JD(S) expresses outrage over hike in prices of milk products

-ಶಿಕಾರಿಪುರದಲ್ಲಿ ಜೆಡಿಎಸ್ ವತಿಯಿಂದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿಕನ್ನಡಪ್ರಭ ವಾರ್ತೆ ಶಿಕಾರಿಪುರ

ಶ್ರೀಮಂತ, ಬಡವ ಎಂಬ ಬೇಧವಿಲ್ಲದೆ ದೈನಂದಿನ ಬದುಕಿಗೆ ಸರ್ವರಿಗೂ ಅಗತ್ಯವಾಗಿರುವ ಹಾಲು, ಮೊಸರು ಸಹಿತ ಹಾಲಿನ ಉತ್ಪಾದನೆಯನ್ನು ಮನಸೋಇಚ್ಚೆ ಹೆಚ್ಚಿಸಿ ಸರ್ಕಾರ ಜನಸಾಮಾನ್ಯರ ವಿರುದ್ಧ ಗದಾಪ್ರಹಾರ ನಡೆಸಿದ್ದು, ಸರ್ವಾಧಿಕಾರಿ ಸರ್ಕಾರಕ್ಕೆ ಜನತೆಯ ಶಾಪ ತಟ್ಟುವುದು ನಿಶ್ಚಿತ ಎಂದು ಜಾತ್ಯತೀತ ಜನತಾದಳ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್ ಕೊಪ್ಪಲು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಕಚೇರಿ ಮುಂಭಾಗ ಪಕ್ಷದ ವತಿಯಿಂದ ಹಾಲು, ಮೊಸರು ಮತ್ತಿತರ ಹಾಲಿನ ಉತ್ಪನ್ನಗಳ ದರ ಹೆಚ್ಚಳ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ರಾಜ್ಯದ ಜನತೆ ಪ್ರಸ್ತುತ ದೈನಂದಿನ ವಸ್ತುಗಳ ವಿಪರೀತ ಹೆಚ್ಚಳದಿಂದಾಗಿ ತತ್ತರಿಸಿದ್ದು, ಇದೀಗ ಗಾಯದ ಮೇಲೆ ಬರೆ ಎಳೆದಂತೆ ಹಾಲು ಮೊಸರು ಸಹಿತ ತುಪ್ಪ, ಬೆಣ್ಣೆ, ಪನ್ನೀರ್ ಮತ್ತಿತರ ಹಾಲಿನ ಎಲ್ಲ ರೀತಿಯ ಉತ್ಪನ್ನಗಳನ್ನು ₹8 ರಿಂದ 35ರ ವರೆಗೆ ಹೆಚ್ಚಳಗೊಳಿಸಿ ಬಡ ಮಧ್ಯಮ ಕುಟುಂಬಕ್ಕೆ ತೀವ್ರ ಆರ್ಥಿಕ ಹೊರೆ ಉಂಟು ಮಾಡಿದೆ ಎಂದು ಆರೋಪಿಸಿದರು.

ಹಾಲು ಹಾಗೂ ಹಾಲಿನ ಉತ್ಪನ್ನಗಳು ನಿತ್ಯ ಕುಟುಂಬದಲ್ಲಿನ ಮಕ್ಕಳು, ವೃದ್ಧರು, ವಯಸ್ಕರ, ಮಹಿಳೆಯರು ಬಳಸುವ ಅತ್ಯಗತ್ಯ ಆಹಾರ ಪದಾರ್ಥವಾಗಿದ್ದು, ಹಾಲು ಉಪಯೋಗಿಸದೆ ಜೀವನ ನಡೆಯಲು ಸಾಧ್ಯವಿಲ್ಲ. ಇಂತಹ ಅತ್ಯಗತ್ಯ ವಸ್ತುವಿನ ಬೆಲೆ ಏರಿಕೆ ಜನಸಾಮಾನ್ಯರಿಗೆ ನೇರವಾಗಿ ಜೀವನ ನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಲಿದೆ ಎಂದು ತಿಳಿಸಿದರು.

