ಸಂಗೀತೋತ್ಸವಕ್ಕೆ ಸಿದ್ಧವಾಗುತ್ತಿರುವ ಕಾಸರಗೋಡಿನ ಬೇಕಲ ಗೋಕುಲಂ ಗೋಶಾಲೆ

KannadaprabhaNewsNetwork |  
Published : Oct 25, 2024, 12:59 AM IST
ದೀಪಾವಳಿ ಸಂಗೀತೋತ್ಸವ | Kannada Prabha

ಸಾರಾಂಶ

ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಪ್ರಾರಂಭಗೊಂಡು ರಾತ್ರಿ 10 ಗಂಟೆ ವರೆಗೆ ನಡೆಯಲಿರುವ ಈ ಸಂಗೀತೋತ್ಸವದಲ್ಲಿ ದೇಶ, ವಿದೇಶಗಳಿಂದ ಸಂಗೀತ ಲೋಕದ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ

ಕನ್ನಡಪ್ರಭ ವಾರ್ತೆ ಮಂಗಳೂರು

ಗಡಿನಾಡು ಕಾಸರಗೋಡಿನ ಪೆರಿಯಾ ಬೇಕಲ ಗೋಕುಲಂ ಗೋಶಾಲೆಯಲ್ಲಿ ನಾಲ್ಕನೇಯ ದೀಪಾವಳಿ ಸಂಗೀತೋತ್ಸವಕ್ಕೆ ನವೆಂಬರ್ 1 ರಂದು ಚಾಲನೆ ದೊರೆಯಲಿದೆ. ಬಳಿಕ ನವೆಂಬರ್ 10 ರ ವರೆಗೆ ನಿರಂತರ ಸಂಗೀತ ಸೇವೆ ಏರ್ಪಡಲಿದೆ.

ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಪ್ರಾರಂಭಗೊಂಡು ರಾತ್ರಿ 10 ಗಂಟೆ ವರೆಗೆ ನಡೆಯಲಿರುವ ಈ ಸಂಗೀತೋತ್ಸವದಲ್ಲಿ ದೇಶ, ವಿದೇಶಗಳಿಂದ ಸಂಗೀತ ಲೋಕದ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಿಕ್ ಮತ್ತು ಹಿಂದೂಸ್ತಾನಿ ಸಂಗೀತದ ಜುಗಲ್ ಬಂದಿಯಿಂದ ಪ್ರಾರಂಭಗೊಳ್ಳುವ ಈ ಸಂಗೀತೋತ್ಸವದಲ್ಲಿ ಕರ್ನಾಟಿಕ್ ಸಂಗೀತ ತಜ್ಞ ಪಟ್ಟಾಭಿರಾಮ ಪಂಡಿತ್ ಹಾಗೂ ಹಿಂದೂಸ್ತಾನಿ ಗಾಯಕ ಕೃಷ್ಣೇಂದ್ರ ವಾಡೇಕರ್ ಪ್ರಾರಂಭದ ಕಛೇರಿ ನೇರವೇರಿಸಲಿದ್ದಾರೆ. ಈ ಸಂಗೀತೋತ್ಸವದಲ್ಲಿ ಸುನೀಲ್ ಗಾರ್ಗೇಯನ್ ಚೆನ್ನೈ, ಬೆಂಗಳೂರು ಸಹೋದರರು, ಡಾ. ಎನ್. ಜೆ. ನಂದಿನಿ, ಆರ್. ಕೆ. ಪದ್ಮನಾಭ ಮೈಸೂರು, ಹೇರಂಭ - ಹೇಮಂತ ಸಹೋದರರು, ಕುಮರೇಶ್ ಮತ್ತು ಜಯಂತಿ ಕುಮರೇಶ್, ಲತಾಂಗಿ ಸಹೋದರಿಯರು, ಮಲ್ಲಾಡಿ ಸಹೋದರರು ಕನ್ಯಾಕುಮಾರಿ, ಲಾಲ್ಗುಡಿ ಜಿ, ಜೆ. ಆರ್. ಕೃಷ್ಣನ್, ಅಭಿಷೇಕ್ ರಘುರಾಮ್, ಜಯಂತ್ ಮುಂತಾದ ಪ್ರಸಿದ್ಧ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಒಟ್ಟಾರೆ 10 ದಿವಸ 132 ಸಂಗೀತದ ಕಛೇರಿಗಳು ನಡೆಯಲಿದೆ. ಈ 10 ದಿವಸದ ಸಂಗೀತೋತ್ಸವದ ಸಂದರ್ಭದಲ್ಲಿ ಎಡನೀರು ಮಠಾಧಿಪತಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು, ಉಡುಪಿ ಅದಮಾರು ಮಠಾಧಿಪತಿ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಗಮಿಸಲಿದ್ದಾರೆ.

