ರೈತರ ಮಕ್ಕಳಿಗೆ ಸಿಗದ ಕನ್ಯೆ - ಇದೇ ವಂಚಕರಿಗೆ ಬಂಡವಾಳ : ನಕಲಿ ಮದುವೆ ಮಾಡಿ ಹಣ ಸುಲಿಗೆ !

Published : Dec 16, 2024, 10:33 AM IST
forced marriages

ಸಾರಾಂಶ

ಕೃಷಿ ಕಾಯಕದಲ್ಲಿ ತೊಡಗಿರುವ ಯುವಕರನ್ನು ವರಿಸಲು ಯುವತಿಯರು ನಿರಾಕರಿಸುತ್ತಿದ್ದು, ಇದು ಗ್ರಾಮೀಣ ಭಾಗದಲ್ಲಿ ದೊಡ್ಡ ಸಾಮಾಜಿಕ ಸಮಸ್ಯೆಯನ್ನೇ ಸೃಷ್ಟಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಉತ್ತರ ಕರ್ನಾಟಕದಲ್ಲಿ ರೈತರಿಗೆ ಮದುವೆ ಹೆಸರಲ್ಲಿ ವಂಚಿಸುವ ಜಾಲ ಇದೀಗ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಸದಾನಂದ ಮಜತಿ

 ಬೆಳಗಾವಿ : ಹವಾಮಾನ ವೈಪರೀತ್ಯ, ಕೂಲಿಕಾರ್ಮಿಕರ ಕೊರತೆ, ಬೆಳೆಗೆ ಯೋಗ್ಯ ಬೆಲೆ ಸೇರಿ ನಾನಾ ಸಮಸ್ಯೆಗಳಿಂದ ಹೈರಾಣಾಗಿರುವ ಅನ್ನದಾತನಿಗೆ ಮದುವೆ ಎಂಬುದೇ ಈಗ ದೊಡ್ಡ ತಲೆನೋವಾಗಿ ಕಾಡತೊಡಗಿದೆ. ಕೃಷಿ ಕಾಯಕದಲ್ಲಿ ತೊಡಗಿರುವ ಯುವಕರನ್ನು ವರಿಸಲು ಯುವತಿಯರು ನಿರಾಕರಿಸುತ್ತಿದ್ದು, ಇದು ಗ್ರಾಮೀಣ ಭಾಗದಲ್ಲಿ ದೊಡ್ಡ ಸಾಮಾಜಿಕ ಸಮಸ್ಯೆಯನ್ನೇ ಸೃಷ್ಟಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಉತ್ತರ ಕರ್ನಾಟಕದಲ್ಲಿ ರೈತರಿಗೆ ಮದುವೆ ಹೆಸರಲ್ಲಿ ವಂಚಿಸುವ ಜಾಲ ಇದೀಗ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಗ್ರಾಮೀಣ ಭಾಗಗಳಲ್ಲಿ ಇಂಥ ವಂಚನೆಯ ಅನೇಕ ಪ್ರಕರಣಗಳು ವರದಿಯಾಗುತ್ತಿದ್ದರೂ ಕುಟುಂಬದ ಗೌರವ ಮಣ್ಣುಪಾಲಾಗುತ್ತದೆಂಬ ಕಾರಣಕ್ಕೆ ಇವು ಪೊಲೀಸ್‌ ಠಾಣೆ ಮೆಟ್ಟಿಲೇರುತ್ತಿಲ್ಲ. ಇದರಿಂದ ವಂಚಕರು ರಾಜಾರೋಷವಾಗಿ ರೈತರನ್ನು ಇಂಥ ಜಾಲಕ್ಕೆ ಕೆಡವುತ್ತಿದ್ದಾರೆ.

ಹೇಗೆ ನಡೆಯುತ್ತದೆ ದಂಧೆ?: ಮದುವೆ ಬ್ರೋಕರ್‌ಗಳ ರೀತಿ ಕಾರ್ಯ ನಿರ್ವಹಿಸುವ ಈ ವಂಚಕರ ಗ್ಯಾಂಗ್‌ ಸ್ಥಳೀಯರನ್ನು ಸಂಪರ್ಕಿಸಿ ಮದುವೆಗೆ ತಮ್ಮ ಬಳಿ ಕನ್ಯೆಯರಿದ್ದಾರೆಂದು ಹೇಳಿಕೊಳ್ಳುತ್ತಾರೆ. ಸ್ಥಳೀಯ ಬ್ರೋಕರ್‌ಗಳು ಕನ್ಯೆ ಸಿಗದೆ ಪರದಾಡುತ್ತಿರುವ ಯುವಕರನ್ನು ಸಂಪರ್ಕಿಸಿ ವ್ಯವಹಾರ ಕುದುರಿಸುತ್ತಾರೆ. ಯುವಕರಿಗೆ 10-15 ಯುವತಿಯರ ಭಾವಚಿತ್ರ ತೋರಿಸಿ ಹುಡುಕಿ ಫಿಕ್ಸ್‌ ಮಾಡುತ್ತಾರೆ. ಕುಟುಂಬದವರು ಹೇಳಿದ ದಿನ ದೇವಸ್ಥಾನಕ್ಕೆ ಯುವತಿಯನ್ನು ಕರೆತಂದು ಸ್ಥಳದಲ್ಲೇ 1.5 ಲಕ್ಷದಿಂದ 2 ಲಕ್ಷ ರು. ಪಡೆದು ಕನ್ಯಾದಾನ ಮಾಡಿಕೊಡುತ್ತಾರೆ. ಮದುವೆ ನಂತರ ಎರಡ್ಮೂರು ದಿನ ಯುವಕನ ಮನೆಗೆ ಹೊಂದಿಕೊಳ್ಳುವ ಯುವತಿ ಬಳಿಕ ಯಾವುದೋ ನೆಪ ಹೇಳಿ ಅಲ್ಲಿಂದ ಎಸ್ಕೇಪ್‌ ಆಗುತ್ತಾಳೆ. ಆಕೆ ವಾಪಸ್‌ ಮನೆಗೆ ಬಾರದಿದ್ದಾಗಲೇ ವಂಚನೆಯ ಅರಿವಾಗುತ್ತದೆ. ಕುಟುಂಬದ ಮರ್ಯಾದೆ ಹೋಗುತ್ತದೆಂಬ ಕಾರಣಕ್ಕೆ ತಮಗಾಗಿರುವ ವಂಚನೆ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಕೆಲ ಪ್ರಕರಣಗಳಲ್ಲಿ ವಂಚಕರು ಸ್ಥಳೀಯ ಬ್ರೋಕರ್‌ಗಳಿಗೂ ಕಮಿಷನ್‌ ನೀಡುವುದರಿಂದ ಈ ವಂಚನೆ ಜಾಲ ವ್ಯವಸ್ಥಿತವಾಗಿ ಮುಂದುವರೆದಿದೆ.

