ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು : ರಾಜ್ಯದಲ್ಲಿ ‘ಬಿಸಿಲ ಝಳ’ ಹಾಗೂ ‘ಚುನಾವಣೆ ಬಿಸಿ’ಯ ಪರಿಣಾಮ ಏಪ್ರಿಲ್ ತಿಂಗಳಿನಲ್ಲಿ ಬಿಯರ್ ಮಾರಾಟದಲ್ಲಿ ಸಾರ್ವಕಾಲಿಕ ‘ದಾಖಲೆ’ ಸೃಷ್ಟಿಯಾಗಿದೆ. ಒಂದು ತಿಂಗಳಿನಲ್ಲೇ ಬರೋಬ್ಬರಿ 48.72 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿ ಅಬಕಾರಿ ಇಲಾಖೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ.
ಎಲ್ಲೆಡೆ ಬಿಸಿಲ ಧಗೆ ಹೆಚ್ಚಾಗಿರುವುದರಿಂದ ಮದ್ಯಪ್ರಿಯರು ‘ಚಿಲ್’ ಆಗಲು ಬಿಯರ್‌ಗೆ ಮೊರೆ ಹೋಗುತ್ತಿದ್ದಾರೆ. ಜೊತೆಗೆ ಲೋಕಸಭಾ ಚುನಾವಣೆಯೂ ‘ಸಾಥ್’ ನೀಡಿದ್ದರಿಂದ ಏಪ್ರಿಲ್‌ನಲ್ಲಿ 48.72 ಲಕ್ಷ ಬಾಕ್ಸ್ (ಒಂದು ಬಾಕ್ಸ್‌ನಲ್ಲಿ 7.8 ಲೀಟರ್), ಅಂದರೆ 3.87 ಕೋಟಿ ಲೀಟರ್ ಬಿಯರ್ ಮಾರಾಟವಾಗಿದೆ. ಅಬಕಾರಿ ಇಲಾಖೆಯ ‘ಇತಿಹಾಸ’ದಲ್ಲೇ ಒಂದು ತಿಂಗಳಿನಲ್ಲಿ ಇಷ್ಟೊಂದು ಪ್ರಮಾಣದ ಬಿಯರ್ ಮಾರಾಟವಾಗಿರುವುದು ಇದೇ ಮೊದಲು.
ಕಳೆದ ವರ್ಷ ಏಪ್ರಿಲ್‌ನಲ್ಲಿ 38.59 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಪ್ರಸಕ್ತ ಏಪ್ರಿಲ್‌ನಲ್ಲಿ 11.13 ಲಕ್ಷ ಬಾಕ್ಸ್ ಬಿಯರ್ ಹೆಚ್ಚಾಗಿ ಮಾರಾಟವಾಗಿದೆ. ಲೋಕಸಭಾ ಚುನಾವಣೆಯ ಮೊದಲನೇ ಹಂತ ಮುಕ್ತಾಯವಾಗಿ ಎರಡನೇ ಹಂತಕ್ಕೆ ಕ್ಷಣಗಣನೆ ಆರಂಭವಾಗಿದ್ದು ಮೇ ಮೊದಲನೇ ವಾರವೂ ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ಮಾರಾಟವಾಗಿದೆ.
ಯಾವ್ಯಾವ ವರ್ಷ ಏಪ್ರಿಲ್‌ನಲ್ಲಿ, ಎಷ್ಟೆಷ್ಟು ಮಾರಾಟ ?
ಏಪ್ರಿಲ್ ತಿಂಗಳುಗಳ ಅಂಕಿ ಅಂಶಗಳನ್ನು ಗಮನಿಸುವುದಾದರೆ, 2018 ರಲ್ಲಿ 27.39 ಲಕ್ಷ ಬಾಕ್ಸ್, 2019 ರಲ್ಲಿ 26.82 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. 2020 ರ ಏಪ್ರಿಲ್‌ನಲ್ಲಿ ಕೋವಿಡ್ ಲಾಕ್‌ಡೌನ್‌ನಿಂದಾಗಿ ಮದ್ಯ ಮಾರಾಟಕ್ಕೆ ನಿರ್ಬಂಧವಿತ್ತು. 2021 ರಲ್ಲಿ 25.72 ಲಕ್ಷ ಬಾಕ್ಸ್, 2022 ರಲ್ಲಿ 36.84 ಲಕ್ಷ ಬಾಕ್ಸ್, ಕಳೆದ ವರ್ಷದ ಏಪ್ರಿಲ್‌ನಲ್ಲಿ 38.59 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಇದೀಗ 48.72 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ
ಐಎಂಎಲ್ ಮದ್ಯ ಮಾರಾಟಕ್ಕೆ ‘ಹೊಡೆತ’
ಬಿಯರ್ ಮಾರಾಟ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದರೆ, ಇದಕ್ಕೆ ತದ್ವಿರುದ್ಧವಾಗಿ ಐಎಂಎಲ್ ಮದ್ಯ ಮಾರಾಟ ಮೂರ್ನಾಲ್ಕು ತಿಂಗಳಿನಿಂದೀಚೆಗೆ ಬಹಳಷ್ಟು ಕಡಿಮೆಯಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಬಿಯರ್‌ನತ್ತ ‘ವಾಲು’ತ್ತಿರುವುದರಿಂದ ಐಎಂಎಲ್ ಮದ್ಯ ಮಾರಾಟ ಕಡಿಮೆಯಾಗುತ್ತಿದೆ ಎಂದು ಹೇಳಲಾಗಿದೆ. ಪ್ರಸಕ್ತ ಸಾಲಿನ ಜನವರಿಯಲ್ಲಿ 57.74 ಲಕ್ಷ ಬಾಕ್ಸ್ (ಒಂದು ಬಾಕ್ಸ್‌ಗೆ 8.64 ಲೀಟರ್) ಐಎಂಎಲ್ ಮದ್ಯ ಮಾರಾಟವಾಗಿದ್ದು ಫೆಬ್ರವರಿಯಲ್ಲಿ 57.46 ಲಕ್ಷ ಬಾಕ್ಸ್, ಮಾರ್ಚ್‌ನಲ್ಲಿ 57.07 ಲಕ್ಷ ಬಾಕ್ಸ್, ಏಪ್ರಿಲ್‌ನಲ್ಲಿ 54.46 ಲಕ್ಷ ಬಾಕ್ಸ್‌ಗೆ ಇಳಿಮುಖವಾಗಿದೆ. ಆದರೆ 2023 ರ ಏಪ್ರಿಲ್‌ನಲ್ಲಿ ಐಎಂಎಲ್ ಮದ್ಯ 52.90 ಲಕ್ಷ ಬಾಕ್ಸ್ ಮಾರಾಟವಾಗಿದ್ದರೆ, ಪ್ರಸಕ್ತ ಏಪ್ರಿಲ್‌ನಲ್ಲಿ 54.46 ಲಕ್ಷ ಬಾಕ್ಸ್ ಮಾರಾಟವಾಗಿದೆ. ಅಂದರೆ, ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ಒಂದೂವರೆ ಲಕ್ಷಕ್ಕೂ ಅಧಿಕ ಬಾಕ್ಸ್ ಬಿಕರಿಯಾದಂತಾಗಿದೆ.