ಗೋವುಗಳಿಗೆ ಬೇಕಾಗಿ ನಡೆಸಲಾಗುವ ಈ ಸಂಗೀತೋತ್ಸವವನ್ನು ಗೋವುಗಳು ವಿಶೇಷವಾಗಿ ಆಸ್ವಾದಿಸುವುದೇ ಇಲ್ಲಿಯ ವೈಶಿಷ್ಟ್ಯವಾಗಿದೆ. ಸಂಗೀತವನ್ನು ಗೋವುಗಳು ಸ್ಪಂದಿಸುವ ಕಾರಣದಿಂದಲೇ ದೇಶ ವಿದೇಶಗಳಿಂದ ಸಂಗೀತ ತಜ್ಞರು ಇಲ್ಲಿಗೆ ಹರಿದು ಬರುತ್ತಿದ್ದಾರೆ. ಇಲ್ಲಿಗೆ ಬರುವ ಸಂಗೀತ ತಜ್ಞರಿಗೂ ಹಾಗೂ ಆಸ್ವಾದಕರಿಗೂ ಆಹಾರ ಮತ್ತು ವಸತಿಯ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಗೋಕುಲಂ ಗೋಶಾಲೆಯಲ್ಲಿ 9 ಭಾರತೀಯ ಗೋ ತಳಿಗಳಾದ ಕಾಸರಗೋಡು ಗಿಡ್ಡ, ವೆಚೂರ್, ಮಲೆನಾಡ ಗಿಡ್ಡ, ಕಾಂಗೇಯಮ್, ಹಳ್ಳಿಕಾರ್, ಬರಗೂರು, ಓಂ ಗೋಲ್, ಗಿರ್, ಕಾಂಕ್ರೀಜ್‌ ಸೇರಿ 225 ಗೋವುಗಳಿವೆ. ಭಾರತೀಯ ಗೋ ತಳಿಗಳನ್ನು ಸಂರಕ್ಷಣೆ ಮಾಡುವ ಜೊತೆಯಲ್ಲಿ ಭಾರತೀಯ ಕಲೆಯನ್ನು ಪೋಷಣೆ ಮಾಡಲಿಕ್ಕೆ ಬೇಕಾಗಿ ‘ಪರಂಪರಾ ವಿದ್ಯಾಪೀಠ’ ಎಂಬ ಸಂಸ್ಥೆಯನ್ನು ರಚಿಸಿ ಅದರ ಭಾಗವಾಗಿ ನೃತ್ಯ ಸಂಗೀತಾದಿ ಕಲೆಗಳನ್ನು ಬೆಳೆಸುತ್ತಾ ಬಂದಿದ್ದಾರೆ. ಇದರ ರೂವಾರಿಗಳು ಪ್ರಸಿದ್ಧ ಜ್ಯೋತಿಷಿ ವಿಷ್ಣು ಪ್ರಸಾದ್ ಹೆಬ್ಬಾರ್ ಮತ್ತು ನಾಗರತ್ನಾ ಹೆಬ್ಬಾರ್ ದಂಪತಿ.ಬಾಕ್ಸ್‌----

ಡಾ.ಯೇಸುದಾಸ್‌ಗೆ ಪರಂಪರಾ ಪ್ರಶಸ್ತಿ

ಪ್ರತಿವರ್ಷ ಬೇಕಲಂ ಗೋಶಾಲೆಯಿಂದ ನೀಡಲಿರುವ ‘ಪರಂಪರಾ ಪ್ರಶಸ್ತಿ’ಗೆ ಈ ವರ್ಷ ಗಾನಗಂಧರ್ವ ಬಿರುದಾಂಕಿತ ಪದ್ಮವಿಭೂಷಣ ಡಾ. ಕೆ. ಜೆ. ಯೇಸುದಾಸ್ ಭಾಜನರಾಗಿದ್ದಾರೆ. ‘ಪರಂಪರಾ ಬಾಲಪ್ರತಿಭಾ’ ಪ್ರಶಸ್ತಿಗೆ ಮೃದಂಗ ವಿದ್ವಾನ್ ಕಾರೈಕ್ಕುಡಿ ಮಣಿ ಅವರ ಕೊನೆಯ ಶಿಷ್ಯ ಮಾಸ್ಟರ್‌ ಸಿದ್ಧಾಂತ್ ಭಾಜನರಾಗಿದ್ದಾರೆ. ‘ಪರಂಪರಾ ಗುರುರತ್ನ’ ಪ್ರಶಸ್ತಿಗೆ ಗೀತಾ ಶರ್ಮಾ ಗುರುವಾಯೂರು ಭಾಜನರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

----------------

PREV

Recommended Stories

ಶಾಸಕರ ಭರವಸೆಗೆ ಧರಣಿ ಹಿಂಪಡೆದ ಚಲವಾದಿ ಸಮಾಜ
ರಾಜ್ಯಾದ್ಯಂತ ಏಕರೂಪ ಬೆಲೆ ನಿಗದಿಗೊಳಿಸಲು ಒತ್ತಾಯ