ಒಬ್ಬ ಯಶಸ್ವಿ ಮಹಿಳೆ ಹಿಂದೆ ಒಬ್ಬ ಪುರುಷನಿರುತ್ತಾನೆ: ತನುಜಾ ಟಿ.ಸವದತ್ತಿ

KannadaprabhaNewsNetwork | Published : Mar 27, 2025 1:07 AM

ಸಾರಾಂಶ

ನರಸಿಂಹರಾಜಪುರ, ಈ ಹಿಂದೆ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಿದ್ದಳು. ಆದರೆ, ಈಗ ಕಾಲ ಬದಲಾಗಿದ್ದು ಪ್ರತಿ ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಪುರುಷ ಇರುತ್ತಾನೆ ಎಂದು ತಹಸೀಲ್ದಾರ್ ತನುಜಾ ಟಿ. ಸವದತ್ತಿ ಹೇಳಿದರು.

ಸಿಂಸೆಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಅಂತಾರಾಷ್ಟೀಯ ಮಹಿಳಾ ದಿನಾಚರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಈ ಹಿಂದೆ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಿದ್ದಳು. ಆದರೆ, ಈಗ ಕಾಲ ಬದಲಾಗಿದ್ದು ಪ್ರತಿ ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಪುರುಷ ಇರುತ್ತಾನೆ ಎಂದು ತಹಸೀಲ್ದಾರ್ ತನುಜಾ ಟಿ. ಸವದತ್ತಿ ಹೇಳಿದರು.

