ದಾವಣಗೆರೆ: ಮುಜರಾಯಿ ಇಲಾಖೆಗೆ ಸೇರಿದ ಇಲ್ಲಿನ ಹೈಸ್ಕೂಲ್ ಮೈದಾನಕ್ಕೆ ಹೊಂದಿಕೊಂಡಿರುವ ಕುರುಬರ ಕುಲದೈವ ಶ್ರೀ ಬೀರಲಿಂಗೇಶ್ವರ ದೇವಸ್ಥಾನವನ್ನು ಯಾರ ಚಿತಾವಣೆ ಮೇರೆಗೆ ಕೆಡವಿಸಲಾಗಿದೆಯೆಂಬುದನ್ನು ಇನ್ನೊಂದು ವಾರದಲ್ಲೇ ತಹಸೀಲ್ದಾರ್ ಬಹಿರಂಗಪಡಿಸಬೇಕು, ದೇವಸ್ಥಾನ ಕೆಡವಿದ ಪ್ರಕರಣ ಉನ್ನತಮಟ್ಟದ ತನಿಖೆಗೊಪ್ಪಿಸುವಂತೆ ಶ್ರೀ ಬೀರದೇವರ ಜಾಗದ ಅಭಿವೃದ್ಧಿ ಟ್ರಸ್ಟ್ ಜಿಲ್ಲಾಡಳಿತಕ್ಕೆ ತಾಕೀತು ಮಾಡಿದೆ.
ಶ್ರೀ ಬೀರೇಶ್ವರ ದೇವಸ್ಥಾನ ಶಿಥಿಲಗೊಂಡಿದ್ದನ್ನೇ ನೆಪ ಮಾಡಿಕೊಂಡು, ಕೇವಲ ₹29.65 ಲಕ್ಷ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದನ್ನು ತಕ್ಷಣ ಹಿಂಪಡೆಯಬೇಕು. ಈ ದೇವಸ್ಥಾನದ ಹಿನ್ನೆಲೆ, ಮಹತ್ವ, ಪಾವಿತ್ರ್ಯತೆಯ ಅರಿವಿಲ್ಲದಂತೆ ಮುಜರಾಯಿ ಇಲಾಖೆಯ ಯಾವ ಅಧಿಕಾರಿ ಇಂತಹ ಕೆಲಸ ಮಾಡಿಸಿದ್ದಾರೋ ತಕ್ಷಣ ಆ ಅಧಿಕಾರಿ ವಿರುದ್ಧವೂ ಕಾನೂನುಕ್ರಮ ಆಗಬೇಕು. ಸಮಾಜದ ಜೊತೆಗೆ ಚರ್ಚಿಸಿ, ಸಮಾಜದ ಒಪ್ಪಿಗೆಯೇ ಇಲ್ಲದೇ ದೇವಸ್ಥಾನ ಕೆಡವಿದ್ದು ಅಕ್ಷಮ್ಯ ಎಂದು ಆಕ್ಷೇಪಿಸಿದರು.
ರಾಜ್ಯ ಸರ್ಕಾರ ಧಾರ್ಮಿಕ ದತ್ತಿ ಯೋಜನೆಯಡಿ ಶ್ರೀ ಬೀರೇಶ್ವರ ದೇವಸ್ಥಾನ ಹೊಸದಾಗಿ ನಿರ್ಮಿಸಲು ಇ-ಪ್ರಕ್ಯೂರಮೆಂಟ್‌ನಲ್ಲಿ ಟೆಂಡರ್ ಕರೆದಿದ್ದಾರೆ. ಟೆಂಡರ್ ಮೊತ್ತ ಕೇವಲ ₹29.65 ಲಕ್ಷ ನಿಗದಿಪಡಿಸಿ, ಕುರುಬ ಸಮುದಾಯದ ಜನರ ಆಕ್ರೋಶಕ್ಕೂ ಇಲಾಖೆ ಕಾರಣವಾಗಿದೆ. ಲಕ್ಷಾಂತರ ಭಕ್ತರನ್ನು ಹೊಂದಿರುವ ಇಂತಹ ದೇವಸ್ಥಾನವನ್ನು ಕನಿಷ್ಠ ₹50 ಕೋಟಿ ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿ, ದೇವಸ್ಥಾನವನ್ನು ಪುನರುಜ್ಜೀವನಗೊಳಿಸಬೇಕಾಗಿತ್ತು. ಆದರೆ, ಮುಜರಾಯಿ ಇಲಾಖೆ ಅಧಿಕಾರಿಗಳು, ದಾವಣಗೆರೆ ತಾಲೂಕು ಆಡಳಿತ, ತಹಸೀಲ್ದಾರ್ ಕುರುಬರ ಧಾರ್ಮಿಕ ಭಾವನೆಗೆ ಕೊಳ್ಳಿ ಇಡುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.ದೇವಸ್ಥಾನ ಕೆಡವಿ ವರ್ಷವೇ ಕಳೆಯುತ್ತಿದ್ದು, ಶ್ರೀ ಬೀರೇಶ್ವರ ದೇವರಿಗೆ ಅಲ್ಲಿಗೆ ಪೂಜೆ, ಪುನಸ್ಕಾರ ಸೇರಿದಂತೆ ಯಾವುದೇ ಧಾರ್ಮಿಕ ಆಚರಣೆಗಳೇ ನಡೆಯುತ್ತಿಲ್ಲ. ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ನಂತರದ ಪ್ರಮುಖ ದೇವಸ್ಥಾನ ಇದಾಗಿದೆ. ಕಳೆದ 2-3 ವರ್ಷದಿಂದ ದೇವರಿಗೆ ಪೂಜೆಯೇ ನಡೆಯದ ಹಿನ್ನೆಲೆಯಲ್ಲಿ ನಾವೂ ನೋಡಿ ನೋಡಿ ರೋಸಿ, ಹೋಗಿ ಇದೀಗ ಮಾಧ್ಯಮಗಳ ಮೂಲಕ ಮುಜರಾಯಿ ಇಲಾಖೆ, ತಹಸೀಲ್ದಾರ್‌ಗೆ ಎಚ್ಚರಿಕೆ ನೀಡುವ ಮೂಲಕ ದೇವಸ್ಥಾನ ಕೆಡವಿದ ಪ್ರಕರಣ ಉನ್ನತ ತನಿಖೆಗೆ ಒತ್ತಾಯಿಸುತ್ತಿದ್ದೇವೆ ಎಂದರು.
