ಹೊಸಪೇಟೆ: ಲೋಕಸಭಾ ಚುನಾವಣೆಗೆ ಮೇ 7ರಂದು ಮತದಾನ ನಡೆಯಲಿದ್ದು, ನಗರದ ಲಿಟ್ಲ್ ಫ್ಲವರ್ ಶಾಲೆಯ ಮಸ್ಟರಿಂಗ್ ಕೇಂದ್ರ ಸೇರಿದಂತೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರಗಳಿಂದ ಚುನಾವಣಾ ಸಿಬ್ಬಂದಿ ಇವಿಎಂ ಮತಯಂತ್ರ, ಕಂಟ್ರೋಲ್ ಯುನಿಟ್, ವಿವಿ ಪ್ಯಾಟ್‌ನೊಂದಿಗೆ ಮತಗಟ್ಟೆಗಳತ್ತ ಸೋಮವಾರ ಉತ್ಸಾಹದೊಂದಿಗೆ ಹೆಜ್ಜೆ ಹಾಕಿದರು.
ಚುನಾವಣಾ ಸಿಬ್ಬಂದಿ: ಜಿಲ್ಲೆಯಲ್ಲಿ ಮತದಾನಕ್ಕೆ ಅಗತ್ಯ ಕ್ರಮ ವಹಿಸಿದ್ದು, ಒಟ್ಟು 5,872 ಸಿಬ್ಬಂದಿ, ಅಧಿಕಾರಿಗಳನ್ನು ಚುನಾವಣೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಬರುವ ಹೂವಿನ ಹಡಗಲಿ 1044, ಹಗರಿಬೊಮ್ಮನಹಳ್ಳಿ 1200, ವಿಜಯನಗರ 1216, ಕೂಡ್ಲಿಗಿ 1200 ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 1212 ಸಿಬ್ಬಂದಿ ನೇಮಿಸಲಾಗಿದೆ. ವಿವಿಧ ತಂಡಗಳನ್ನು ರಚಿಸಿದ್ದು, ಜಿಲ್ಲೆಯಲ್ಲಿ 1234 ಬಿಎಲ್‌ಒ, 111 ಸೆಕ್ಟರ್ ಅಧಿಕಾರಿ, 20 ಎಫ್‌ಎಸ್‌ಟಿ ತಂಡ, 18 ಎಸ್‌ಎಸ್‌ಟಿ ತಂಡ, 23 ವಿಎಸ್‌ಟಿ ತಂಡ, 5 ವಿವಿಟಿ ತಂಡ ಹಾಗೂ 10 ಎಂಸಿಸಿ ತಂಡಗಳನ್ನು ರಚಿಸಲಾಗಿದೆ. ಚುನಾವಣಾ ಸಿಬ್ಬಂದಿಗೆ ಮತಗಟ್ಟೆಗಳಿಗೆ ತೆರಳಲು 252 ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಹಡಗಲಿ 39, ಹಗರಿಬೊಮ್ಮನಹಳ್ಳಿ 52, ವಿಜಯನಗರ 57, ಕೂಡ್ಲಿಗಿ 62 ಸೇರಿ ಒಟ್ಟು 178 ಹಾಗೂ ಹರಪನಹಳ್ಳಿ 52 ಸೇರಿ ಒಟ್ಟು 252 ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಚುನಾವಣಾ ಸಿಬ್ಬಂದಿ ಮತಯಂತ್ರಗಳೊಂದಿಗೆ ಮತಗಟ್ಟೆಗಳತ್ತ ಸಂತೋಷದಿಂದಲೇ ಹೆಜ್ಜೆ ಹಾಕಿದರು.
ಹಡಗಲಿ ಕ್ಷೇತ್ರದಲ್ಲಿ 38, ಹಗರಿಬೊಮ್ಮನಹಳ್ಳಿ 47, ವಿಜಯನಗರ 40 ಹಾಗೂ ಕೂಡ್ಲಿಗಿ 49 ಸೇರಿ 178 ಹಾಗೂ ಹರಪನಹಳ್ಳಿ ಕ್ಷೇತ್ರದಲ್ಲಿ 70 ಸೇರಿ ಒಟ್ಟು 244 ಮತಗಟ್ಟೆ ಕೇಂದ್ರಗಳಲ್ಲಿ ವೆಬ್‌ಕ್ಯಾಸ್ಟಿಂಗ್ ಮತ್ತು 267 ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ. ಹಿರಿಯ ಮತದಾರರ ಮತದಾನ ಪ್ರಕ್ರಿಯೆ ನಡೆದಿದೆ. ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿದ್ದ 721ರ ಪೈಕಿ 686 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ವಿಕಲಚೇತನ ಮತದಾರರು 487ರಲ್ಲಿ 479 ಮತದಾರರು ಹಕ್ಕು ಚಲಾಯಿಸಿದ್ದಾರೆ. ಇನ್ನೂ ಅಂಚೆ ಮತದಾನದ ವ್ಯವಸ್ಥೆಯೂ ಮಾಡಲಾಗಿದೆ.ಭದ್ರತಾ ಸಿಬ್ಬಂದಿ: ಜಿಲ್ಲೆಯ ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳಿಗೆ 2,435 ಪೊಲೀಸರು ಹಾಗೂ ಹೋಂ ಗಾರ್ಡ್‌ಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಈ ಪೈಕಿ ತಲಾ ಒಬ್ಬರು ಎಸ್ಪಿ ಹಾಗೂ ಹೆಚ್ಚುವರಿ ಎಸ್ಪಿ, 7 ಜನ ಡಿವೈಎಸ್ಪಿ, 19 ಸಿಪಿಐ, 46 ಪಿಎಸ್‌ಐ, 117 ಎಎಸ್‌ಐ, 1305 ಪೊಲೀಸ್ ಸಿಬ್ಬಂದಿ ಮತ್ತು 950 ಹೋಂ ಗಾರ್ಡ್‌ಗಳು, ನಾಲ್ಕು ಕೆಎಸ್‌ಆರ್‌ಪಿ ತುಕಡಿ ಮತ್ತು ಮೂರು ವಿಶೇಷ ತುಕಡಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ ಎಂದು ಎಸ್ಪಿ ಶ್ರೀಹರಿಬಾಬು ತಿಳಿಸಿದ್ದಾರೆ.
