ಆಪರೇಷನ್ ಸಿಂದೂರ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ: ಸತ್ಕೀರ್ತಿನಾಥಸ್ವಾಮೀಜಿ

KannadaprabhaNewsNetwork |  
Published : May 27, 2025, 12:40 AM IST
26ಕೆಎಂಎನ್ ಡಿ16 | Kannada Prabha

ಸಾರಾಂಶ

ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವನ್ನು ಪಾಕಿಸ್ತಾನ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ನಮ್ಮ ಸೈನಿಕರು ದಿನದ 24 ಗಂಟೆ ಕಾಲವೂ ದೇಶದ ಗಡಿಭಾಗದಲ್ಲಿ ಊಟ ನಿದ್ರೆಯಿಲ್ಲದೆ ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ. ಇದರಿಂದ ನಾವೆಲ್ಲರೂ ಶಾಂತಿ ನೆಮ್ಮದಿಯಿಂದ ಇದ್ದೇವೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಆಪರೇಷನ್ ಸಿಂದೂರದ ಮೂಲಕ ನಮ್ಮ ದೇಶದ ಸೈನಿಕರು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದು ಆದಿಚುಂಚನಗಿರಿ ಮಠದ ಸತ್ಕೀರ್ತಿನಾಥ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ, ಜೆಡಿಎಸ್ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಆಪರೇಷನ್ ಸಿಂದೂರ ಮೂಲಕ ಪಾಕಿಸ್ತಾನಿ ಉಗ್ರರನ್ನು ಸೆದೆಬಡಿದ ದೇಶದ ಸೈನಿಕರಿಗೆ ಗೌರವ ಸಲ್ಲಿಸಿ ಸೋಮವಾರ ಆಯೋಜಿಸಿದ್ದ ಬೃಹತ್ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವನ್ನು ಪಾಕಿಸ್ತಾನ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ನಮ್ಮ ಸೈನಿಕರು ದಿನದ 24 ಗಂಟೆ ಕಾಲವೂ ದೇಶದ ಗಡಿಭಾಗದಲ್ಲಿ ಊಟ ನಿದ್ರೆಯಿಲ್ಲದೆ ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ. ಇದರಿಂದ ನಾವೆಲ್ಲರೂ ಶಾಂತಿ ನೆಮ್ಮದಿಯಿಂದ ಇದ್ದೇವೆ ಎಂದರು.

ದೇಶದ ಅಮಾಯಕ ಹಿಂದೂ ಪ್ರವಾಸಿಗರನ್ನು ಹತ್ಯೆಗೈದಿರುವ ಉಗ್ರರಿಗೆ ಆಪರೇಷನ್ ಸಿಂದೂರ್ ಮೂಲಕ ಭಾರತದ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಸೈನಿಕರ ಕಾರ್ಯವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದರು.

ವೀರಶೈವ ಸಮಾಜದ ರೇಣುಕಾನಂದ ಸ್ವಾಮೀಜಿ ಮಾತನಾಡಿ, ಕಾಶ್ಮೀರದ ಪಹಲ್ಗಾಂನಲ್ಲಿ ಭಯೋತ್ಪಾದಕರು 26 ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಿರುವುದು ನೋವಿನ ಸಂಗತಿ. ಇದಕ್ಕೆ ಪ್ರತಿಯಾಗಿ ಆಪರೇಷನ್ ಸಿಂದೂರ ಮೂಲಕ ಭಾರತೀಯರು ಸೈನಿಕರು ಇಡೀ ವಿಶ್ವಕ್ಕೆ ತಮ್ಮ ಶಕ್ತಿ ತೋರಿಸಿಕೊಟ್ಟಿದ್ದಾರೆ ಎಂದರು.

ಭಾರತದಲ್ಲಿ ಅಶಾಂತಿ ಸೃಷ್ಟಿಸಲುಪಾಕಿಸ್ತಾನಕ್ಕೆ ನೆರೆಯ ಚೀನಾ ಸೇರಿ ಕೆಲ ದೇಶಗಳು ಕುಮ್ಮಕ್ಕು ನೀಡುತ್ತಿವೆ. ಆದರೆ, ಪ್ರಧಾನಿ ಮೋದಿ ಅವರು ದೇಶದ ಜನರನ್ನು ರಕ್ಷಣೆಯಲ್ಲಿ ಬಹಳ ಗಟ್ಟಿಯಾಗಿದ್ದಾರೆ. ಭಾರತೀಯರು ಯಾರಿಗೂ ಹೆದರುವ ಅವಶ್ಯಕತೆಯಿಲ್ಲ ಎಂದರು.