ಹಳೆ ಪಿಬಿ ರಸ್ತೆಗೆ ಹೊಂದಿಕೊಂಡಿರುವ ಈ ದೇವಸ್ಥಾನ ಹಿಂದಿನಿಂದಲೂ ಪ್ರಸಿದ್ಧಿ ಪಡೆದಿದೆ. ಯಾವುದೇ ಹೋರಾಟ, ಪ್ರತಿಭಟನೆ, ಸಭೆ, ಸಮಾರಂಭ, ಸಮಾವೇಶ ನಡೆದರೂ ಇಲ್ಲಿ ಶ್ರೀ ಬೀರಪ್ಪನಿಗೆ ಪೂಜೆ ಸಲ್ಲಿಸಿದ ನಂತರವೇ ಆರಂಭವಾಗುತ್ತಿದ್ದ ಸಂತ್ಸಪ್ರದಾಯವಿತ್ತು. ಜಿಲ್ಲಾ ಕೇಂದ್ರದ ಧಾರ್ಮಿಕ ಕೇಂದ್ರವನ್ನೇ ಕೆಡವಿಸಿದ್ದು ಯಾರೆಂಬುದು ಬಹಿರಂಗಗೊಳಿಸಲಿ ಎಂದು ಅವರು ಆಗ್ರಹಿಸಿದರು.ತಕ್ಷಣವೇ ಹೊಸದಾಗಿ ಶ್ರೀ ಬೀರೇಶ್ವರ ದೇವಸ್ಥಾನವನ್ನು ನಿರ್ಮಾಣ ಮಾಡುವ ಬಗ್ಗೆ ಸಮಾಜದ ಮುಖಂಡರು, ಪ್ರಮುಖರು, ಸಮಾಜ ಬಾಂಧವರ ಸಭೆಯನ್ನು ಸರ್ಕಾರ ಕರೆಯಬೇಕು. ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿರುವ ಶ್ರೀ ಬೀರಪ್ಪನ ದೇವಸ್ಥಾನವನ್ನು ಕಟ್ಟಲು ಕೇವಲ ₹29.65 ಲಕ್ಷಕ್ಕೆ ಕರೆದ ಟೆಂಡರ್ ರದ್ದುಪಡಿಸಿ, ಹೊಸದಾಗಿ ಕನಿಷ್ಠ ₹50 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಟೆಂಡರ್ ಕರೆಯಬೇಕು. ದೇವಸ್ಥಾನಕ್ಕೆ ಮುಂಚೆ ಇದ್ದಂತಹ ಪ್ರಾಶಸ್ತ್ಯವನ್ನೇ ಮರಳಿ ತಂದು, ಪುನರುಜ್ಜೀವನಗೊಳಿಸಲು ಭಕ್ತರ ಸಲಹಾ ಸಮಿತಿ ರಚಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ, ಹಿರಿಯ ವಕೀಲ ಲೋಕಿಕೆರೆ ಸಿದ್ದಪ್ಪ, ಖಜಾಂಚಿ ಎಚ್.ವೈ.ಶಶಿಧರ, ಪದಾಧಿಕಾರಿಗಳಾದ ಎನ್.ಜೆ.ನಿಂಗಪ್ಪ, ಚಂದ್ರು ದೀಟೂರು, ಜಮ್ನಳ್ಳಿ ನಾಗರಾಜ, ಕುಂದುವಾಡ ಎಚ್.ಜಿ.ಗಣೇಶಪ್ಪ, ಎಲ್.ಬಿ.ಭೈರೇಶ, ಯಕ್ಕನಹಳ್ಳಿ ದ್ಯಾಮಣ್ಣ, ಎಸ್.ಎಂ.ಸಿದ್ದಲಿಂಗಪ್ಪ, ಎಸ್.ಎಂ.ಬಸವರಾಜ ಹಾಲುವರ್ತಿ, ಷಣ್ಮುಖಪ್ಪ, ಲೋಕಿಕೆರೆ ಶಂಕರಮೂರ್ತಿ ಇತರರಿದ್ದರು.