ಊಟಕ್ಕೂ ಬಿಡದೇ ತಡರಾತ್ರಿವರೆಗೆ ಕಲಾಪ : ನಿನ್ನೆ ಸುದೀರ್ಘ 15 ಗಂಟೆ ಕಲಾಪ ನಡೆಸಿ ಸ್ಪೀಕರ್‌ ಖಾದರ್‌ ದಾಖಲೆ

Published : Dec 19, 2024, 06:35 AM IST
UT Khader

ಸಾರಾಂಶ

ಕಲಾಪ ನಡೆಸುವ ವಿಚಾರದಲ್ಲಿ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ. ಎರಡು ದಿನಗಳ ಹಿಂದಷ್ಟೇ ಅಂದರೆ ಸೋಮವಾರ 14 ಗಂಟೆಗಳ ಕಾಲ ಕಲಾಪ ನಡೆಸಿದ್ದ ಖಾದರ್ ಅವರು ಬುಧವಾರ 15 ಗಂಟೆಗಳಷ್ಟು ಸುದೀರ್ಘ ಕಲಾಪ ನಡೆಸಿದರು.

 ವಿಧಾನಸಭೆ : ಕಲಾಪ ನಡೆಸುವ ವಿಚಾರದಲ್ಲಿ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ. ಎರಡು ದಿನಗಳ ಹಿಂದಷ್ಟೇ ಅಂದರೆ ಸೋಮವಾರ 14 ಗಂಟೆಗಳ ಕಾಲ ಕಲಾಪ ನಡೆಸಿದ್ದ ಖಾದರ್ ಅವರು ಬುಧವಾರ 15 ಗಂಟೆಗಳಷ್ಟು ಸುದೀರ್ಘ ಕಲಾಪ ನಡೆಸಿದರು.

ಸೋಮವಾರ ಮಧ್ಯರಾತ್ರಿ 12.50 ರವರೆಗೆ ಕಲಾಪ ನಡೆದಿದ್ದರೆ, ಬುಧವಾರ ಮಧ್ಯರಾತ್ರಿ 12.45ರವರೆಗೆ ಕಲಾಪ ನಡೆಸಿದರು. ಗುರುವಾರ ಅಧಿವೇಶನದ ಕೊನೆಯ ದಿನ. ಹೀಗಾಗಿ ಕಾರ್ಯಕಲಾಪ ಪೂರ್ಣಗೊಳಿಸಲು ಈ ರೀತಿ ಸುದೀರ್ಘ ಕಲಾಪ ನಡೆಸಲಾಯಿತು.

ಭೋಜನ ವಿರಾಮವೂ ಇಲ್ಲ:

ಸಾಮಾನ್ಯವಾಗಿ ಕಲಾಪಕ್ಕೆ ಮಧ್ಯಾಹ್ನದ ಭೋಜನ ವಿರಾಮ ನೀಡಲಾಗುತ್ತದೆ. ಆದರೆ, ಬುಧವಾರ ಭೋಜನ ವಿರಾಮವನ್ನೂ ನೀಡದೆ, ಯಾವುದೇ ಗದ್ದಲಕ್ಕೂ ಮುಂದೂಡದೆ ಬೆಳಗ್ಗೆ 9.45ರಿಂದ ಸತತ 15 ಗಂಟೆ ಕಾಲ ಕಲಾಪ ನಡೆಸಿದ್ದು ಅಧಿವೇಶನದ ಇತಿಹಾಸದಲ್ಲಿ ಇದೇ ಮೊದಲು.

ಕಲಾಪ ಮುಗಿಯುವ ಹೊತ್ತಿನಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ ಸೇರಿ ಕೆಲವೇ ಸಚಿವರು, ಶಾಸಕರು ಹಾಜರಿದ್ದರು. ಆದರೆ, ಆ ಹೊತ್ತಿನಲ್ಲೂ ಸದಸ್ಯರ ಪ್ರಶ್ನೆಗಳಿಗೆ ಸಚಿವರು ತಾಳ್ಮೆಯಿಂದಲೇ ವಿವರವಾಗಿ ಉತ್ತರ ನೀಡಿದ್ದು ವಿಶೇಷವಾಗಿತ್ತು.

ಸಂಪ್ರದಾಯದಂತೆ ಕಲಾಪ ಆರಂಭದ ಸಮಯದಲ್ಲೇ ಪ್ರಶ್ನೋತ್ತರ ಕಲಾಪ ನಡೆಯುತ್ತದೆ. ಆದರೆ, ಸ್ಪೀಕರ್‌ ಖಾದರ್‌ ಅವರು ಇತರ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿ ಕೊನೆಯಲ್ಲಿ ಪ್ರಶ್ನೋತ್ತರ ಮತ್ತು ಗಮನ ಸೆಳೆಯುವ ಸೂಚನೆ ತೆಗೆದುಕೊಳ್ಳುತ್ತಿದ್ದಾರೆ.

ಮಂಗಳೂರಿನವರಿಗಾಗಿಯೇ ಸದನ: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮಂಗಳೂರು ಭಾಗದಲ್ಲಿ ನಡೆಸುವ ಕಂಬಳಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರದ ಗಮನ ಸೆಳೆದರು. ಅದಕ್ಕೆ ಸ್ಪೀಕರ್, ಸರ್ಕಾರಕ್ಕೆ ಅನುದಾನ ಕೇಳುತ್ತಿದ್ದೇವೆ. ಅವರು ಕೊಡದಿದ್ದರೂ ಕಂಬಳ ನಡೆಸುವಷ್ಟು ಶಕ್ತರಾಗಿದ್ದೀರಿ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, ಕಳೆದ ಒಂದೂವರೆ ವರ್ಷದಿಂದ ಮಂಗಳೂರಿನವರಿಗಾಗಿಯೇ ಸದನ ನಡೆಸಲಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆ. ಅದರಲ್ಲಿ ತಪ್ಪೇನೂ ಇಲ್ಲ ಎಂದು ಸ್ಪೀಕರ್ ಸೇರಿ ಮಂಗಳೂರು ಶಾಸಕರ ಕಾಲೆಳೆದರು. ಕೊನೆಯಲ್ಲಿ ಸ್ಪೀಕರ್ ಸದನದ ಕಲಾಪವನ್ನು ಗುರುವಾರ ಬೆಳಗ್ಗೆ 9ಕ್ಕೆ ಮುಂದೂಡಿದರು.

ಇದಕ್ಕೂ ಮೊದಲು ರಾತ್ರಿ ಕಲಾಪದ ವಿಚಾರವಾಗಿ ಸ್ಪೀಕರ್‌ ಅವರೊಂದಿಗೆ ಮುನಿಸಿಕೊಂಡು ಬಿಜೆಪಿ ಸದಸ್ಯರು ಕಲಾಪದಿಂದ ಹೊರನಡೆದರು. ಇದರ ಹೊರತಾಗಿಯೂ ಕಲಾಪ ಯಾವುದೇ ವ್ಯತ್ಯಯವಿಲ್ಲದೆ ಮುಂದುವರಿಯಿತು.

PREV

Recommended Stories

ಲಿಂಬೆಹಣ್ಣು, ಮೊಸರನ್ನದ ಜೊತೆಗೆ ಸ್ಮಾರ್ಟ್‌ಫೋನ್ ಇಟ್ಟು ವಾಮಾಚಾರ!
ಯುವಕರು ದುಶ್ಚಟಗಳ ದಾಸರಾಗುತ್ತಿರುವುದು ವಿಷಾದನೀಯ