ಕನ್ನಡಪ್ರಭ ವಾರ್ತೆ ಗೋಕಾಕ ಯುವಶಕ್ತಿ ಹೆಚ್ಚಿರುವುದು ನಮ್ಮ ಭವ್ಯ ಭಾರತದಲ್ಲಿ ಮಾತ್ರ. ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸುವ ಬಹುದೊಡ್ಡ ಜವಾಬ್ದಾರಿ ಪಾಲಕರ ಮೇಲಿದೆ. ಬಲವಂತವಾದರು ಸರಿ ಮಕ್ಕಳಲ್ಲಿ ನೈತಿಕತೆ ಮೌಲ್ಯಗಳನ್ನು ಬೆಳೆಸಿದಾಗ ಸಿಗುವ ಫಲ ಅಮೃತವಾಗಿರುತ್ತದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀಶಾನಂದ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಯುವಶಕ್ತಿ ಹೆಚ್ಚಿರುವುದು ನಮ್ಮ ಭವ್ಯ ಭಾರತದಲ್ಲಿ ಮಾತ್ರ. ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸುವ ಬಹುದೊಡ್ಡ ಜವಾಬ್ದಾರಿ ಪಾಲಕರ ಮೇಲಿದೆ. ಬಲವಂತವಾದರು ಸರಿ ಮಕ್ಕಳಲ್ಲಿ ನೈತಿಕತೆ ಮೌಲ್ಯಗಳನ್ನು ಬೆಳೆಸಿದಾಗ ಸಿಗುವ ಫಲ ಅಮೃತವಾಗಿರುತ್ತದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀಶಾನಂದ ಹೇಳಿದರು.ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ ಶೂನ್ಯ ಸಂಪಾದನ ಮಠ ಕಾಯಕಯೋಗಿ ಲಿಂ.ಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡ 21ನೇ ಶರಣ ಸಂಸ್ಕೃತಿ ಉತ್ಸವದ ಮೊದಲ ದಿನದ ಯುವಜನೋತ್ಸವ ಮತ್ತು ಸಂಗೀತ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮಾನವ ದಿವ್ಯ ಜ್ಞಾನವನ್ನು ಸಂಪಾದನೆ ಮಾಡಿ ಸತ್ಕಾರ್ಯಗಳನ್ನು ಮಾಡಬೇಕು. ನಮ್ಮ ದೇಶದಲ್ಲಿ ಇರುವ ಸಂಸ್ಕೃತಿಯನ್ನು ಬೇರೆಯವರು ಅನುಕರಿಸುತ್ತಿದ್ದಾರೆ. ಪಾಶ್ಚಿಮಾತ್ಯರು ನಮ್ಮ ಯುವಕರನ್ನು ಆಕರ್ಷಿಸಲು ಆಹಾರ ಪದ್ಧತಿ, ಉಡುಗೆ ತೊಡಿಗೆ, ಮೊಬೈಲ್ ಮತ್ತು ಲ್ಯಾಪ್‌ಟಾಪ್‌ ಸೇರಿದಂತೆ ಇತರ ತಂತ್ರಜ್ಞಾನದ ಮೂಲಕ ನಮ್ಮ ಯುವಕರನ್ನು ಗುರಿ ಮಾಡುತ್ತಿದ್ದಾರೆ. ನಮ್ಮ ಭಾರತದ ಸಂಸ್ಕೃತಿಯು ಮಂತ್ರ, ಜಪಗಳನ್ನು ಹೇಳಿಕೊಟ್ಟಿದೆ. ಅದನ್ನು ಯುವಕರು ಪರಿಪಾಲಿಸಬೇಕು. ಹಾಸಿಗೆಯನ್ನು ಖರೀದಿಸಬಹುದು, ಆದರೆ ನಿದ್ರೆ ಖರೀದಿಸಲು ಆಗೋದಿಲ್ಲ. ಅಂತಹ ಸತ್ಯವನ್ನು ಅರಿತು ನಾವು ಬಾಳಬೇಕು. ಯುವ ಜನತೆಯನ್ನು ತಮ್ಮತ್ತ ಸೆಳೆಯುವ ಕೆಲಸ ಮಠ ಮಾನ್ಯಗಳಿಂದ ಆಗಬೇಕು. ಮಾನವ ನಿಸ್ಸಚಿಂತರಾಗಬೇಕಾದರೆ ಶರಣ ತತ್ವಗಳನ್ನು ಜೀವನದಲ್ಲಿ ಪಾಲನೆ ಮಾಡಿಕೊಳ್ಳಬೇಕು. ಪರಧನದ ಮೇಲಿನ ವ್ಯಾಮೋಹ ಕಡಿಮೆಯಾದರೆ ದೇಶದಲ್ಲಿ ಭ್ರಷ್ಟಾಚಾರ ತಡೆಯಲು ಸಾಧ್ಯ. ಪರದೇಶದಿಂದ ಬಂದ ಡ್ರಗ್ಸ್‌ನಂತಹ ಮಾದಕ ವಸ್ತುಗಳಿಂದ ನಮ್ಮ ಯುವಕರು ಹಾಳಾಗುತ್ತಿದ್ದಾರೆ. ಯುವಕರು ದಾರಿ ತಪ್ಪುತ್ತಿದ್ದಾರೆ ಎಂದರೆ ಪರೋಕ್ಷವಾಗಿ ನಾವೇ ಕಾರಣ ಎಂಬ ಸತ್ಯವನ್ನು ಅರಿತು ಪಾಲಕರು ಮಕ್ಕಳ ಪಾಲನೆ ಮಾಡಬೇಕು. ತಂದೆ ತಾಯಿಯನ್ನು ವೃದ್ದಾಶ್ರಮಕ್ಕೆ ಸೇರಿಸುವ ಹಾಗೆ ಯುವಕರು ನಡೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.ಇದೇ ಸಂದರ್ಭದಲ್ಲಿ ವಿವಿಧ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ 25ಕ್ಕೂ ಹೆಚ್ಚು ಸಾಧಕರನ್ನು ಗೌರವಿಸಲಾಯಿತು. ಸಾನಿಧ್ಯವನ್ನು ಮುರುಘರಾಜೇಂದ್ರ ಮಹಾಸ್ವಾಮಿಗಳು, ಬಟಕುರ್ಕಿ ಚೌಕಿ ಮಠದ ಬಸವಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ಈ ಸಂದರ್ಭದಲ್ಲಿ ಚನ್ನೈನ ಸರಕು ಸೇವಾತೆರಿಗೆ ಮತ್ತು ಸುಂಕ ವಿಭಾಗದ ಹೆಚ್ಚುವರಿ ಆಯುಕ್ತ ಶಿವಪ್ರಕಾಶ್ ಬಡ್ಡಿ, ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಕುಲಸಚಿವ ಸಂತೋಷ ಕಾಮಗೌಡರ, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಮಹೇಶ ಮಾಸಾಳ, ಡಾ.ಶಿವಾನಂದ ಮಗದುಮ್ಮ, ಅಶೋಕ ಕಮತ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸುಭಾಷಚಂದ್ರ ಪಾಟೀಲ, ಶರಣ ಸಂಸ್ಕೃತಿ ಉತ್ಸವ ಸಮಿತಿಯ ಅಧ್ಯಕ್ಷ ಶಂಕರ ಗೋರೋಶಿ, ಕಾರ್ಯದರ್ಶಿ ಬಸವರಾಜ ಉಳ್ಳಾಗಡ್ಡಿ, ಕೋಶಾಧ್ಯಕ್ಷ ಮಹಾಂತೇಶ ಕುಡಚಿ ಉಪಸ್ಥಿತರಿದ್ದರು. ಶಿಕ್ಷಕ ಎಸ್.ಕೆ.ಮಠದ ನಿರೂಪಿಸಿದರು, ಶಿಕ್ಷಕ ಆರ್.ಎಲ್.ಮಿರ್ಜಿ ವಂದಿಸಿದರು.