ಕುಷ್ಟಗಿ: ಸಂಬಂಧ ಬೆಸೆಯುವಲ್ಲಿ ಬೆಳದಿಂಗಳ ಬುತ್ತಿ ಜಾತ್ರೆ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಿಕ್ಷಕ ಉಮಾಪತಿ ಮಾಳಗಿ ಹೇಳಿದರು.
ಇಂದಿನ ಆಧುನಿಕ ದಿನಗಳಲ್ಲಿ ಕೂಡಿ ಬಾಳುವದು, ಕೂಡಿ ಊಟ ಮಾಡುವ ಸಂಪ್ರದಾಯ ಕಡಿಮೆಯಾಗುತ್ತಿದ್ದು, ಜಾತ್ರೆಯ ನೆಪದಲ್ಲಾದರೂ ಗ್ರಾಮಸ್ಥರೆಲ್ಲರೂ ಬೆಳದಿಂಗಳ ಬುತ್ತಿ ಜಾತ್ರೆಯಲ್ಲಿ ಕುಳಿತುಕೊಂಡು ಊಟ ಮಾಡುವದರಿಂದ ಮನಸ್ಸುಗಳ ನಡುವೆ ಸಾಮರಸ್ಯ ಸೃಷ್ಟಿಯಾಗುವ ಜತೆಗೆ ಒಡೆದ ಹೋದ ಮನಸ್ಸು ಒಂದಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ರಾಜ್ಯಯುವ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಕಂಟ್ಲಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಬನಶಂಕರಿ ದೇವಿ ಜಾತ್ರೆ ಅಂಗವಾಗಿ ಬೆಳದಿಂಗಳ ಬುತ್ತಿ ಜಾತ್ರೆಯನ್ನು ಮಾಡಲಾಗುತ್ತಿದ್ದು, ಈ ಜಾತ್ರೆಯಿಂದ ಎಲ್ಲರೂ ಒಂದೆ ಕಡೆ ಸೇರುತ್ತಿದ್ದು ಇಲ್ಲಿ ಒಬ್ಬರಿಗೊಬ್ಬರು ಪರಸ್ಪರ ಭಾವನೆ ಹಂಚಿಕೊಂಡು ಸಾಮರಸ್ಯದ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.ಹತ್ತಾರು ಮಹಿಳೆಯರು ಮನೆಯಲ್ಲಿ ತಯಾರಿ ಮಾಡಿಕೊಂಡಿರುವ ಬೆಳದಿಂಗಳ ಬುತ್ತಿ ಗ್ರಾಮದ ಮಾರುತಿ ಕಾಲನಿಯಲ್ಲಿರುವ ಸಂಕಷ್ಟ ಹರ ಗಣಪತಿ ದೇವಸ್ಥಾನದವರೆಗೆ ತಲೆ ಮೇಲೆ ಹೊತ್ತುಕೊಂಡು ಬಂದು ಎಲ್ಲರೂ ಪರಸ್ಪರವಾಗಿ ಭಾವನೆ ಹಂಚಿಕೊಳ್ಳುತ್ತಾ ಊಟ ಸವಿದರು. ಬೆಳದಿಂಗಳ ಬುತ್ತಿಯಲ್ಲಿ ಉದರು ಸಜ್ಜಕ, ಸೆಂಗಾ ಹೋಳಿಗೆ, ಕರ್ಚಿಕಾಯಿ, ಚಟ್ನಿ ಪುಡಿ, ಹಸಿ ಚಟ್ನಿ, ಚಪಾತಿ, ರೊಟ್ಟಿ, ಬದನೆಕಾಯಿ ಪಲ್ಯೆ, ಪುಂಡಿ ಪಲ್ಯೆ, ಕಾಳುಪಲ್ಯೆ, ಅನ್ನ, ಸಾಂಬಾರ ಸವಿದರು.
ಆಧುನಿಕತೆಯ ಪರಿಣಾಮವಾಗಿ ಗ್ರಾಮೀಣ ಸಂಪ್ರದಾಯಗಳು ನಶಿಸುತ್ತಿದ್ದು, ದೋಟಿಹಾಳ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಬೆಳದಿಂಗಳ ಬುತ್ತಿಜಾತ್ರೆ ಮಾಡುವ ಮೂಲಕ ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದು ಹನಮಂತರಾವ ದೇಸಾಯಿ ಹೇಳಿದ್ದಾರೆ.