ಕೊಳವೆಬಾವಿ ಮುಚ್ಚದಿದ್ದರೆ ಶಿಕ್ಷೆ ಸೇರಿ 11 ವಿಧೇಯಕ - ಬೈಕ್‌, ಕಾರಿಗೆ ಹೆಚ್ಚುವರಿ ಕರ

Published : Dec 13, 2024, 11:43 AM IST
Belagavi Suvarna Soudha

ಸಾರಾಂಶ

  ವಿಶ್ವವಿದ್ಯಾಲಯದ ಕುಲಾಧಿಪತಿ ಸ್ಥಾನವನ್ನು ರಾಜ್ಯಪಾಲರಿಂದ ಹಿಂಪಡೆದು ಮುಖ್ಯಮಂತ್ರಿಗಳಿಗೆ ನೀಡುವುದು ಹಾಗೂ ಹೊಸ ಮೋಟಾರು ಬೈಕ್‌ಗಳಿಗೆ 500 ರು, ಕಾರುಗಳಿಗೆ 1,000 ರು. ಹೆಚ್ಚುವರಿ ಕರ ವಿಧಿಸಲು ಪ್ರಸ್ತಾಪಿಸಿರುವ ವಿಧೇಯಕ ಸೇರಿ ಒಟ್ಟು 11 ವಿಧೇಯಕಗಳನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

ಸುವರ್ಣ ವಿಧಾನಸಭೆ :  ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಸ್ಥಾನವನ್ನು ರಾಜ್ಯಪಾಲರಿಂದ ಹಿಂಪಡೆದು ಮುಖ್ಯಮಂತ್ರಿಗಳಿಗೆ ನೀಡುವುದು ಹಾಗೂ ಹೊಸ ಮೋಟಾರು ಬೈಕ್‌ಗಳಿಗೆ 500 ರು, ಕಾರುಗಳಿಗೆ 1,000 ರು. ಹೆಚ್ಚುವರಿ ಕರ ವಿಧಿಸಲು ಪ್ರಸ್ತಾಪಿಸಿರುವ ವಿಧೇಯಕ ಸೇರಿ ಒಟ್ಟು 11 ವಿಧೇಯಕಗಳನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ನಿಧಿ ಉದ್ದೇಶಕ್ಕಾಗಿ ವಾಹನಗಳ ನೋಂದಣಿ ಸಮಯದಲ್ಲಿ ದ್ವಿಚಕ್ರ ವಾಹನಗಳಿಗೆ 500 ರು. ಹಾಗೂ ಸಾರಿಗೇತರ (ವೈಟ್‌ ಬೋರ್ಡ್‌) ಕಾರುಗಳಿಗೆ 1,000 ರು. ಹೆಚ್ಚುವರಿ ಉಪಕರ ವಿಧಿಸಲು ನಿರ್ಧರಿಸಲಾಗಿದೆ.

ಈ ಸಂಬಂಧ ಉಪಕರ ವಿಧಿಸಲು ಹಾಗೂ ಸಂಗ್ರಹಿಸಲು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ -1957ಗೆ ತಿದ್ದುಪಡಿ ತರಲು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (2ನೇ ತಿದ್ದುಪಡಿ) ವಿಧೇಯಕ - 2024 ಮಂಡನೆ ಮಾಡಲಾಗಿದೆ.

ರಾಜ್ಯಪಾಲರ ಅಧಿಕಾರ ಮೊಟಕು ವಿಧೇಯಕ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ-2024 ಮಂಡಿಸಿದ್ದು, ಇದರ ಪ್ರಕಾರ ರಾಜ್ಯಪಾಲರ ಬದಲಿಗೆ ಮುಖ್ಯಮಂತ್ರಿಗಳನ್ನು ಕುಲಾಧಿಪತಿಯಾಗಿ ನೇಮಿಸಬೇಕು.

ಶೋಧನಾ ಸಮಿತಿಯು ಶಿಫಾರಸು ಮಾಡಿದ ಮೂವರು ವ್ಯಕ್ತಿಗಳ ಪೈಕಿ ಒಬ್ಬರನ್ನು ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ನೇಮಿಸುವ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಬೇಕು ಎಂದು ಪ್ರಸ್ತಾಪಿಸಲಾಗಿದೆ.

