ಹಾನಗಲ್ಲ: ಶೈಕ್ಷಣಿಕ ಹಿತಕ್ಕೆ ಧಕ್ಕೆಯಾಗುವಂಥ ಶಿಕ್ಷಕರ ವರ್ತನೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ, ಅಧಿಕಾರಿಗಳು ವಿಳಂಬವಿಲ್ಲದೆ ಅಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಎಂದು ಶಾಸಕ ಶ್ರೀನಿವಾಸ ಮಾನೆ ತಾಕೀತು ಮಾಡಿದರು.
ಕರ್ತವ್ಯಲೋಪ ತೋರುತ್ತಿರುವ ಶಿಕ್ಷಕರನ್ನು ಗುರುತಿಸಿ, ಈಗಲೇ ಕಟ್ಟುನಿಟ್ಟಿನ ಸೂಚನೆ ನೀಡಿ. ಶಾಲೆಗಳಲ್ಲಿಯೇ ತಂಬಾಕು, ಗುಟ್ಕಾ ಸೇವಿಸುವುದು, ತರಗತಿಯಲ್ಲಿ ಮೊಬೈಲ್ ಬಳಸುವುದು, ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ವರ್ತನೆಗಳು ಶಿಕ್ಷಕರಿಂದ ನಡೆಯಬಾರದು ಎಂದರು.
ಕೆಲವು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳು ಶೂ, ಸಾಕ್ಸ್, ಸಮವಸ್ತ್ರ ಧರಿಸದೇ ಇರುವುದನ್ನು ಗಮನಿಸಿದ್ದೇನೆ. ಸರ್ಕಾರದ ಯೋಜನೆಗಳು ದುರುಪಯೋಗ ಆಗುವುದನ್ನು ತಡೆಯಬೇಕಿದೆ ಎಂದರು.ಶೈಕ್ಷಣಿಕ ಕ್ಷೇತ್ರಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಶ್ರಮ ವಹಿಸಲಾಗಿದೆ. ದಾನಿಗಳು ಹಾಗೂ ವೈಯಕ್ತಿಕ ನೆರವಿನಿಂದ ಒಂದೂವರೆ ಕೋಟಿ ರು. ವೆಚ್ಚದಲ್ಲಿ 92 ಶಾಲೆಗಳಿಗೆ ಸೌಲಭ್ಯ ಒದಗಿಸಲಾಗಿದೆ. ಪ್ರತಿ ಶಾಲೆಯಲ್ಲಿಯೂ ಹಳೆಯ ವಿದ್ಯಾರ್ಥಿಗಳ ಸಂಘ ರಚಿಸಬೇಕು. ಸಮುದಾಯದ ಸಹಭಾಗಿತ್ವದೊಂದಿಗೆ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಶಿಕ್ಷಕರು ಕಾಳಜಿ ವಹಿಸಬೇಕಿದೆ ಎಂದು ಶ್ರೀನಿವಾಸ ಮಾನೆ ಹೇಳಿದರು.
ಶಾಲೆಗಳಿಗೆ ಭೂದಾನ ನೀಡಿದವರನ್ನು ಗೌರವಿಸುವ ಕೆಲಸವಾಗಬೇಕಿದೆ. ಕಡ್ಡಾಯವಾಗಿ ಶಾಲೆಗಳಲ್ಲಿ ದಾನಿಗಳ ಭಾವಚಿತ್ರ ಅಳವಡಿಸಬೇಕು. ದಾನಿಗಳ ಜಯಂತಿಯನ್ನೂ ಆಚರಿಸಬೇಕು. ಅಂದಾಗ ದಾನ, ಧರ್ಮದ ಪ್ರವೃತ್ತಿ ಹೆಚ್ಚಿಸಲು ಸಾಧ್ಯವಿದೆ. ಮುಂದಿನ ಪೀಳಿಗೆಯಲ್ಲಿ ಸಹ ಇಂಥ ಭಾವನೆ ಮೂಡಲಿದೆ ಎಂದರು.ಶಿಕ್ಷಕರ ಸಮಸ್ಯೆಗಳನ್ನೂ ಸಮಾಧಾನದಿಂದ ಆಲಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಿ. ಆದರೆ ಯಾವುದೇ ಕಾರಣಕ್ಕೂ ವೈಯಕ್ತಿಕ ಕಾರಣಗಳಿಂದ ಶೈಕ್ಷಣಿಕ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಾರದು ಎಂದು ಹೇಳಿದ ಶಾಸಕ ಮಾನೆ, ಪ್ರತಿಯೊಬ್ಬರೂ ಸಾಮಾಜಿಕ ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ. ಶಿಕ್ಷಣ ಸುಧಾರಣಾ ಸಮಿತಿ ಸದಸ್ಯರು ನಿಯಮಿತವಾಗಿ ಶಾಲೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಆಗುಹೋಗುಗಳ ಮೇಲೆ ಗಮನ ಹರಿಸಿ ಎಂದರು.
ತಹಸೀಲ್ದಾರ್ ರೇಣುಕಾ ಎಸ್., ತಾಪಂ ಇಒ ಪರಶುರಾಮ ಪೂಜಾರ, ಹಾವೇರಿಯ ಡಯಟ್ ಪ್ರಾಚಾರ್ಯ ಗಿರೀಶ್ ಪದಕಿ, ಬಿಇಒ ವಿ.ವಿ. ಸಾಲಿಮಠ, ಸಮಿತಿ ಸದಸ್ಯರಾದ ಮೆಹಬೂಬ ಬ್ಯಾಡಗಿ, ಬಸವರಾಜ ಕರೆಣ್ಣನವರ, ಬಸವರಾಜ ಚವ್ಹಾಣ, ಅನಿತಾ ಶಿವೂರ, ಅಬ್ದುಲಗನಿ ಪಟೇಲ, ಹೆಗ್ಗಪ್ಪ ಕಾಮನಹಳ್ಳಿ, ಚಂದ್ರಶೇಖರ ಬಳ್ಳಾರಿ ಇದ್ದರು.