ಕನ್ನಡಪ್ರಭ ವಾರ್ತೆ ಬೆಂಗಳೂರು
ಅಕ್ರಮವಾಗಿ ಮದ್ಯ ಮಾರಾಟ ಆರೋಪದ ಮೇಲೆ ತುಮಕೂರು ಜಿಲ್ಲೆಯ ಮಣಿಕುಪ್ಪೆ ಗ್ರಾಮದ ಯಶೋಧಮ್ಮ ವಿರುದ್ಧ ಗುಬ್ಬಿ ವಲಯದ ಅಬಕಾರಿ ಪೊಲೀಸರು ದಾಖಲಿಸಿದ್ದ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿದೆ. ಪ್ರಕರಣ ಸಂಬಂಧ ತನ್ನ ವಿರುದ್ಧ ದಾಖಲಿಸಿರುವ ಎಫ್ಐಆರ್ ಹಾಗೂ ಅದಕ್ಕೆ ಸಂಬಂಧಿಸಿದ ಗುಬ್ಬಿಯ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್ ವಿಚಾರಣೆ ರದ್ದುಪಡಿಸುವಂತೆ ಕೋರಿ ಯಶೋಧಮ್ಮ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಮಧ್ಯಂತರ ಆದೇಶ ಮಾಡಿದೆ. ಹಾಗೆಯೇ, ಅರ್ಜಿಯಲ್ಲಿ ಪ್ರತಿವಾದಿಯಾದ ಅಬಕಾರಿ ಇಲಾಖೆ ಗುಬ್ಬಿ ವಲಯದ ಉಪ ನಿರೀಕ್ಷಕರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಅರ್ಜಿದಾರ ಪರ ವಕೀಲೆ, ಅರ್ಜಿದಾರರ ವಿರುದ್ಧ ಅಬಕಾರಿ ಇಲಾಖೆ ಅಡಿ ಪ್ರಕರಣ ದಾಖಲಿಸಲಾಗಿದೆ. 7.8 ಲೀಟರ್ ಬಿಯರ್ ಹಾಗೂ 22 ಲೀಟರ್ ವಿವಿಧ ಬಗೆಯ ಲಿಕ್ಕರ್ ವಶಪಡಿಸಿಕೊಂಡಿದ್ದಾರೆ. ಇವುಗಳನ್ನು ಕೃಷಿ ಕೆಲಸಗಾರರಿಗೆ ವಿತರಿಸಲು ಅರ್ಜಿದಾರರು ಇಟ್ಟುಕೊಂಡಿದ್ದರು ಎಂದರು.ಈ ಉತ್ತರಕ್ಕೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿ, ಕೃಷಿ ಕೆಲಸಗಾರರು ಹೆಚ್ಚು ಕೆಲಸ ಮಾಡಲಿ ಎಂದು ಅರ್ಜಿದಾರರು ಬಯಸುತ್ತಿದ್ದಾರೆಯೇ, ಹಳ್ಳಿಗಳಿಂದ ಕೆಲಸಗಾರರು ಸುಸ್ತಾಗಿ ಬಂದವರಿಗೆ ಬಿಯರ್ ಕೊಡೋಣ ಅಂತಾನಾ? ಏನ್ರಿ ಇದೆಲ್ಲಾ? ಪರವಾನಗಿ ಪಡೆದಿದ್ದರೆ ಪರವಾಗಿರಲಿಲ್ಲ. ಆದರೆ, ಟೊಮೆಟೋ ಸಾಸ್ ಪಕ್ಕ ಲಿಕ್ಕರ್ ಇಟ್ಟು ಮಾರಾಟ ಮಾಡಲು ಆಗುವುದಿಲ್ಲ. ಇದು ಅಬಕಾರಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ನ್ಯಾಯಮೂರ್ತಿ ಹೇಳಿದರು.
ನಂತರ ಪ್ರಕರಣದಲ್ಲಿ ಪೊಲೀಸರು ಅಬಕಾರಿ ಕಾಯ್ದೆ ಸೆಕ್ಷನ್ 53 ಪಾಲಿಸಿಲ್ಲ ಎಂಬ ಆಧಾರದಲ್ಲಿ ಅರ್ಜಿದಾರರ ವಿರುದ್ಧದ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ ನ್ಯಾಯಮೂರ್ತಿಗಳು. ಪ್ರಾವಿಷನ್ ಸ್ಟೋರ್‌ನಲ್ಲಿ ಲಿಕ್ಕರ್ ಮತ್ತೆ ಇಡಬೇಡಿ ಎಂದು ಸೂಚಿಸಿ ಅರ್ಜಿ ವಿಚಾರಣೆ ಮುಂದೂಡಿದರು.