ಬೆಳ್ತಂಗಡಿ: ಹೆಜ್ಜೇನು ದಾಳಿಗೊಳಗಾದ ಬಾಲಕನನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿಯೊಬ್ಬರು ರಕ್ಷಿಸಿ, ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಹೆಜ್ಜೇನು ದಾಳಿಯಿಂದ ನೋವು, ಉರಿ ತಾಳಲಾರದೆ ಅತ್ತು ಕರೆದರೂ ರಕ್ಷಣೆಗೆ ಯಾರು ಬರಲಿಲ್ಲ. ಕೊನೆಗೆ ಬಾಲಕ ಪಂಚಾಯಿತಿ ಬಳಿ ಓಡಿದ್ದಾನೆ. ಅಲ್ಲಿದ್ದ ಪಂಚಾಯಿತಿ ಲೈಬ್ರೇರಿಯನ್ ಚಂದ್ರಾವತಿ ಅವರು ಬಾಲಕನನ್ನು ನೋಡಿದ್ದು, ಬಾಲಕನನ್ನು ಪಂಚಾಯಿತಿ ಒಳಗೆ ಕರೆದುಕೊಂಡು ಹೋದರು. ಆದರೂ ಹೆಜ್ಜೇನುಗಳು ಬಾಲಕನ ಮೇಲೆ ದಾಳಿ ನಡೆಸಿದವು. ಚಂದ್ರಾವತಿಯವರು ಪೊರಕೆಯಿಂದ ಬಹಳಷ್ಟು ಸಂಖ್ಯೆಯಲ್ಲಿದ್ದ ಹೆಜ್ಜೇನುಗಳನ್ನು ಕೊಂದು ಬಾಲಕನ ಬಟ್ಟೆ ತೆಗೆಸಿ ಹೆಜ್ಜೇನುಗಳ ಮುಳ್ಳುಗಳನ್ನು ತೆಗೆದು ಮನೆಯವರಿಗೆ ಮಾಹಿತಿ ನೀಡಿದರು.
ಬಳಿಕ ಬಾಲಕನನ್ನು ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಬಾಲಕ ಚೇತರಿಸಿಕೊಂಡಿದ್ದು ಆರೋಗ್ಯವಾಗಿದ್ದಾನೆ. ಚಂದ್ರಾವತಿ ಅವರ ಸಮಯ ಪ್ರಜ್ಞೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.