ಮಾಜಿ ಸೈನಿಕ ಬಿ.ನಾರಾಯಣ ಮಾತನಾಡಿ, ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿದ್ದರೆ ಸಹಿಸಿಕೊಂಡು ಕ್ಷಮೆ ನೀಡಬಹುದು. ಆದರೆ, ನಮ್ಮ ದೇಶದ ಹೆಣ್ಣುಮಕ್ಕಳ ಸಿಂದೂರವನ್ನೇ ಅಳಿಸಲು ಬಂದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ತಕ್ಕ ಉತ್ತರ ನೀಡುವ ಸಲುವಾಗಿಯೇ ನಮ್ಮ ದೇಶದ ಸೈನಿಕರು ನೆರೆಯ ಪಾಕಿಸ್ತಾನದೊಳಗೆ ನುಗ್ಗಿ ಭಯೋತ್ಪಾದಕರ ಹುಟ್ಟಡಗಿಸಿದ್ದಾರೆ ಎಂದರು.

ನಮ್ಮ ದೇಶದ ಸೈನಿಕರ ಬಗ್ಗೆ ಯಾರೂ ಸಹ ಹಗುರವಾಗಿ ಮಾತನಾಡಬಾರದು. ಭಾರತ ದೇಶದ ಸೈನಿಕರು ಮತ್ತು ಶಸ್ತ್ರಾಸ್ತ್ರಗಳು ಬಹಳ ಬಲಿಷ್ಟವಾಗಿವೆ. ಆಪರೇಷನ್ ಸಿಂದೂರ ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡದಂತಿದೆ. ಇಂದಲ್ಲ ನಾಳೆ ಯಾವುದಾದರೂ ಸಂದರ್ಭ ಸಿಕ್ಕರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು.

ಬಿಜೆಪಿ ಮುಖಂಡ ಸದಾನಂದ ಮಾತನಾಡಿ, ದೇಶದ ಗಡಿಭಾಗದಲ್ಲಿ ಭಾರತೀಯರ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ನಮ್ಮ ದೇಶದ ಸೈನಿಕರ ಕುಟುಂಬಗಳಿಗೆ ನಾವೆಲ್ಲರೂ ನೈತಿಕ ಶಕ್ತಿ ತುಂಬಬೇಕಿದೆ ಎಂದರು.

ಇದಕ್ಕೂ ಮುನ್ನ ಪಟ್ಟಣದ ಟಿ.ಬಿ.ಬಡಾವಣೆಯ ಶ್ರೀಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ತಿರಂಗಾ ಯಾತ್ರೆಗೆ ಚಾಲನೆ ನೀಡಲಾಯಿತು. ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಮಂಡ್ಯ ವೃತ್ತದ ವರೆಗೆ ಸಾಗಿದ ಯಾತ್ರೆಯಲ್ಲಿ ತ್ರಿವರ್ಣ ಧ್ವಜ ಹಿಡಿದಿದ್ದ ನೂರಾರು ಮಂದಿ ವಿದ್ಯಾರ್ಥಿಗಳು ಮತ್ತು ಹಿಂದೂ ಕಾರ್ಯಕರ್ತರು ಭಾರತಾಂಬೆ ಮತ್ತು ದೇಶದ ಸೈನಿಕರ ಪರ ಜಯಘೋಷ ಮೊಳಗಿಸಿದರು.

ಈ ವೇಳೆ ಮಾಜಿ ಸೈನಿಕರಾದ ಮರೀಗೌಡ, ರಾಮಮೂರ್ತಿ, ಟಿ.ಸಿ.ಕುಮಾರ್, ಗಣೇಶ್, ನಾಗರಾಜು, ಶಿವಕುಮಾರ್, ಮೂಡಲಗಿರಿ, ವಕೀಲ ಸಿದ್ದಲಿಂಗಸ್ವಾಮಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹದೇವ್, ವಿಎಚ್‌ಪಿ ಜಿಲ್ಲಾ ಸಂಚಾಲಕ ಪುಣ್ಯಕೋಟಿ ರಘು, ಬಿಜೆಪಿ ಮುಖಂಡ ನರಸಿಂಹಮೂರ್ತಿ ಜೀಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಟಿ.ಡಿ.ಶ್ರೀನಿವಾಸ್, ಮುಖಂಡರಾದ ಕೆಂಪೇಗೌಡ, ಸುರೇಶ್ ಉಪ್ಪಾರ್, ದರ್ಶನ್ ಸೇರಿದಂತೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಹಲವು ಸಂಘಟನೆಗಳ ಕಾರ್ಯಕರ್ತರು ಇದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