ಠೇವಣಿದಾರ ಹಿತ ಸಂರಕ್ಷಣಾ ವಿಧೇಯಕ: ಹಣಕಾಸು ಸಂಸ್ಥೆ, ಅಧೀನ ಸಂಸ್ಥೆ ಅಥವಾ ವಸತಿ ಅಭಿವೃದ್ಧಿ ಸೊಸೈಟಿಗಳಲ್ಲಿ ಠೇವಣಿದಾರರಿಗೆ ವಂಚನೆ ಮಾಡಿರುವವರಿಂದ ಹಣ ವಸೂಲಿ ಮಾಡಿ ಠೇವಣಿದಾರರಿಗೆ ನೀಡಲು ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ತಿದ್ದುಪಡಿ ವಿಧೇಯಕ ಜಾರಿಯಲ್ಲಿದ್ದು, ವಂಚಕರು ಶಿಕ್ಷೆಯಿಂದ ಪಾರಾಗುವುದನ್ನು ತಪ್ಪಿಸಲು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಮತ್ತು ಸಂರಕ್ಷಣೆ ತಿದ್ದುಪಡಿ ವಿಧೇಯಕ ಮಂಡನೆ ಮಾಡಲಾಗಿದೆ.

ಚಾಣಕ್ಯ ವಿವಿ ನಿಯಮ ತಿದ್ದುಪಡಿ: ಚಾಣಕ್ಯ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ-2024 ಮಂಡಿಸಿದ್ದು, ಎಲ್ಲಾ ಖಾಸಗಿ ವಿಶ್ವವಿದ್ಯಾಲಯಗಳಿಗೆ ಸರ್ಕಾರದ ಪ್ರತಿನಿಧಿ ಒಬ್ಬರನ್ನು ನೇಮಕ ಮಾಡಲಾಗುತ್ತಿತ್ತು. ಆದರೆ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಇದರಿಂದ ವಿನಾಯಿತಿ ನೀಡಲಾಗಿತ್ತು. ಇದನ್ನು ತಿದ್ದುಪಡಿ ಮಾಡಿ ಚಾಣಕ್ಯ ವಿವಿಗೂ ಸರ್ಕಾರದ ಪ್ರತಿನಿಧಿ ನೇಮಿಸಲು ಅವಕಾಶ ಕಲ್ಪಿಸಲು ಪ್ರಸ್ತಾಪಿಸಲಾಗಿದೆ.

ಕಾರ್ಮಿಕ ಕಲ್ಯಾಣ ನಿಧಿ ವಂತಿಗೆ ಹೆಚ್ಚಳ: ಕಾರ್ಮಿಕ ಕಲ್ಯಾಣ ನಿಧಿಗೆ ಸಂಗ್ರಹಿಸಲಾಗುತ್ತಿರುವ ವಂತಿಗೆ ಹೆಚ್ಚಿಸುವ ಸಂಬಂಧ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ 2024ನ್ನು ಮಂಡಿಸಲಾಗಿದೆ. ಸದ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಕಾರ್ಮಿಕ ಕಲ್ಯಾಣ ನಿಧಿಗೆ ಪ್ರತಿ ಕಾರ್ಮಿಕರಿಂದ ವಾರ್ಷಿಕ 20 ರು., ಮಾಲೀಕರಿಂದ 40 ರು. ಹಾಗೂ ಸರ್ಕಾರದಿಂದ 20 ರು. ವಂತಿಗೆ ನೀಡಲಾಗುತ್ತಿತ್ತು. ಅದನ್ನು ಹೆಚ್ಚಿಸಿ ಕಾರ್ಮಿಕರಿಂದ ಮತ್ತು ಸರ್ಕಾರದಿಂದ ತಲಾ 50 ರು. ಹಾಗೂ ಮಾಲೀಕರಿಂದ 100 ರು. ಸಂಗ್ರಹಿಸುವ ಕುರಿತು ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ವಿಧೇಯಕಕ್ಕೆ ತಿದ್ದುಪಡಿ ತರಲಾಗುತ್ತಿದ್ದು, ಅದನ್ನು ಅಧಿವೇಶನದಲ್ಲಿ ಮಂಡಿಸಲಾಗುತ್ತಿದೆ. ಈ ತಿದ್ದುಪಡಿಯಿಂದ ಸರ್ಕಾರಕ್ಕೆ 15.81 ಕೋಟಿ ರು. ಹೆಚ್ಚುವರಿ ವೆಚ್ಚವಾಗಲಿದ್ದು, ಕಲ್ಯಾಣ ನಿಧಿ ಸಂಗ್ರಹ 200 ಕೋಟಿ ರು.ಗಳಷ್ಟಾಗಲಿದೆ.

