ಬೆಳಗಾವಿ, ಚಿಕ್ಕೋಡಿ ಕ್ಷೇತ್ರದಲ್ಲಿ ಹೆಚ್ಚು ಅಂತರದ ಗೆಲುವು

KannadaprabhaNewsNetwork |  
Published : Mar 27, 2024, 01:08 AM IST
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಉತ್ತರ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು | Kannada Prabha

ಸಾರಾಂಶ

ಬೆಳಗಾವಿ: ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಕ್ಷೇತ್ರಗಳನ್ನು ಗೆಲ್ಲಿಸುವ ಸಂದೇಶ ನಮಗೆ ಬಂದಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಉತ್ತಮ ವಾತಾವರಣವಿದೆ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ: ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಕ್ಷೇತ್ರಗಳನ್ನು ಗೆಲ್ಲಿಸುವ ಸಂದೇಶ ನಮಗೆ ಬಂದಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಉತ್ತಮ ವಾತಾವರಣವಿದೆ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಬೆಳಗಾವಿ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಬೆಳಗಾವಿ ಉತ್ತರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಆಂತರಿಕ ಸಮೀಕ್ಷೆ ನಡೆಸಿದೆ. ಎರಡೂ ಕಡೆ ಹೆಚ್ಚಿನ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಭರವಸೆ ಮೂಡಿದೆ. ಕಳೆದ 50 ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಮಾಡಿದ್ದೇವೆ. ಜನರ ಜೀವನ ಮಟ್ಟ ಸುಧಾರಿಸಿದ್ದೇವೆ. ಈಗ ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಲಾಭದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. 10 ವರ್ಷಗಳ ಮೋದಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವಂತೆ ಕರೆ ನೀಡಿದರು.ಸಭೆಯಲ್ಲಿ ಬಿಜೆಪಿ ವಿರುದ್ದ ಹರಿಹಾಯ್ದ ಸಚಿವರು, ಬಿಜೆಪಿಯವರು ನೀಡಿದ್ದ ಒಂದೇ ಒಂದು ಭರವಸೆ ಈಡೇರಿಸಿಲ್ಲ. ಬುಲೆಟ್ ಟ್ರೇನ್, ರೈತರ ಆದಾಯ ದ್ವಿಗುಣ, ಪ್ರತಿಯೊಬ್ಬರಿಗೆ ₹15 ಲಕ್ಷ ಸ್ವಿಸ್ ಬ್ಯಾಂಕ್ ನಿಂದ ಹಣ ವಾಪಸ್ಸು ತರುವುದು ಸೇರಿ ಅನೇಕ ಭರವಸೆ ಕೊಟ್ಟಿದ್ದರು. ಆದರೆ, ಏನೂ ಮಾಡಿಲ್ಲ. ಮಹಿಳೆಯರು, ಬಡವರು, ಎಸ್ಸಿ, ಎಸ್ಟಿಗಳಿಗೆ ಏನು ಮಾಡಿದ್ದಾರೆ? ಪುಷ್ಪಕ ವಿಮಾನದ ಕಥೆ ಅಷ್ಟೇ ಹೇಳಿದ್ದಾರೆ. ಜಲಾಶಯ, ಇಸ್ರೋ, ವಿಶ್ವವಿದ್ಯಾಲಯ, ಐಐಟಿ ಸೇರಿ ಅನೇಕ ಸಂಸ್ಥೆಗಳನ್ನು ಕಟ್ಟಿದ್ದು ಕಾಂಗ್ರೆಸ್. ಕಾಂಗ್ರೆಸ್ ಮಾಡಿದ ಅಭಿವೃದ್ಧಿಯಿಂದ ಇಂದು ಭಾರತ ವಿಶ್ವಗುರು ಆಗಿದೆ. ಮೃಣಾಲ್ ಭವಿಷ್ಯದ ನಾಯಕ. ಮುಂದೆ ಪಕ್ಷ ಮತ್ತು ಜಿಲ್ಲೆಗೆ ದೊಡ್ಡ ಆಸ್ತಿಯಾಗಲಿದ್ದಾರೆ. ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದರು.

ದೇಶದಲ್ಲಿ ವಿರೋಧ ಪಕ್ಷವನ್ನು ಸಂಪೂರ್ಣವಾಗಿ ನಾಶ ಮಾಡುವ ಹುನ್ನಾರ ನಡೆದಿದೆ. ಜನ‌ ಮನಸ್ಸು ಮಾಡಿದರೆ ಯಾವ ಬದಲಾವಣೆ ಬೇಕಾದರೂ ಆಗುತ್ತದೆ. ಮೃಣಾಲ್, ಪ್ರಿಯಾಂಕಾ ಎಂಪಿ‌ ಆಗುವುದರಲ್ಲಿ ಸಂಶಯವೇ ಇಲ್ಲ. ಚಿಕ್ಕ ವಯಸ್ಸಿನ ಸಂಸದರನ್ನು ಸಂಸತ್ತಿಗೆ ಕಳಿಸಿ ಕೊಟ್ಟ ಶ್ರೇಯ ಬೆಳಗಾವಿ ಮತ್ತು ಚಿಕ್ಕೋಡಿಗೆ ಸಲ್ಲಲಿದೆ ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಲೋಕಲ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿಕೊಂಡರು.

ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳು ಇಡೀ ದೇಶದ ಗಮನ ಸೆಳೆದಿವೆ. ಕಾರಣ ಇಲ್ಲಿ ಕಾಂಗ್ರೆಸ್ ಯುವಕರಿಗೆ ಅವಕಾಶ ಮಾಡಿಕೊಟ್ಟಿದೆ. ಸತೀಶ ಜಾರಕಿಹೊಳಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಸೇರಿದಂತೆ ಜಿಲ್ಲೆಯ ಎಲ್ಲ ನಾಯಕರ ಆಶೀರ್ವಾದದಿಂದ ನನ್ನ ಪುತ್ರನಿಗೆ ಟಿಕೆಟ್ ಸಿಕ್ಕಿದ್ದು, ಇವರಿಗೆಲ್ಲಾ ನಾನು ಚಿರಋಣಿ. ಇನ್ನು ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳನ್ನು ಖಂಡಿತವಾಗಲೂ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಬೆಳಗಾವಿ ಉತ್ತರ ಶಾಸಕ ಆಸೀಫ್(ರಾಜು) ಸೇಠ್, ಮಾಜಿ ಸಚಿವ ಎ.ಬಿ.ಪಾಟೀಲ, ಶಶಿಕಾಂತ ನಾಯಿಕ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಸ್.ಕಿವಡಸಣ್ಣವರ, ಆರ್.ಪಿ.ಪಾಟೀಲ, ಯುವರಾಜ ಕದಂ, ಕಿರಣ ಸಾಧುನವರ್‌ ಸೇರಿ ಹಲವರು ಇದ್ದರು.ಬಾಕ್ಸ್ಆಶೀರ್ವಾದ ಮಾಡಿ ಎಂದ ಮೃಣಾಲ್ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್‌, ಯುವಕರೇ ಈ ದೇಶದ ಆಸ್ತಿ, ಭವಿಷ್ಯ ಎಂದು ಬೆಳಗಾವಿಯಲ್ಲಿ ನನಗೆ ಮತ್ತು ಚಿಕ್ಕೋಡಿಯಲ್ಲಿ ಸಹೋದರಿ ಪ್ರಿಯಾಂಕಾಗೆ ಪಕ್ಷದ ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದಾರೆ. ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ಸರ್ಕಾರ ತಲುಪಿಸಿದೆ. ಇದರಿಂದ ಜನ ಖುಷಿಯಲ್ಲಿದ್ದಾರೆ. ನನಗೊಂದು ಸುವರ್ಣಾವಕಾಶ ಸಿಕ್ಕಿದ್ದು, ದಯವಿಟ್ಟು ನನಗೆ ನೀವು ಆಶೀರ್ವಾದ ಮಾಡುವಂತೆ ಮನವಿ ಮಾಡಿಕೊಂಡರು.

ಕೋಟ್‌...

ಮೃಣಾಲ್ ಮತ್ತು ಪ್ರಿಯಾಂಕಾ ಇಬ್ಬರೂ ತಮ್ಮ ಭವಿಷ್ಯವನ್ನು ತ್ಯಾಗ ಮಾಡಿ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಎಂಪಿ ಆಗುವ ಅವಶ್ಯಕತೆ ಇರಲಿಲ್ಲ. ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿ ಆರಾಮವಾಗಿ ಇರಬಹುದಿತ್ತು. ಆದರೆ, ನಮ್ಮ ಒತ್ತಾಯಕ್ಕೆ ಜನರ ಸೇವೆ ಮಾಡಲು ಚುನಾವಣೆ ಕಣಕ್ಕೆ ಧುಮುಕಿದ್ದಾರೆ. ಒಂದಿಷ್ಟು ಜನರು ಇವ್ರು ಸಣ್ಣವರು ಎನ್ನುತ್ತಿದ್ದಾರೆ. ಈಗ ಸಣ್ಣವರೇ ಮುಂದೆ ದೊಡ್ಡವರಾಗುತ್ತಾರೆ. ರಾಜಕೀಯ ಹೊಸದಾಗಿ ಇರಬಹುದು. ಆದರೆ, ನಾಲ್ಕೈದು ವರ್ಷಗಳಿಂದ ಸಮಾಜಸೇವೆ ಮಾಡುತ್ತಿದ್ದಾರೆ.

ಸತೀಶ ಜಾರಕಿಹೊಳಿ, ಸಚಿವ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