ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ದೀಕ್ಷ, ಪಂಚಮಸಾಲಿ ಸೇರಿದಂತೆ ಒಳ ಪಂಗಡಗಳಿಗೆ 2ಎನಲ್ಲಿ ಮೀಸಲಾತಿ ನೀಡಬೇಕು, ಕೇಂದ್ರದ ಓಬಿಸಿ ಗುಂಪಿನಲ್ಲಿ ಸೇರ್ಪಡೆ ಮಾಡಬೇಕು ಎಂಬುದು ನಮ್ಮಹೋರಾಟದ ಮುಖ್ಯ ಬೇಡಿಕೆಯಾಗಿದೆ. ಕಳೆದ 7 ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಸರ್ಕಾರಗಳು ಸುಮ್ಮನಿವೆ. ನಾವು ಮತ್ತೆ ಗಮನ ಸೆಳೆಯಲು ಮುಂದಾಗಿದ್ದೇವೆ ಎಂದರು.
ಸಮಾಜದ ಮೀಸಲಾತಿ ಬೇಡಿಕೆಗಾಗಿ ಹೋರಾಟ ನಿರಂತರ, ಅಧಿವೇಶನ ಬಂದಾಗ, ಎಲೆಕ್ಷನ್ ಬಂದಾಗ ಮಾತ್ರ ಹೋರಾಟ ಎಂದು ಭಾವಿಸೋದು ಸರಿಯಲ್ಲ. ಈ ಬೇಡಿಕೆ ಈಡೇರಿಸಲು ಬೆಳಗಾವಿಯ ಸುವರ್ಣಸೌಧ ಸಮೀಪವೇ ಇಡೀ ದಿನ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.ಹೋರಾಟ ಯಾವುದೇ ಪಕ್ಷ, ಸರ್ಕಾರದ ಪರ, ಅಥವಾ ವಿರುದ್ಧವಾಗಿಲ್ಲ. ನಮ್ಮ ಸಮಾಜದ ಭವಿಷ್ಯ ರೂಪಿಸುವ ಉದ್ದೇಶದ ಹೋರಾಟ ಇದಾಗಿದೆ. ಕಳೆದ 2 ವರ್ಷದ ಹಿಂದೆ ಹೋರಾಟಗಾರರ ಮೇಲೆ ಪೊಲೀಸ್ ಬಲ ಬಳಸಿ ದೌರ್ಜನ್ಯ ಮಾಡಲಾಗಿತ್ತು. ಡಿ. 10ರಂದೇ ಈ ಘಟನೆ ನಡೆದಿತ್ತು. ಅದರ ನೆನಪಿಗಾಗಿಯೂ ನಾವು ಲಿಂಗಾಯಿತರ ಮೇಲಿನ ದೌರ್ಜನ್ಯ ದಿನವಾಗಿಯೂ ಹೋರಾಟ ಮಾಡುತ್ತಿದ್ದೇವೆ ಎಂದರು.
ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಶರಣು ಪಟ್ಟಾ, ವೀರಶೈವ ಮಹಾಸಬಾದ ಕಲ್ಯಾಣರಾವ್ ಮಳಖೇಡ್, ಪಂಚ ಸೇನೆಯ ಜಿಲ್ಲಾಧ್ಯಕ್ಷ ಸೋಮಲಿಂಗ ಮೂಲಗೆ, ಅಫಜಲ್ಪುರ ಪಂಚಮಸಾಲಿ ಸಮಾಜದ ಚಂದು ಪೂಜಾರಿ ಇದ್ದರು.
ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿಗಳು ಪಂಚಮಸಾಲಿ ಮೀಸಲು ಹೋರಾಟ ಸೇರಿದಂತೆ ಹಲವು ವಿಚಾರಗಳ ಹಿನ್ನೆಲೆಯಲ್ಲಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆಗಳಿಗೆ ತಾವು ಏನನ್ನೂ ಹೇಳೋದಿಲ್ಲ ಎಂದರು. ಹೋರಾಟ ಮಾಡುತ್ತೇವೆ. ಅದರಿಂದ ಸಮಾಜಕ್ಕೆ ಅನುಕೂಲವಾಗಬೇಕು ಎಂಬುದೇ ನಮ್ಮ ಗುರಿ. ಯಾರದೇ ಹೇಳಿಕೆಗೂ ತಾವು ಪ್ರತಿಕ್ರಿಯೆ ನೀಡೋದಿಲ್ಲವೆಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಲಿಲ್ಲ.