿದ್ದಾರೆ. ಹತ್ತಾರು ವರ್ಷಗಳ ಹೋರಾಟಕ್ಕೆ ಜಯ ಸಲ್ಲುತ್ತಿದೆ. ಯೋಜನೆ ಜಾರಿಗೆ ಶಾಸಕರು, ಸಂಸದರು ಅತ್ಯಂತ ಕಾಳಜಿಯಿಂದ ಮುನ್ನಡೆದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸದಾ ಈ ಯೋಜನೆಗಾಗಿ ಹೋರಾಟದ ದೊಡ್ಡ ಹೆಜ್ಜೆ ಹಾಕಿದ ರೈತ ಸಂಘಕ್ಕೂ ಒಂದಷ್ಟು ಭರವಸೆ ಮೂಡಿದೆ. ಆದರೆ ಕೇವಲ ಮನವಿಗೆ ಮಾತ್ರ ಯೋಜನೆ ಸೀಮಿತವಾಗದೇ ಅತ್ಯಂತ ಪ್ರಬಲ ಒತ್ತಡದ ಮೂಲಕ ರೈತರ ಬಾಳು ಹಸನು ಮಾಡಲು ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಒಕ್ಕೊರಲ ಒತ್ತಡ ಸರ್ಕಾರಗಳ ಮೇಲೆ ಹಾಕಿ ವರದಾ- ಬೇಡ್ತಿ ನದಿ ಯೋಜನೆ ಸಾಕಾರಕ್ಕೆ ಸಾಕ್ಷಿಯಾಗಲು ರೈತ ಸಂಘ ಹಾಗೂ ಈ ನಾಡಿನ ರೈತರು ಮತ್ತೊಮ್ಮೆ ಮನವಿ ಮಾಡುತ್ತಿದ್ದಾರೆ. ಬಾಳಂಬೀಡ ಏತ ನೀರಾವರಿ ಯೋಜನೆ ಸಾಕಾರಕ್ಕೆ ಹಲವು ಸರ್ಕಾರಗಳು ಬಂದು ಹೋದವು. ಮಾಜಿ ಸಚಿವ ದಿ. ಸಿ.ಎಂ. ಉದಾಸಿ ಅವರ ಕನಸಿನ ಯೋಜನೆ ಸಾಕಾರವಾಯಿತು. ಅದೇ ರೀತಿ ಮಾಜಿ ಸಚಿವ ದಿ. ಮನೋಹರ ತಹಶೀಲ್ದಾರ ಕೂಡ ತಮ್ಮ ಅಧಿಕಾರಾವಧಿಯಲ್ಲಿ ಯೋಜನೆ ಸಾಕಾರಕ್ಕೆ ಒತ್ತಾಯ ಮಾಡಿದ್ದಾರೆ. ಆದರೆ ವರದಾ ಬೇಡ್ತಿ ಯೋಜನೆ ವಿಳಂಬಕ್ಕೆ ಅವಕಾಶ ಇಲ್ಲದಂತೆ ಕ್ರಮವಾಗಬೇಕೆಂಬುದು ಈ ಭಾಗದ ರೈತರ ಆಶಯ.

ಹೋರಾಟದಿಂದ ವಿರಮಿಸುವುದಿಲ್ಲ: ಕಳೆದ ರಾಜ್ಯ ಬಜೆಟ್‌ನಲ್ಲಿ ಈ ಯೋಜನೆಗೆ ಹಣ ಮೀಸಲಿಡುವ ಭರವಸೆ ಇತ್ತು. ಅದು ಆಗಿಲ್ಲ. ಈಗ ಏನಾಗುತ್ತದೆಯೋ ಕಾದು ನೋಡುತ್ತೇವೆ. ಯೋಜನೆ ರೂಪುಗೊಳ್ಳುವವರೆಗೂ ಹೋರಾಟದಿಂದ ವಿರಮಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.ಸಿಎಂಗೆ ಮೊರೆ: ಅದಷ್ಟು ಬೇಗ ಯೋಜನೆ ಕಾರ್ಯರೂಪಕ್ಕೆ ಬರಲು ಸಹಕರಿಸಲು ಇನ್ನೊಮ್ಮೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿನಂತಿಸಲಿದ್ದೇವೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