ವಕ್ಫ್‌ ಗೊಂದಲ ನಿವಾರಣೆಗೆ ಸಮಿತಿ: ಸಿಎಂ ನಿವೃತ್ತ ಹೈಕೋರ್ಟ್‌ ಜಡ್ಜ್‌ ನೇತೃತ್ವದ ಸಮಿತಿ ರಚನೆ

ಸಾರಾಂಶ

ವಕ್ಫ್‌ ಮಂಡಳಿ ಆಸ್ತಿ ವಿವಾದ ಮತ್ತು ಗೊಂದಲ ಬಗೆಹರಿಸಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ.

  ಸುವರ್ಣ ವಿಧಾನಸಭೆ : ವಕ್ಫ್‌ ಮಂಡಳಿ ಆಸ್ತಿ ವಿವಾದ ಮತ್ತು ಗೊಂದಲ ಬಗೆಹರಿಸಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ.

ಅಲ್ಲದೆ, ಇನಾಂ ರದ್ದತಿ ಕಾಯ್ದೆ ಮತ್ತು ಭೂ ಸುಧಾರಣಾ ಕಾಯ್ದೆ ಅಡಿ ರೈತರಿಗೆ ಮಂಜೂರಾದ ಭೂಮಿಯು ವಕ್ಫ್‌ಗೆ ಸೇರಿದ್ದಾಗಿದ್ದರೆ, ದೇವಸ್ಥಾನ, ಹಿಂದೂ ರುದ್ರಭೂಮಿ, ಸರ್ಕಾರಿ ಶಾಲೆಗಳು ವಕ್ಫ್‌ ಆಸ್ತಿಯಲ್ಲಿದ್ದರೆ ಅಂಥವನ್ನು ತೆರವು ಮಾಡುವುದಿಲ್ಲ. ಬದಲಾಗಿ ಪಹಣಿಯಲ್ಲಿ ನಮೂದಾಗಿರುವ ವಕ್ಫ್‌ ಅನ್ನು ತೆಗೆದು ಖಾತೆ ಮಾಡಿಕೊಡಲಾಗುವುದು ಎಂದೂ ಪ್ರಕಟಿಸಿದೆ.

ಬುಧವಾರ ವಕ್ಫ್‌ ಆಸ್ತಿ ನೆಪದಲ್ಲಿ ರಾಜ್ಯದ ರೈತರಿಗೆ ನೋಟಿಸ್‌ ನೀಡುತ್ತಿರುವ ಕುರಿತು ನಡೆದ ಚರ್ಚೆಗೆ ಬಿಜೆಪಿ ಶಾಸಕರ ಸಭಾತ್ಯಾಗದ ಬಳಿಕ ಉತ್ತರಿಸಿದ ಸಿದ್ದರಾಮಯ್ಯ, ವಕ್ಫ್‌ ಮಂಡಳಿ ಆಸ್ತಿ ಕುರಿತು ಎದ್ದಿರುವ ವಿವಾದವನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ವಕ್ಫ್‌ ಆಸ್ತಿಯಲ್ಲಿರುವ ಕೃಷಿ ಭೂಮಿ, ದೇವಸ್ಥಾನ ಮತ್ತು ಹಿಂದೂ ರುದ್ರಭೂಮಿಗಳ ಕುರಿತು ಪರಿಶೀಲಿಸಿ ವರದಿ ನೀಡಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.

