ಮುಖ್ಯ ಶಿಕ್ಷಕನ ಎತ್ತಂಗಡಿ ಮಾಡಿಸಲು ಶಾಲೆ ಕುಡಿವ ನೀರಿನ ಟ್ಯಾಂಕಿಗೆ ವಿಷ!

Published : Aug 03, 2025, 05:34 AM IST
School Holiday August 2025

ಸಾರಾಂಶ

ಸರ್ಕಾರಿ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ ಕಿರಾತಕರನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಬೇರೆ ಧರ್ಮಕ್ಕೆ ಸೇರಿದ ಮುಖ್ಯ ಶಿಕ್ಷಕನನ್ನು ಬೇರೆಡೆಗೆ ವರ್ಗ ಮಾಡಿಸಲು ಹೀನ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬೆಳಗಾವಿ : ಸರ್ಕಾರಿ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ ಕಿರಾತಕರನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಬೇರೆ ಧರ್ಮಕ್ಕೆ ಸೇರಿದ ಮುಖ್ಯ ಶಿಕ್ಷಕನನ್ನು ಬೇರೆಡೆಗೆ ವರ್ಗ ಮಾಡಿಸಲು ಹೀನ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ 15 ದಿನಗಳ ಹಿಂದೆ ವಿಷಯುಕ್ತ ನೀರು ಸೇವಿಸಿ 11 ಮಕ್ಕಳು ಅಸ್ವಸ್ಥಗೊಂಡಿದ್ದರು. ಈ ಪ್ರಕರಣದಲ್ಲಿ ಶ್ರೀರಾಮ ಸೇನೆಯ ಸವದತ್ತಿ ತಾಲೂಕು ಅಧ್ಯಕ್ಷ ಹೂಲಿಕಟ್ಟಿ ಗ್ರಾಮದ ಸಾಗರ ಪಾಟೀಲ, ಕೃಷ್ಣಾ ಮಾದರ, ನಾಗನಗೌಡ ಪಾಟೀಲನನ್ನು ಬಂಧಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ। ಭೀಮಾಶಂಕರ ಗುಳೇದ ಸುದ್ದಿಗೋಷ್ಠಿ ನಡೆಸಿ, ಮುಖ್ಯ ಶಿಕ್ಷಕನನ್ನು ಶಾಲೆಯಿಂದ ಓಡಿಸಲು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ವಿಷ ಮಿಶ್ರಿತ ನೀರು ‌ಸೇವಿಸಿ ಮಕ್ಕಳು ಮೃತಪಟ್ಟರೆ ಅದಕ್ಕೆ ಮುಖ್ಯ ಶಿಕ್ಷಕ ಹೊಣೆಯಾಗಿ ಬೇರೆ ಕಡೆ ವರ್ಗಾವಣೆ ಆಗುತ್ತಾರೆ ಎಂದು ಬಂಧಿತ ಆರೋಪಿಗಳು ಸಂಚು ರೂಪಿಸಿದ್ದರು ಎಂದು ಹೇಳಿದರು.

ಆರೋಪಿ ಶ್ರೀರಾಮ ಸೇನೆಯ ಸವದತ್ತಿ ತಾಲೂಕಾಧ್ಯಕ್ಷ ಸಾಗರ ಪಾಟೀಲ ವಿಷ ಬೆರೆಸಲು ಕೃಷ್ಣಾ ಮಾದರ ಎಂಬಾತನಿಗೆ ಹೇಳಿದ್ದ. ಕೃಷ್ಣಾ ಅನ್ಯಜಾತಿ ಹುಡುಗಿಯನ್ನು ಪ್ರೀತಿಸುತ್ತಿರುವ ಸಂಗತಿ ತಿಳಿದಿದ್ದ ಆರೋಪಿಗಳು ನಾವು ಹೇಳುವ ಕೆಲಸ ಮಾಡದಿದ್ದರೆ ನಿನ್ನ ಪ್ರೀತಿಯ ವಿಷಯ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಹೆದರಿ ನೀರಿನಲ್ಲಿ ವಿಷ ಬೆರೆಸಲು ಕೃಷ್ಣಾ ಒಪ್ಪಿಕೊಂಡಿದ್ದ.‌ ಆಗ ಸಾಗರ ತನ್ನ ಸಂಬಂಧಿ ನಾಗನಗೌಡ ಜೊತೆಗೆ ಮುನವಳ್ಳಿಗೆ ಹೋಗಿ ಕೀಟನಾಶಕ ತಂದಿದ್ದರು.  

ಬಳಿಕ ಕೃತ್ಯಕ್ಕೆ ಅದೇ ಶಾಲೆಯ ಅಮಾಯಕ ಬಾಲಕನಿಗೆ ಚಾಕೋಲೆಟ್, ಕುರ್‌ಕುರೆ ಮತ್ತು ₹500 ನೀಡಿ ಕೃತ್ಯಕ್ಕೆ ಪ್ರಚೋದನೆ ನೀಡಿದ್ದರು. ಆಮಿಷಕ್ಕೆ ಒಳಗಾಗಿದ್ದ ಬಾಲಕ ಶಾಲಾ ಆವರಣದಲ್ಲಿದ್ದ ಟ್ಯಾಂಕರ್‌ನಲ್ಲಿ ವಿಷ ಬೆರೆಸಿ ಬಾಟಲಿ ಅಲ್ಲೇ ಎಸೆದಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಭೀಮಾಶಂಕರ ತಿಳಿಸಿದರು.

PREV
Stay informed with the latest news from Belagavi district (ಬೆಳಗಾವಿ ಸುದ್ದಿ) — covering local governance, industry & economy, agriculture and farming, heritage & tourism, community events, civic issues, and district-level developments in Belagavi only on Kannada Prabha News.
Read more Articles on

Recommended Stories

ಲಿಂಗರಾಜ ದೇಸಾಯಿ ಕೊಡುಗೆ ವಿದ್ಯಾರ್ಥಿಗಳಿಗೆ ದಾರಿದೀಪ
ಪ್ರಧಾನಿ ನಿಂದಿಸಿದ ವ್ಯಕ್ತಿ ಪೊಲೀಸ್‌ ವಶಕ್ಕೆ