ಕೊಳವೆಬಾವಿ ಮುಚ್ಚದಿದ್ದರೆ 1 ವರ್ಷ ಜೈಲು: ಕೊಳವೆಬಾವಿ ಕೊರೆದು ಸೂಕ್ತ ರೀತಿಯಲ್ಲಿ ಮುಚ್ಚದ ಕಾರಣದಿಂದ ಉಂಟಾಗುತ್ತಿರುವ ಅವಘಡ ತಪ್ಪಿಸಲು ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ, ನಿವರ್ಹಣಾ ನಿಯಂತ್ರಣ) ತಿದ್ದುಪಡಿ ವಿಧೇಯಕ-2024 ಮಂಡನೆ ಮಾಡಲಾಗಿದೆ.

ಕಾರ್ಯನಿರ್ವಹಿಸದ ಅಥವಾ ಸ್ಥಗಿತಗೊಂಡ ಕೊಳವೆಬಾವಿ ಮುಚ್ಚದಿದ್ದರೆ ಅಂತಹವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರು. ದಂಡ ವಿಧಿಸುವುದು ಹಾಗೂ ಕೊಳವೆಬಾವಿ ಕೊರೆದ ಸಂಸ್ಥೆಯ ಮಾಲೀಕರಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರು. ದಂಡ ವಿಧಿಸುವ ನಿಯಮವನ್ನು ಸೇರಿಸಲು ಪ್ರಸ್ತಾಪಿಸಲಾಗಿದೆ.

12 ಕಡೆ ರೋಪ್‌ವೇ, ರೋಪ್‌ವೇಗಾಗಿ ವಿಧೇಯಕ: ರಾಜ್ಯದ ಪ್ರವಾಸಿ ತಾಣಗಳಲ್ಲಿ ರೋಪ್‌ ವೇ ಅಭಿವೃದ್ಧಿ ಮಾಡುವ ಕುರಿತಂತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ರೋಪ್‌ ವೇ ವಿಧೇಯಕ 2024ನ್ನು ಮಂಡಿಸಲಾಗಿದೆ.

ಉಳಿದಂತೆ ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ತಮ್ಮ ಸ್ವತ್ತಿನ ಕುರಿತ ಮಾಹಿತಿಯನ್ನು ಸ್ವಯಂ ಪರಿಷ್ಕರಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಬಿಬಿಎಂಪಿ (ಎರಡನೇ ತಿದ್ದುಪಡಿ) ವಿಧೇಯಕ 2024, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಬಸವಣ್ಣನವರ ಜನ್ಮಸ್ಥಳ ಅಭಿವೃದ್ಧಿಗೆ ಸಂಬಂಧಿಸಿ ಹೊಸ ಪ್ರಾಧಿಕಾರ ರಚನೆಗೆ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2024, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ 2024, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ ಸೇರಿ ಹನ್ನೊಂದು ವಿಧೇಯಕಗಳನ್ನು ಮಂಡನೆ ಮಾಡಲಾಗಿದೆ.

PREV
Stay informed with the latest news from Belagavi district (ಬೆಳಗಾವಿ ಸುದ್ದಿ) — covering local governance, industry & economy, agriculture and farming, heritage & tourism, community events, civic issues, and district-level developments in Belagavi only on Kannada Prabha News.

Recommended Stories

ಸಂಕ್ರಮಣದ ಸಂಭ್ರಮದ ತೆಪ್ಪೋತ್ಸವ
ಕಾಲವೆಯಲ್ಲಿ ಮುಳುಗಿ ವಸತಿ ಶಾಲೆ ವಿದ್ಯಾರ್ಥಿ ಸಾವು