ಇನಾಂ ರದ್ದತಿ ಕಾಯ್ದೆ ಮತ್ತು ಭೂ ಸುಧಾರಣಾ ಕಾಯ್ದೆ ಅಡಿ ರೈತರಿಗೆ ಮಂಜೂರಾದ ಭೂಮಿ ವಕ್ಫ್‌ಗೆ ಸೇರಿದ್ದಾಗಿದ್ದರೆ, ದೇವಸ್ಥಾನ, ಹಿಂದೂ ರುದ್ರಭೂಮಿ, ಸರ್ಕಾರಿ ಶಾಲೆಗಳು ವಕ್ಫ್‌ ಆಸ್ತಿಯಲ್ಲಿದ್ದರೆ ಅಂತಹವನ್ನು ತೆರವು ಮಾಡದಿರುವ ಸರ್ಕಾರ ಈಗಾಗಲೇ ನಿರ್ಧರಿಸಿದೆ. ಮಸೀದಿ, ಮದರಸಾ, ದರ್ಗಾ, ಈದ್ಗಾ ಮೈದಾನ, ಖಬರಸ್ತಾನದ ಭೂಮಿಗಳನ್ನು ಮಾತ್ರ ವಕ್ಫ್‌ಗೆ ಸೇರ್ಪಡೆ ಮಾಡಲಾಗುವುದು. ಅದರೊಂದಿಗೆ ಸರ್ಕಾರ ನಿರ್ಧರಿಸಿದ ಅಂಶಗಳನ್ನು ಹೊರತುಪಡಿಸಿ ಉಳಿದ ಅಕ್ರಮ ಒತ್ತುವರಿಯನ್ನು ತೆರವು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮೊದಲು ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮುಖ್ಯಮಂತ್ರಿಗಳ ಅಭಿಪ್ರಾಯದಂತೆ ಇನಾಂ ರದ್ದತಿ ಕಾಯ್ದೆ ಮತ್ತು ಭೂ ಸುಧಾರಣಾ ಕಾಯ್ದೆ ಅಡಿ ಭೂಮಿ ಪಡೆದ, ದೇವಸ್ಥಾನ, ರುದ್ರಭೂಮಿಯಲ್ಲಿನ ಪಹಣಿಯಲ್ಲಿ ನಮೂದಾಗಿರುವ ವಕ್ಫ್‌ನ್ನು ತೆಗೆಯುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಅದರಂತೆ ಖಾತೆ ಮಾಡಿಕೊಡಲಾಗುವುದು ಎಂದು ಹೇಳಿದರು.

ವಕ್ಫ್‌ ಆಸ್ತಿಗೆ ಸಂಬಂಧಿಸಿ ರೈತರಿಗೆ ನೀಡಲಾದ ನೋಟಿಸ್‌ ಕುರಿತು ಬಿಜೆಪಿ ನಾಯಕರು ರೈತರಲ್ಲಿ ಮತ್ತು ಜನರಲ್ಲಿ ಆತಂಕ ಸೃಷ್ಟಿಸಿದ್ದಾರೆ. ಇನಾಂ ರದ್ದತಿ ಕಾಯ್ದೆ ಮತ್ತು ಭೂ ಸುಧಾರಣಾ ಕಾಯ್ದೆಗೂ ಮುನ್ನ 1.12 ಲಕ್ಷ ಎಕರೆ ಭೂಮಿ ವಕ್ಫ್‌ಗೆ ಸೇರಿತ್ತು. ಆದರೆ, ಇನಾಂ ರದ್ದತಿ ಕಾಯ್ದೆ ಅಡಿ 47,263 ಎಕರೆ ಮತ್ತು ಭೂ ಸುಧಾರಣಾ ಕಾಯ್ದೆ ಅಡಿ 23,628 ಎಕರೆ ಸೇರಿ 70 ಸಾವಿರಕ್ಕೂ ಹೆಚ್ಚಿನ ಎಕರೆ ವಕ್ಫ್‌ಗೆ ಸೇರಿದ ಭೂಮಿ ರೈತರಿಗೆ ಮಂಜೂರಾಗಿದೆ. ಸದ್ಯ, 20,054 ಎಕರೆ ಭೂಮಿ ಮಾತ್ರ ವಕ್ಫ್‌ಗೆ ಸೇರಿದ್ದಾಗಿದ್ದು, ಅದರಲ್ಲಿ 19,979 ಎಕರೆ ಭೂಮಿ ಅಕ್ರಮವಾಗಿ ಖಾಸಗಿಯವರು ಒತ್ತುವರಿ ಮಾಡಿದ್ದಾರೆ. ಹೀಗೆ ಒತ್ತುವರಿ ಮಾಡಿದವರಲ್ಲಿ 9,121 ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರೆ, 2,080 ಮಂದಿ ಹಿಂದು ಸಮುದಾಯದವರಾಗಿದ್ದಾರೆ ಎಂದು ವಿವರಿಸಿದರು.

ಬಿಜೆಪಿ ಎಡವಟ್ಟು ಸರಿಪಡಿಸಿದ್ದೇವೆ: ಸದ್ಯ ವಕ್ಫ್‌ ನೋಟಿಸ್‌ಗೆ ಸಂಬಂಧಿಸಿ ವಿವಾದ ಮಾಡುತ್ತಿರುವ ಬಿಜೆಪಿ ತನ್ನ ಆಡಳಿತದಲ್ಲಿ 4,500 ಆಸ್ತಿಗಳನ್ನು ವಕ್ಫ್‌ಗೆ ನೋಂದಣಿ ಮಾಡಿಕೊಟ್ಟಿದೆ. ಈಗ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದ 600 ಆಸ್ತಿಗಳನ್ನಷ್ಟೇ ವಕ್ಫ್‌ಗೆ ಖಾತೆ ಮಾಡಿಕೊಡಲಾಗಿದೆ. ವಕ್ಫ್‌ ಆಸ್ತಿ ವಿಚಾರವಾಗಿ ಬಿಜೆಪಿ ಮಾಡುತ್ತಿರುವ ಆರೋಪಗಳೆಲ್ಲವೂ ರಾಜಕೀಯ ಪ್ರೇರಿತ. ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಇದೇ ವೇಳೆ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.

ಇದೇ ವೇಳೆ ಬಿಜೆಪಿ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಪ್ರತಿ ಆಸ್ತಿಗೂ ಸ್ಪಷ್ಟನೆ ನೀಡಿದ ಕೃಷ್ಣ ಬೈರೇಗೌಡ, ಚಿಕ್ಕಬಳ್ಳಾಪುರ ಮುದ್ದೇನಹಳ್ಳಿಯ ಸರ್‌ ಎಂ. ವಿಶ್ವೇಶ್ವರಯ್ಯ ವ್ಯಾಸಂಗ ಮಾಡಿದ ಶಾಲೆಯ ಆಸ್ತಿಯಲ್ಲಿ 1.04 ಗುಂಟೆ ಜಾಗವನ್ನು ಮಾತ್ರ ಶಾಲೆ ಆವರಣದಲ್ಲಿನ ದರ್ಗಾಕ್ಕೆ ಖಾತೆ ಮಾಡಲಾಗಿದ್ದು, ಉಳಿದ 17.12 ಗುಂಟೆ ಭೂಮಿಯನ್ನು ಶಾಲೆಗೆ ಖಾತೆ ಮಾಡಲಾಗಿದೆ. ಅದೇ ರೀತಿ, ಶ್ರೀರಂಗಪಟ್ಟಣದ ಮಹದೇವಪುರದ 6 ಗುಂಟೆ ಭೂಮಿಯನ್ನು ಮಸೀದಿಗೆ ಖಾತೆ ಮಾಡಿಕೊಡಲಾಗಿತ್ತು. ಅದನ್ನು ಬದಲಿಸಿ ಅಲ್ಲಿರುವ ಚಿಕ್ಕಮ್ಮನಗುಡಿಗೆ ಖಾತೆ ಮಾಡಲಾಗಿದೆ.

