ನವದೆಹಲಿ: ವಿಶ್ವದ ವಿವಿಧ ದೇಶಗಳು ಹೊಸ ತಲೆಮಾರಿನ ಶಸ್ತ್ರಾಸ್ತ್ರಗಳ ಬಳಕೆಗೆ ಮುಂದಾಗುತ್ತಿರುವ ಹೊತ್ತಿನಲ್ಲೇ ಕರ್ನಾಟಕದ ಬೆಳಗಾವಿ ಮೂಲದ ಕಾರ್ಬೈನ್ಸ್ ಸಿಸ್ಟಮ್ಸ್ ಎಂಬ ಸಂಸ್ಥೆ ಹಾಲಿವುಡ್‌ನ ‘ಸ್ಟಾರ್‌ವಾರ್’ ರೀತಿಯ ಲೇಸರ್ ಶಸ್ತ್ರಾಸ್ತ್ರವೊಂದನ್ನು ಅಭಿವೃದ್ಧಿಪಡಿಸಿ, ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಮೂಲಕ ಇಂಥ ಶಸ್ತ್ರಾಸ್ತ್ರ ತಯಾರಿಸಿದ ದೇಶದ ಮೊದಲ ಖಾಸಗಿ ಸಂಸ್ಥೆ ಎಂಬ ಹಿರಿಮೆಗೆ ಪಾತ್ರವಾಗಿದೆ.
ಬೆಳಗಾವಿಯ ಕಾರ್ಬೈನ್ ಸಿಸ್ಟಮ್ಸ್ ಎಂಬ ಬಾಹ್ಯಾಕಾಶ ಮತ್ತು ರಕ್ಷಣಾ ಸ್ಟಾರ್ಟಪ್, ಲೇಸರ್ ಮೂಲಕವೇ ಗುರಿಯನ್ನು ನಾಶಪಡಿಸಲು ಶಕ್ತವಾಗಿರುವ ಹೈಪರ್ ಆಂಪ್ಲಿಫಿಕೇಶನ್ ರೇಡಿಯಂಟ್ ಅರೇ (ಹರಾ ಎಂಕೆ-1) ಎಂಬ ಶಸ್ತ್ರಾಸ್ತ್ರವನ್ನು ಯಶಸ್ವಿಯಾಗಿ ಒಳಾಂಗಣದಲ್ಲಿ ಪರೀಕ್ಷಿಸಿದೆ. ಕಾರ್ಬೈನ್ ಸಿಸ್ಟಮ್ಸ್ ಕಂಪನಿಯನ್ನು ಬೆಳಗಾವಿಯವರಾದ ಗಿರೀಶ್ ಜೋಶಿ ಮತ್ತು ಕೇದಾರ್ ಜೋಶಿ ಸಹೋದರರು 2023ರಲ್ಲಿ ಸ್ಥಾಪಿಸಿದ್ದರು.
ಟೇಬಲ್ ಒಂದರ ಮೇಲಿಡಬಹುದಾದ ಈ ಉಪಕರಣವನ್ನು 10 ಕಿಲೋವ್ಯಾಟ್ ಸಾಮರ್ಥ್ಯದ ಲೇಸರ್ ಲೈಟ್ ಹೊರಹೊಮ್ಮುವಂತೆ ಸಿದ್ಧಪಡಿಸಲಾಗಿದೆ. ಸಣ್ಣಸಣ್ಣ ಲೇಸರ್ ಕಿರಣಗಳನ್ನು ಕೂಡಿಸಿ ಸೃಷ್ಟಿಯಾಗುವ ಪ್ರಬಲ ಬೀಮ್, ಉಷ್ಣವನ್ನು ಸೃಷ್ಟಿಸುವ ಮೂಲಕ ಯಾವುದೇ ಗುಂಡುಗಳ ಬಳಕೆಯಿಲ್ಲದೆ ತನ್ನ ಗುರಿ ನಾಶಪಡಿಸುತ್ತದೆ. ಈ ತಂತ್ರಜ್ಞಾನವನ್ನು ಬಳಸಿ 1-2 ಕಿ.ಮೀ. ದೂರದಲ್ಲಿರುವ ಡ್ರೋನ್, ಕ್ಷಿಪಣಿಗಳನ್ನೂ ಧ್ವಂಸ ಮಾಡಬಹುದು.
ಸಾಮಾನ್ಯವಾಗಿ ಇಂತಹ ಆಧುನಿಕ ಯಂತ್ರೋಪಕರಣಗಳನ್ನು ದೊಡ್ಡ ಕಂಪನಿಗಳು ಅಥವಾ ಡಿಆರ್‌ಡಿಒ ನಿರ್ಮಿಸುತ್ತದೆ. ಆದರೆ ಲೇಸರ್‌ನಂತಹ ಅತ್ಯಾಧುನಿಕ ಅಸ್ತ್ರವನ್ನು ಸರ್ಕಾರದ ನೆರವೇ ಇಲ್ಲದೆ ಕಾರ್ಬೈನ್ ನಿರ್ಮಿಸಿದೆ. ಮೇಕ್ ಇನ್ ಇಂಡಿಯಾಗೆ ಇನ್ನಷ್ಟು ಬಲ ತುಂಬುವ ಈ ಶಸ್ತ್ರಾಸ್ತ್ರಕ್ಕೆ ಹರಾ ಎಂಬ ಶಿವನ ಹೆಸರನ್ನು ಇಡಲಾಗಿದ್ದು, ‘ವಿನಾಶಕಾರಿ’ ಎಂಬರ್ಥವನ್ನು ನೀಡುತ್ತದೆ.