ಚಿಕ್ಕಮಕ್ಕಳೊಂದಿಗೆ ಆಗಮಿಸಿದ ಶಿಕ್ಷಕಿಯರು: ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದರಿಂದ ಚಿಕ್ಕ ಮಕ್ಕಳೊಂದಿಗೆ ಕೆಲ ಶಿಕ್ಷಕಿಯರು ಮಸ್ಟರಿಂಗ್ ಕೇಂದ್ರಗಳಿಗೆ ಆಗಮಿಸಿದ್ದರು. ಈ ವೇಳೆ, ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿ ಮನೆಗೆ ವಾಪಸ್ ಕಳುಹಿಸಿದರು.ಗುರುತಿನ ಚೀಟಿಗೆ ಪರ್ಯಾಯ ದಾಖಲೆಗಳು:
ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಹಿನ್ನೆಲೆಯಲ್ಲಿ ಮೇ 7ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಗೆ ಪರ್ಯಾಯ ದಾಖಲೆಗಳ ಮೂಲಕವು ಸಹ ಮತ ಚಲಾವಣೆ ಮಾಡಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.ಮತದಾರರ ಪಟ್ಟಿಯಲ್ಲಿ ನೋಂದಾಯಿತ ಮತದಾರರು ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಹೊರತುಪಡಿಸಿ ಆಧಾರ್ ಕಾರ್ಡ್, ನರೇಗಾ ಜಾಬ್‌ಕಾರ್ಡ್, ಬ್ಯಾಂಕ್ ಅಂಚೆ ಕಚೇರಿ ನೀಡಿರುವ ಭಾವಚಿತ್ರವಿರುವ ಪಾಸ್‌ಬುಕ್, ಕಾರ್ಮಿಕ ಸಚಿವಾಲಯದಿಂದ ನೀಡಿರುವ ಆರೋಗ್ಯ ವಿಮೆ ಕಾರ್ಡ್, ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್), ವಿಶೇಷ ಚೇತನರ ಗುರುತಿನ ಚೀಟಿ, ಪ್ಯಾನ್‌ಕಾರ್ಡ್, ಎಂ.ಪಿ.ಆರ್‌ನ ಅಡಿಯಲ್ಲಿ ಆರ್.ಜಿ.ಐ ನೀಡಿರುವ ಸ್ಮಾಟ್‌ಕಾರ್ಡ್, ಭಾರತೀಯ ಪಾಸ್ ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ/ರಾಜ್ಯ/ಪಿ.ಎಸ್.ಯು ಗಳ ಸೇವಾ ಗುರುತಿನ ಚೀಟಿ, ಎಂ.ಪಿ/ಎಂ.ಎಲ್.ಎ/ಎಂ.ಎಲ್.ಸಿ ಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಯಂತಹ ಪರ್ಯಾಯ ದಾಖಲೆಗಳನ್ನು ಮತಗಟ್ಟೆಗಳಲ್ಲಿ ತೋರಿಸಿ ಮತದಾನ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಮುಕ್ತ, ನ್ಯಾಯ ಸಮ್ಮತ, ಪಾರದರ್ಶಕ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಲಾಗಿದೆ. ಜಿಲ್ಲೆಯ 1234 ಮತಗಟ್ಟೆಗಳಲ್ಲೂ ಅಗತ್ಯ ಚುನಾವಣಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹವಾಮಾನ ಇಲಾಖೆ ಮಳೆ ಬೀಳಲಿದೆ ಎಂದು ಮುನ್ಸೂಚನೆಯೂ ನೀಡಿದೆ. ನಾವು ಎಲ್ಲಾ ಮತದಾನ ಶಾಂತಿಯುತ ಹಾಗೂ ಸರಾಗವಾಗಿ ನಡೆಯಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ.