ಹುಬ್ಬಳ್ಳಿ:
ಪರಿಸರ ಅಭಿಯಂತರ, ಬಯೋ ಮೆಡಿಕಲ್ ಎಂಬ ಹುದ್ದೆಯಲ್ಲಿ ಕಾಂಚನಾ ಮಾಲಗಾರ ಎಂಬುವವರು ಅನಧಿಕೃತ ಕೆಲಸ ಮಾಡುತ್ತಿರುವ ಮಾಜಿ ಉದ್ಯೋಗಿ. ಇವರನ್ನು 2024ರ ಜನವರಿ 20ರಿಂದ ಕೆಲಸದಿಂದ ಬಿಡುಗಡೆಗೊಳಿಸಿ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಆದೇಶಿಸಿದ್ದಾರೆ. ವಿಚಿತ್ರ ಎಂದರೆ, ಇವರು ಕ್ಯಾಂಪಸ್ ವಿಸ್ತರಣಾಧಿಕಾರಿ ಜತೆ ಪ್ರತಿದಿನವೂ ಡೈರಕ್ಟರ್ ಮತ್ತು ಸಿಎಒ ಕಚೇರಿಯಲ್ಲಿ ಟೆಂಡರ್ ಕಡತಗಳೊಂದಿಗೆ ಹಾಜರಿರುತ್ತಾರೆ ಎಂದು ಕಿಮ್ಸ್‌ನ ಮೂಲಗಳು ತಿಳಿಸುತ್ತವೆ.
ರಾಜ್ಯ ಅರ್ಥಿಕ ಇಲಾಖೆ ಕಾರ್ಯದರ್ಶಿ ಆರ್. ವಿಶಾಲ ನೇತೃತ್ವದಲ್ಲಿ ಕಿಮ್ಸ್‌ನಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆ ಮತ್ತು ವಾರ್ಡ್‌ಗಳ ಪರಿವೀಕ್ಷಣೆಯಲ್ಲೂ ಪಾಲ್ಗೊಂಡಿದ್ದು ವಿಡಿಯೋ ದೃಶ್ಯಗಳಲ್ಲಿ ಸ್ಪಷ್ಟವಾಗಿವೆ. ನಿರ್ದೇಶಕ ಕಚೇರಿಯಲ್ಲಿ ಮಧ್ಯಾಹ್ನ ನಡೆದ ಎಚ್‌ಒಡಿಗಳ ಸಭೆಯಲ್ಲೂ ಕಾಂಚನಾ ಮಾಲಗಾರ ಅನಧಿಕೃತವಾಗಿ ಪಾಲ್ಗೊಂಡಿದ್ದರು. ಈ ವಿಷಯ ತಿಳಿದು ಮಾಧ್ಯಮದವರು ಕಿಮ್ಸ್‌ಗೆ ಧಾವಿಸುತ್ತಿದ್ದಂತೆ ಮೀಟಿಂಗ್ ಹಾಲ್‌ನಿಂದ ಹೊರಹೋದರು.ಕಿಮ್ಸ್‌ನಲ್ಲಿ ಪರಿಸರ ಅಭಿಯಂತರ ಹುದ್ದೆ ಮಂಜೂರಾತಿ ಇಲ್ಲದಿದ್ದರೂ 16ರ ಅಕ್ಟೋಬರ್ 2023ರಂದು ಕಾಂಚನಾ ಮಾಲಗಾರ ಅವರನ್ನು ಅನಧಿಕೃತವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು. ಗುತ್ತಿಗೆ ನವೀಕರಿಸುವಂತೆ ಕಾಂಚನಾ ಅವರು ಕಿಮ್ಸ್‌ಗೆ ಮನವಿ ಸಲ್ಲಿಸಿದ್ದರು. ಆದರೆ, ಈ ವಿಷಯವನ್ನು 12ರ ಡಿಸೆಂಬರ್ 2023ರಂದು ನಡೆದ ವೈದ್ಯಕೀಯ ಶಿಕ್ಷಣ ಸಚಿವರ ಅಧ್ಯಕ್ಷತೆಯ ಆಡಳಿತ ಮಡಳಿ (ಕೌನ್ಸಿಲ್) ಸಭೆಯಲ್ಲಿ ಮಂಡಿಸಲಾಗಿತ್ತು. ಪರಾಮರ್ಶೆ ಮಾಡಿದಾಗ ಹುದ್ದೆ ಮಂಜೂರಾತಿ ಇಲ್ಲ. ಅಲ್ಲದೇ ಈ ಬಗ್ಗೆ ಪ್ರಸ್ತಾವನೆಯೂ ಇಲ್ಲ ಎಂದು ಪ್ರಸ್ತಾವನೆ ತಿರಸ್ಕರಿಸಲಾಗಿತ್ತು. ಗುತ್ತಿಗೆ ಅವಧಿಯು ಜ.20ರಂದು ಮುಗಿದಿದ್ದು, ಅಂದಿನಿಂದ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ನಿರ್ದೇಶಕರು ಜ. 24, 2024ರಂದು ಆದೇಶ ಹೊರಡಿಸಿದ್ದಾರೆ.