ಅನಗತ್ಯ ಸಿಜೇರಿಯನ್‌ ಹೆರಿಗೆ ತಡೆಗೆ ಕ್ರಮ - ಸರ್ಕಾರದಿಂದ ಶೀಘ್ರ ಕಾರ್ಯಕ್ರಮ ಜಾರಿ: ದಿನೇಶ್‌

ಸಾರಾಂಶ

ರಾಜ್ಯದಲ್ಲಿ ಅನಗತ್ಯ ಸಿಜೇರಿಯನ್‌ ಹೆರಿಗೆ ತಡೆಗೆ ಜಾರಿ ತರಲು ಮುಂದಿನ ತಿಂಗಳು ಕಾರ್ಯಕ್ರಮ ಘೋಷಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಸುವರ್ಣ ವಿಧಾನ ಪರಿಷತ್ : ರಾಜ್ಯದಲ್ಲಿ ಅನಗತ್ಯ ಸಿಜೇರಿಯನ್‌ ಹೆರಿಗೆ ತಡೆಗೆ ಜಾರಿ ತರಲು ಮುಂದಿನ ತಿಂಗಳು ಕಾರ್ಯಕ್ರಮ ಘೋಷಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಕಾಂಗ್ರೆಸ್‌ನ ಜಗದೇವ ಗುತ್ತೇದಾರ ಅವರ ಪ್ರಶ್ನೆಗೆ ಸೋಮವಾರ ಉತ್ತರಿಸಿದ ಸಚಿವರು, ಸಿಜೇರಿಯನ್‌ ಹೆರಿಗೆ ಸಂಖ್ಯೆ ಹೆಚ್ಚಾಗುತ್ತಿರುವುದು ಗಂಭೀರ ವಿಷಯ. 2021-22ರಲ್ಲಿ ಶೇ.35ರಷ್ಟು ಇದ್ದ ಸಿಜೇರಿಯನ್‌ ಪ್ರಮಾಣ ಈಗ ರಾಜ್ಯದಲ್ಲಿ ಶೇ.46 ರಷ್ಟಾಗಿದೆ. ಈ ಪೈಕಿ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.36 ಖಾಸಗಿ ಆಸ್ಪತ್ರೆಗಳಲ್ಲಿ ಶೇ.60 ರಷ್ಟು ಇದೆ. ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 80-90 ರಷ್ಟು ಇದೆ. ಸಿಜೇರಿಯನ್‌ ಹೆರಿಗೆಯಿಂದ ಆಸ್ಪತ್ರೆಗಳಿಗೆ ಹೆಚ್ಚು ಆದಾಯ ಬರುವುದರಿಂದ ಕೆಲ ವೈದ್ಯರು ಸಿಜೇರಿಯನ್‌ಗೆ ಶಿಫಾರಸು ಮಾಡುತ್ತಿದ್ದಾರೆ. ಗರ್ಭಿಣಿಯರನ್ನು ಮಾನಸಿಕ ಹಾಗೂ ದೈಹಿಕವಾಗಿ ಸಮರ್ಥರನ್ನಾಗಿ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದಿನ ತಿಂಗಳು ಕಾರ್ಯಕ್ರಮ ಘೋಷಿಸಲಾಗುವುದು ಎಂದರು.

46 ಜನರ ಬಂಧನ: ಕಳೆದೆರಡು ವರ್ಷಗಳಲ್ಲಿ 8 ಭ್ರೂಣ ಹತ್ಯೆ ಪ್ರಕರಣ ದಾಖಲಾಗಿದ್ದು, 46 ಮಂದಿಯನ್ನು ಬಂಧಿಸಲಾಗಿದೆ. ಕಾಯ್ದೆ ಉಲ್ಲಂಘಿಸಿರುವ ಸ್ಕ್ಯಾನಿಂಗ್‌ ಸೆಂಟರ್‌/ಮಾಲೀಕರು, ವೈದ್ಯರ ವಿರುದ್ಧ 136 ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. 74 ಪ್ರಕರಣಗಳಲ್ಲಿ ದಂಡ ವಿಧಿಸಿ ಖುಲಾಸೆಗೊಂಡಿದೆ. 65 ಪ್ರಕರಣಗಳು ನ್ಯಾಯಾಲಯದ ವಿವಿಧ ಹಂತದಲ್ಲಿದೆ ಎಂದು ಸಚಿವರು ವಿವರಿಸಿದರು.

Share this article