ಹಾಲು ಹಾಗೂ ಉತ್ಪನ್ನಗಳ ಬೆಲೆ ಏರಿಕೆಯಿಂದ ಹೋಟೆಲ್, ಖಾನಾವಳಿಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಅನಿವಾರ್ಯವಾಗಿ ಗಗನಕ್ಕೇರಿದೆ ಬಡ, ಮಧ್ಯಮ ವರ್ಗದ ಜನತೆ ತುರ್ತು ಸಂದರ್ಭದಲ್ಲಿಯೂ ಹೋಟೆಲ್ ಖಾನಾವಳಿಗೆ ಊಟಕ್ಕೆ ತೆರಳಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.

ರಾಜ್ಯದ ಬಹುತೇಕ ಭಾಗಗಳಲ್ಲಿ ತೀವ್ರ ಬರದಿಂದಾಗಿ ರೈತ ಸಮುದಾಯ ಗ್ರಾಮೀಣ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಕುಡಿವ ನೀರಿನ ಅಭಾವ, ಜಾನುವಾರುಗಳಿಗೆ ಮೇವು ಹಾಗೂ ನೀರಿನ ಕೊರತೆ ಹೆಚ್ಚಾಗಿ ಕೃಷಿ ಉತ್ಪಾದನೆ ಕುಸಿತವಾಗಿದೆ ಪರಿಣಾಮ ಅಕ್ಕಿ ಸಕ್ಕರೆ ಬೇಳೆ ಕಾಳು ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಇದರೊಂದಿಗೆ ಹಾಲಿನ ದರ ಹೆಚ್ಚಳ ತತ್ತರಿಸಿರುವ ಜನಸಾಮಾನ್ಯರ ಶಾಪ ಸರ್ಕಾರಕ್ಕೆ ತಟ್ಟುವುದು ನಿಶ್ಚಿತ ಎಂದು ತಿಳಿಸಿದರು.

ಆಹಾರ ಪದಾರ್ಥ, ಹಾಲಿನ ಉತ್ಪನ್ನ, ಬಸ್ ಪ್ರಯಾಣ ದರ ಹೆಚ್ಚಳ ಜತೆಗೆ ಬರ ಪರಿಸ್ಥಿತಿಯಿಂದ ಸಂಕಷ್ಟ ಎದುರಿಸುತ್ತಿರುವ ಜನತೆ ಹಿಂದೆಂದೂ ಕಂಡರಿಯದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕೂಡಲೇ ಅಗತ್ಯ ವಸ್ತುಗಳ ಬೆಲೆ ಕಡಿತಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕು ತಪ್ಪಿದಲ್ಲಿ ಬೀದಿಗಿಳಿದು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಂತರ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬೆಲೆ ಏರಿಕೆ ಖಂಡಿಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರ.ಕಾ ಸಂಗಯ್ಯ, ತಾ.ಅಧ್ಯಕ್ಷ ಯೋಗೀಶ್ ಬೆಂಕಿ, ಪ್ರ.ಕಾ ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಆಶಾ ತಿಪ್ಪೇಶ್ ನಾಯ್ಕ ರಾಜ್ಯ ಮುಖಂಡ ಈರ್ಯಾನಾಯ್ಕ, ಜಯಣ್ಣ, ಹೇಮಂತಕುಮಾರ್, ಚಿನ್ನು ಮತ್ತಿತರರು ಹಾಜರಿದ್ದರು.

ಫೋಟೋ :18 ಕೆ.ಎಸ್.ಕೆ.ಪಿ 1

ಹಾಲು ಮೊಸರು ಸಹಿತ ದೈನಿಂದಿನ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಶಿಕಾರಿಪುರ ಜೆಡಿಎಸ್ ವತಿಯಿಂದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.