ರಾಜ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯ ಪರ್ವವನ್ನೇ ಪ್ರಾರಂಭಿಸಿದೆ. ನಮ್ಮ ಸರ್ಕಾರದ ಅಭಿವೃದ್ಧಿಯನ್ನು ಸಹಿಸದ ವಿರೋಧ ಪಕ್ಷದವರು ವಿನಾಕಾರಣ ಅಪಪ್ರಚಾರಗಳ ಮಾಡುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಸಾಧನೆ ಮೂಲಕವೇ ಉತ್ತರ ನೀಡಲಾಗುತ್ತಿದೆ ಎಂದು ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದ್ದಾರೆ.

- ಚನ್ನಗಿರಿ-ಕಗತೂರು ರಸ್ತೆ ಕಾಮಗಾರಿ, ಬೆಸ್ಕಾಂ ಉಪವಿಭಾಗ ಕಚೇರಿ ನಿರ್ಮಾಣಕ್ಕೆ ಗುದ್ದಲಿಪೂಜೆ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ರಾಜ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯ ಪರ್ವವನ್ನೇ ಪ್ರಾರಂಭಿಸಿದೆ. ನಮ್ಮ ಸರ್ಕಾರದ ಅಭಿವೃದ್ಧಿಯನ್ನು ಸಹಿಸದ ವಿರೋಧ ಪಕ್ಷದವರು ವಿನಾಕಾರಣ ಅಪಪ್ರಚಾರಗಳ ಮಾಡುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಸಾಧನೆ ಮೂಲಕವೇ ಉತ್ತರ ನೀಡಲಾಗುತ್ತಿದೆ ಎಂದು ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.

ಬುಧವಾರ ₹2.50 ಕೋಟಿ ವೆಚ್ಚದಲ್ಲಿ ಚನ್ನಗಿರಿ-ಕಗತೂರು ರಸ್ತೆಯ ಕಾಮಗಾರಿ, ₹1.41 ಕೋಟಿ ವೆಚ್ಚದಲ್ಲಿ ಬೆಸ್ಕಾಂ ಉಪವಿಭಾಗ ಕಚೇರಿ ನಿರ್ಮಾಣಕ್ಕೆ ಗುದ್ದಲಿಪೂಜೆ, ₹48.50 ಲಕ್ಷ ವೆಚ್ಚದಲ್ಲಿ ಜೋಳದಾಳ್ ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದ ಜನತೆಗೆ ಪಂಚ ಗ್ಯಾರಂಟಿಗಳನ್ನು ನೀಡಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಣವಿಲ್ಲ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಜನರು ಕೇಳುವ ಎಲ್ಲ ಕಾಮಗಾರಿಗಳನ್ನು ಮಾಡಿಸುತ್ತಿದ್ದೇನೆ. ಅನುದಾನ ಕೊರತೆಯಿಂದ ಕಾಮಗಾರಿ ಮಾಡಲು ಆಗುವುದಿಲ್ಲ ಎಂದು ಯಾರಿಗೂ ಹೇಳಿಲ್ಲ. ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿಯೂ ಒಂದಲ್ಲಾ ಒಂದು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಸಾಮಾನ್ಯ ಕುಟುಂಬದಿಂದ ಬಂದಿರುವ ನನ್ನ ಮೇಲೆ ಕ್ಷೇತ್ರದ ಜನತೆ ವಿಶ್ವಾಸವಿಟ್ಟು ಶಾಸಕನನ್ನಾಗಿ ಮಾಡಿದ್ದಾರೆ. ನನ್ನ ಐದು ವರ್ಷಗಳ ಅಧಿಕಾರದ ಅವಧಿಯಲ್ಲಿ ಕ್ಷೇತ್ರದ ಜನತೆಗೆ ಸಾಧ್ಯವಾದಷ್ಟು ಮೂಲಸೌಲಭ್ಯಗಳನ್ನು ಹೊದಗಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.

ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ರಾಮಚಂದ್ರ ಪ್ರಜಾಪತ್, ಸೈಯ್ಯದ್ ಗೌಸ್ ಪೀರ್, ಕುಮಾರ್, ಜೋಳದಾಳ್ ಕುಮಾರ್, ಜಿ.ನಿಂಗಪ್ಪ, ಲೋಕೋಪಯೋಗಿ ಇಲಾಖೆಯ ಅಭಿಯಂತರ ರವಿಕುಮಾರ್, ಪುರಸಭೆ ಕಂದಾಯ ಅಧಿಕಾರಿ ರಮೇಶ್ ಮೊದಲಾದವರು ಹಾಜರಿದ್ದರು.

- - -

-18ಕೆಸಿಎನ್ಜಿ2: ವಿವಿಧ ಕಾಮಗಾರಿಗಳಿಗೆ ಶಾಸಕ ಬಸವರಾಜು ವಿ,ಶಿವಗಂಗಾ ಗುದ್ದಲಿ ಪೂಜೆ ನೆರವೇರಿಸಿದರು.