ಮೂಲ್ಕಿ: ಜೇನು ಹಾಗೂ ಮೇಣದಿಂದ 25ಕ್ಕೂ ಹೆಚ್ಚು ಉಪಉತ್ಪನ್ನಗಳನ್ನು ತಯಾರಿಸಿ ಸಾಧನೆ ಮಾಡಿರುವ ಕಿನ್ನಿಗೋಳಿ ಗೋಳಿಜೋರದ ಪ್ರಜ್ವಲ್ ಎಂ. ಜೇನುಮೇಣದಿಂದ ತಯಾರಿಸಿದ ಚೆಸ್ ಬೋರ್ಡು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿದೆ.
ಬೆಂಗಳೂರಿನ ಪ್ರದರ್ಶನದಲ್ಲಿ ಚೆಸ್ ಬೋರ್ಡ್ ನೋಡಿದ ಇಲಾಖಾ ಅಧಿಕಾರಿಗಳು ಹೀಗಿದ್ದೊಂದು ಪ್ರಯತ್ನವನ್ನು ಭಾರತದಲ್ಲೇ ಪ್ರಥಮ ಬಾರಿಗೆ ಮಾಡಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿಸಲು ಪ್ರಯತ್ನಿಸುವಂತೆ ಸೂಚಿಸಿದ್ದರು. ಇದೀಗ ಪ್ರಜ್ವಲ್ ತಯಾರಿಸಿದ ಜೇನುಮೇಣದ ಚೆಸ್ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿದೆ. ಗೋಳಿಜೋರದ ಸುನೀತಾ -ಮಾಧವ ಶೆಟ್ಟಿಗಾರ್ ಅವರ ಪುತ್ರ ಪ್ರಜ್ವಲ್ ಎಂಬಿಎ ಪದವೀಧರ. ಆರು ವರುಷಗಳಿಂದ ಜೇನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಈ ವರುಷ ಕಿನ್ನಿಗೋಳಿ ಪರಿಸರದಲ್ಲಿ ೨೫೦ರಷ್ಟು ಜೇನು ಪೆಟ್ಟಿಗೆ ಇಟ್ಟಿದ್ದಾರೆ. ಜೇನು ಕೃಷಿಯ ಜೊತೆಗೆ ಜೇನು ಹಾಗೂ ಮೇಣದ ಉಪ ಉತ್ಪನ್ನಗಳನ್ನು ತಯಾರಿಸಲು ತೊಡಗಿದರು.
ಪ್ರಯೋಗ, ಅಧ್ಯಯನಗಳ ಮೂಲಕ ಕಾಡಿಗೆ, ಐದಾರು ಬಗೆಯ ಕ್ರೀಮುಗಳು, ಟರ್ಮರಿಕ್ ಬಾಮ್, ನೀಮ್ ಬಾಮ್, ಒಣ ಚರ್ಮಗಳಿಗೆ ಹಚ್ಚುವ ಸ್ಕಿನ್ ಬಾಮ್, ಒಣತುಟಿಗೆ ಲಿಪ್ ಬಾಮ್, ಇದರಲ್ಲೂ ತೆಂಗಿನಕಾಯಿ, ಕಾಫಿ, ಬೀಟ್ರೂಟ್‌ಗಳನ್ನು ಜೇನುಮೇಣದೊಂದಿಗೆ ಸೇರಿಸಿ ಮಾಡಿದ ಬಾಮ್, ಡ್ರೈಫ್ರುಟ್ ಹನಿ, ಹನಿ ಜಾಮ್, ಕಾರಂಗ ಕ್ರೀಮ್ ಹೀಗೆ ಇಪ್ಪತ್ತೈದಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಇವುಗಳಿಗೆ ಬೇಡಿಕೆಯೂ ಉತ್ತಮವಿದೆ.ಜೇನು ಕೃಷಿಯಲ್ಲಿ ಸಂಶೋಧನೆಯ ಜೊತೆಗೆ ಆಸಕ್ತರಿಗೆ ಜೇನುಕೃಷಿ ತರಬೇತಿಯನ್ನೂ ನೀಡುತ್ತಿದ್ದಾರೆ. ತರಬೇತಿ ಶಿಬಿರಗಳನ್ನೂ ಆಯೋಜಿಸುತ್ತ ಬಂದಿದ್ದಾರೆ. ವಿವಿಧ ಶಾಲೆಗಳ ವಿದ್ಯಾರ್ಥಿಗಳು ತನ್ನ ಜೇನುಕೃಷಿಯನ್ನು ನೋಡಲು ಬಂದುಹೋಗುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಪ್ರಜ್ವಲ್.
ಇತ್ತೀಚಿಗೆ ಪ್ರಜ್ವಲ್‌ಗೆ ರಾಜ್ಯಮಟ್ಟದ ಅತ್ಯುತ್ತಮ ಸಾಧಕ ಪ್ರಶಸ್ತಿಯನ್ನೂ ಕೃಷಿ ತಂತ್ರಜ್ಞರ ಸಂಸ್ಥೆ ನೀಡಿ ಗೌರವಿಸಿದೆ.