ಆಳಂದ ತಾಲೂಕಿನ ಬೀರದೇವರಗುಡಿಯನ್ನು 2020ರಲ್ಲಿ ಅಂದಿನ ಬಿಜೆಪಿ ಸರ್ಕಾರ ಪಹಣಿಯಲ್ಲಿ ವಕ್ಫ್‌ ಹೆಸರು ನಮೂದಿಸಲಾಗಿತ್ತು. ಅದನ್ನು ನಾವು ಬದಲಿಸಿ ಬೀರದೇವರಗುಡಿ ಸರ್ಕಾರ ಎಂದು ನಮೂದಿಸಿದ್ದೇವೆ. ಹೈಕೋರ್ಟ್‌ ಆದೇಶದ ಮೇರೆಗೆ ಮೈಸೂರಿನ ಮುನೇಶ್ವರ ಲೇಔಟ್‌ನಲ್ಲಿನ 110 ಮನೆಗಳಿಗೆ ವಕ್ಫ್‌ ಆಸ್ತಿ ಎಂದು ನೋಟಿಸ್‌ ನೀಡಲಾಗಿದೆ. ಅದನ್ನು ಬಿಟ್ಟರೆ ಬೇಕಂತಲೇ ನೋಟಿಸ್‌ ನೀಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ದೇವಸ್ಥಾನ ಆಸ್ತಿ ಉಳಿಸಿದ್ದೇವೆ: ಕೃಷ್ಣ ಬೈರೇಗೌಡ

ರಾಜ್ಯ ಸರ್ಕಾರ ವಕ್ಫ್‌ ಆಸ್ತಿಗಿಂತ ಮುಜರಾಯಿ ಆಸ್ತಿಗಳನ್ನೇ ಹೆಚ್ಚಾಗಿ ಉಳಿಸಿದೆ. 2023-24ರಲ್ಲಿ 5,402 ಎಕರೆ ಹಾಗೂ 2024-25ಕ್ಕೆ 5,287 ಎಕರೆ ಭೂಮಿಯನ್ನು ದೇವಸ್ಥಾನಕ್ಕೆ ಖಾತೆ ಮಾಡಿಕೊಡಲಾಗಿದೆ. ಎರಡು ವರ್ಷಗಳಲ್ಲಿ ನಮ್ಮ ಸರ್ಕಾರ 10 ಸಾವಿರ ಎಕರೆಗೂ ಹೆಚ್ಚಿನ ಭೂಮಿ ಸಂರಕ್ಷಿಸಿದೆ. ಅಲ್ಲದೆ, ಈಗ ಆರೋಪಿಸುತ್ತಿರುವ ಬಿಜೆಪಿಯ ಕೇಂದ್ರ ಸರ್ಕಾರ 2014-19ರಲ್ಲಿ ವಕ್ಫ್‌ ಆಸ್ತಿ ಸಂರಕ್ಷಣೆಗೆ ರಾಜ್ಯಕ್ಕೆ 6 ಕೋಟಿ ರು. ನೀಡಿತ್ತು ಹಾಗೂ ತನ್ನ ಪ್ರಣಾಳಿಕೆಯಲ್ಲೂ ಆ ಬಗ್ಗೆ ಹೇಳಿತ್ತು. ಅಲ್ಲದೆ, ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಕ್ಫ್‌ ಆಸ್ತಿ ಸಂರಕ್ಷಣೆಗೆ ಕರೆ ನೀಡಿದ್ದರು ಎಂದು ಕೃಷ್ಣ ಬೈರೇಗೌಡ ಹೇಳಿದರು.

ಅಧಿಸೂಚನೆ ಬದಲಿಸುವುದಿಲ್ಲ: ಸಿದ್ದರಾಮಯ್ಯ

ವಕ್ಫ್‌ ಆಸ್ತಿಗೆ ಸಂಬಂಧಿಸಿ ಪ್ರಕಟಿಸಲಾಗಿರುವ ಅಧಿಸೂಚನೆ ರದ್ದು ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ತಿಳಿಸಿದರು. ಬಿಜೆಪಿ ಶಾಸಕರ ಆಗ್ರಹಕ್ಕೆ ವಿರೋಧ ವ್ಯಕ್ತಪಡಿಸಿದ ಮುಖ್ಯಮಂತ್ರಿ ಅವರು, ಯಾವುದೇ ಕಾರಣಕ್ಕೂ ಅಧಿಸೂಚನೆ ರದ್ದು ಅಥವಾ ಬದಲಾವಣೆ ಮಾಡುವುದಿಲ್ಲ ಎಂದರು.

Share this article