ಬುಧವಾರ ಸಿಂಸೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾನೂನು ಅರಿವು ಪ್ರಾಧಿಕಾರ, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಮತ್ತು ಸೋಷಿಯಲ್ ವೇಲ್ ಫೇರ್ ಸೂಸೈಟಿ ಆಯೋಜನೆ ಮಾಡಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಪಾದಾರ್ಪಣೆ ಮಾಡಿದ್ದಾಳೆ. ಕಚೇರಿಗಳಲ್ಲಿ ಪುರಷರಿಗಿಂತ ಮಹಿಳೆಯರೇ ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಮನೆ ಆರ್ಥಿಕ ಪರಿಸ್ಥಿತಿಯಲ್ಲಿ ಗಂಡನಿಗೆ ಸರಿಸಮನವಾಗಿ ದುಡಿಯುತ್ತಿ ದ್ದಾಳೆ. ಮನೆಯಲ್ಲಿ ಗೃಹಣಿಯಾಗಿ, ಕಚೇರಿಯಲ್ಲಿ ನೌಕರಳಾಗಿ ದುಡಿದು ಕುಟುಂಬದ ಉನ್ನತಿಗೆ ಕಾರಣಳಾಗಿದ್ದಾಳೆ ಎಂದರು. ಜೆಎಫ್‌ಎಂ ನ್ಯಾಯಾಲಯದ ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆ ರಕ್ಷಣೆಗಾಗಿ ಹಲವಾರು ಕಾನೂನುಗಳನ್ನು ಜಾರಿಗೆ ತರಲಾಗಿದೆ. ತಮ್ಮ ಒಳಿತಿಗೆ ಇರುವ ಕಾನೂನನ್ನು ಮಹಿಳೆಯರು ದುರುಪಯೋಗ ಪಡಿಸಿಕೊಂಡು ನಿರಪರಾಧಿ ಗಂಡಸರ ಮೇಲೆ ಈ ಕಾನೂನುಗಳನ್ನು ಬಳಸಬಾರದು. ಅಂಗನವಾಡಿ ಕಾರ್ಯಕರ್ತೆಯರು ಜನರಿಗೆ ತುಂಬಾ ಹತ್ತಿರವಾಗಿದ್ದರಿಂದ ಕೋರ್ಟಗಳಿಗೆ ಬರುವ ಗಂಡ ಹೆಂಡತಿಯರ ಜಗಳವನ್ನು ಮಾತುಕತೆ ಮೂಲಕ ತಾವೇ ಬಗೆಹರಿಸಬಹುದು. ಎಷ್ಟೋ ವಿವಾಹ ವಿಚ್ಛೇದನಕ್ಕೆ ಬಂದ ಕೇಸುಗಳು ಕೇವಲ ಮಾತುಕತೆ ಮೂಲಕ ಒಂದಾಗಿದ್ದಾರೆ. ಗಂಡ ಹೆಂಡತಿ ಎಂದ ಮೇಲೆ ಭಿನ್ನಾಭಿಪ್ರಾಯ ಸಹಜ. ಅದನ್ನು ವಿಕೋಪಕ್ಕೆ ಹೋಗದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಈ ರೀತಿ ಘಟನೆಗಳು ನಿಮ್ಮ ಅಂಗನವಾಡಿ ಅಕ್ಕ ಪಕ್ಕ ನಡೆದಿದ್ದರೆ ಅವರ ಸಮಸ್ಯೆ ಅರ್ಥಮಾಡಿಕೊಂಡು ಅವರನ್ನು ಸಮಧಾನ ಮಾಡುವ ಕಾರ್ಯವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡಬಹುದು ಎಂದರು. ಅತಿಥಿಯಾಗಿದ್ದ ತಾಲೂಕು ವೈದ್ಯಾಧಿಕಾರಿ ಡಾ. ನರಸಿಂಹಮೂರ್ತಿ ಮಾತನಾಡಿ, ಮಹಿಳೆಯರು ಗಟ್ಟಿಗಿತ್ತಿಯರು ಎಂಬುದಕ್ಕೆ ಉದಾಹರಣೆ ಎಂಬಂತೆ 59 ವರ್ಷದ ಸುನೀತಾ ವಿಲಿಯಮ್ಸ್ 8 ದಿನಗಳ ಕಾಲ ಗಗನ ನೌಕೆಗೆಂದು ತೆರಳಿ 9 ತಿಂಗಳ ನಂತರ ಭೂಮಿಗೆ ಬಂದ ಧೀಮಂತ, ಸಾಧಕ ಮಹಿಳೆಯಾಗಿದ್ದಾಳೆ. ಅಂತವರನ್ನು ಆದರ್ಶವಾಗಿಟ್ಟುಕೊಂಡು ಮಹಿಳೆಯರು ಸಾಧನೆ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿ, ಬಾಣಂತಿಯರ ಆರೈಕೆ ಮಾಡುವು ದರಿಂದ ವೈದ್ಯರಿಗೆ ಸ್ವಲ್ಪ ಕೆಲಸ ಕಡಿಮೆಯಾಗುತ್ತಿದೆ. ನಿಮ್ಮ ಸೇವೆ ಹೀಗೆ ಮುಂದುವರಿಯಲಿ ಎಂದರು. ಸಭೆ ಅಧ್ಯಕ್ಷತೆಯನ್ನು ಸೋಷಿಯಲ್ ವೇಲ್ ಫೇರ್ ಸೊಸೈಟಿ ನಿರ್ದೇಶಕ ಜೋಬೀಶ್ ಕುರಿಯಾ ಕೋಸ್ ವಹಿಸಿದ್ದರು. ವಕೀಲರ ಎಚ್.ಜಿ. ವೆಂಕಟೇಶ್‌ಮೂರ್ತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ. ಎಂ.ಜೆ.ಮೇರಿ, ಉಪನ್ಯಾಸ ನೀಡಿದರು. ಅತಿಥಿಗಳಾಗಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್‌.ಎಸ್.ಸಾಜು, ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಸಂಸ್ಥೆ ತಾಲೂಕು ಅಧ್ಯಕ್ಷ ನಾಗರಾಜ ಪುರಾಣಿಕ್, ಕಾರ್ಯದರ್ಶಿ ವಿದ್ಯಾನಂದಕುಮಾರ್,ಆರೋಗ್ಯ ಶಿಕ್ಷಣಾಧಿಕಾರಿ ಬೇಬಿ, ಸಿಡಿಪಿಒ ವೀರಭದ್ರಯ್ಯ ಮಾಜಿ ಗೌಡ್ರ, ನರೇಗಾ ಯೋಜನೆ ಸಹಾಯಕ ನಿರ್ದೇಶಕ ಮನೀಶ್, ಸಿಪಿಪಿಒ ಇಲಾಖೆ ಕಾವ್ಯ ಉಪಸ್ಥಿತರಿದ್ದರು.ನಂತರ ಅಂಗನವಾಡಿ ಕಾರ್ಯಕರ್ತೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Share this article