ಕನ್ನಡಪ್ರಭ ವಾರ್ತೆ ವಿಜಯಪುರಪ್ರತಿಭೆ ಇದ್ದರೆ ಸಾಧನೆಯೆಂಬ ಪ್ರಭೆ ಪ್ರಕಾಶಿಸಿ ಸಾಧಕನ ಸಿರಿಮುಡಿಗೆ ಗೌರವದ ಗರಿ ಏರುತ್ತದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ ಹೇಳಿದರು. ನಗರದ ದರ್ಗಾಜೇಲ್ ರಸ್ತೆಯ ಚೇತನಾ ಕಾಲೇಜ ಸಭಾಂಗಣದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ನಗರ ಘಟಕದ ಉದ್ಘಾಟನೆ, ಪದಗ್ರಹಣ, ಅಮ್ಮನ ಮಾತು ಅಮೃತ ಕೃತಿ ಬಿಡುಗಡೆ ಹಾಗೂ ರಾಜ್ಯಮಟ್ಟದ ಕನ್ನಡ ಮಾಣಿಕ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾಡಿನಲ್ಲಿ ಲೇಖಕರಿಗೆ ಬರವಿಲ್ಲ. ವಾಟ್ಸಪ್, ಫೇಸ್ಬುಕ್, ಮೊಬೈಲ್ ಅಬ್ಬರದ ಮಧ್ಯೆಯು ಪುಸ್ತಕ ಬರೆಯುವವರ, ಓದುವವರ ಸಂಖ್ಯೆ ಹೇರಳವಾಗಿದ್ದು, ಸತ್ಯ ಸತ್ವಗಳ ಸಾರವಿರುವ ಹಾಗೂ ಅರಿತು ಅರ್ಥೈಸಿಕೊಳ್ಳುವ ಗ್ರಂಥಗಳು ಪ್ರಕಟಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ಸಾಧಕರ ಸೇವೆಯನ್ನು ಗುರುತಿಸಿ ಗೌರವಿಸುವ ಕೆಲಸ ಶ್ಲಾಘನೀಯ ಎಂದರು. ಕಲಬುರಗಿ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಅಜಯಕುಮಾರ ಡಿ.ಮಾತನಾಡಿ, ಪುಸ್ತಕಗಳು ಜ್ಞಾನದ ದೀವಿಗೆ ಹಚ್ಚಿ ಬದುಕನ್ನು ಬೆಳಗುತ್ತವೆ. ನಿರಂತರ ಅಧ್ಯಯನ ಭವಿಷ್ಯವನ್ನು ಭದ್ರಪಡಿಸುತ್ತದೆ ಎಂದರು. ಕವಿ ರಾಜೇಂದ್ರ ನಾವಿ ಅವರ ಅಮ್ಮನ ಮಾತು ಅಮೃತ ಮಕ್ಕಳ ಕವನವನ್ನು ಸಾಹಿತಿ ಪ.ಗು.ಸಿದ್ದಾಪುರ ಬಿಡುಗಡೆ ಮಾಡಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ಸಾಹಿತಿ ಮುರುಗೇಶ ಸಂಗಮ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ಸಿದ್ಧಲಿಂಗ ಮನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ನಗರ ಘಟಕದ ಅಧ್ಯಕ್ಷ ಶಿವಾಜಿ ಮೋರೆ, ಕವಿ ರಾಜೇಂದ್ರ ನಾವಿ ಉಪಸ್ಥಿತರಿದ್ದರು. ಗೀತಾ ವೈದ್ಯ ಪ್ರಾರ್ಥಿಸಿದರು. ಪ್ರೊ.ಎ.ಎಚ್.ಕೊಳಮಲಿ ಸ್ವಾಗತಿಸಿದರು. ಅಮರೇಶ ಸಾಲಕ್ಕಿ ನಿರೂಪಿಸಿದರು. ಸಂಗಮೇಶ ಗೆಣ್ಣೂರ ವಂದಿಸಿದರು.