ಒಂದೇ ಕುಟುಂಬದ ಇಬ್ಬರಿಗೆ ವಂಚನೆ: ಈಚೆಗೆ ಬೈಲಹೊಂಗಲ ತಾಲೂಕಿನ ಗ್ರಾಮವೊಂದರಲ್ಲಿ 6 ತಿಂಗಳ ಅಂತರದಲ್ಲಿ ಒಂದೇ ಕುಟುಂಬದ ಯುವಕರಿಬ್ಬರಿಗೆ ಈ ರೀತಿ ವಂಚನೆ ಆಗಿರುವುದು ಬೆಳಕಿಗೆ ಬಂದಿದೆ. ಮೊದಲ ಪುತ್ರನಿಗೆ ಮಹಾರಾಷ್ಟ್ರದ ಯುವತಿ ಕಡೆಯವರಿಗೆ ₹2 ಲಕ್ಷ ಕೊಟ್ಟು ಮದುವೆ ಮಾಡಿಸಿಕೊಂಡಿದ್ದು, ಮದುವೆಯಾದ 5 ದಿನಗಳಲ್ಲೇ ಯುವತಿ ಪರಾರಿಯಾಗಿದ್ದಳು. ಈಚೆಗಷ್ಟೇ ಎರಡನೇ ಪುತ್ರನಿಗೆ ₹1.50 ಲಕ್ಷ ಕೊಟ್ಟು ವರಿಸಿದ್ದ ಕೊಪ್ಪಳ ಭಾಗದ ವಧು ಮೂರೇ ದಿನಕ್ಕೆ ಮನೆಯಿಂದ ಎಸ್ಕೇಪ್‌ ಆಗಿದ್ದಾಳೆ. 6 ತಿಂಗಳಲ್ಲಿ ಸುಮಾರು 3.5 ಲಕ್ಷ ಕಳೆದುಕೊಂಡ ಕುಟುಂಬ ಮರ್ಯಾದೆಗಂಜಿ ಯಾರ ಬಳಿಯೂ ಸಮಸ್ಯೆ ಹೇಳಿಕೊಳ್ಳುತ್ತಿಲ್ಲ. ಇಂಥ ಘಟನೆಗಳು ಬೇರೆಡೆಯೂ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.

ಕನ್ಯೆಯನ್ನೇ ತೋರಿಸುತ್ತಿಲ್ಲ: ಗ್ರಾಮೀಣ ಭಾಗದಲ್ಲಿ ಪ್ರತಿಷ್ಠಿತ ಕುಟುಂಬ, ಕುಟುಂಬದಲ್ಲಿ ಒಬ್ಬರಾದರೂ ನೌಕರಿಯಲ್ಲಿದ್ದು ಸ್ಥಿತಿವಂತರಾಗಿದ್ದರೆ ಹಾಗೂ ಸಂಬಂಧಿಕರಲ್ಲಿ ಕನ್ಯೆಯಿದ್ದರೆ ಮಾತ್ರ ರೈತನ ಗಂಡು ಮಕ್ಕಳಿಗೆ ಕಂಕಣ ಭಾಗ್ಯ ಕೂಡಿಬರುತ್ತಿದೆ. ಅನೇಕರು ಮದುವೆ ವಯಸ್ಸು ಮುಗಿದು ಅವಿವಾಹಿತರಾಗಿ ಜೀವನ ಸಾಗಿಸುವ ಸ್ಥಿತಿ ಬಂದಿದೆ.

 ಇದು ಒಂದು ಊರಿನ, ಒಂದು ಕೃಷಿ ಕುಟುಂಬದ ಸಮಸ್ಯೆಯಲ್ಲ. ರಾಜ್ಯಾದ್ಯಂತ ಅದರಲ್ಲೂ ಖುಷ್ಕಿ ಬೇಸಾಯ ಹೊಂದಿರುವ ಬೆಳಗಾವಿ, ಅಕ್ಕಪಕ್ಕದ ಜಿಲ್ಲೆಗಳಲ್ಲಿ ಈ ಸಮಸ್ಯೆ ದೊಡ್ಡ ತಲ್ಲಣ ಸೃಷ್ಟಿಸಿದೆ. ಕೃಷಿಕನಾಗಿದ್ದರೆ ಕನ್ಯೆ ಕೊಡುವುದು ಬಿಡಿ, ಹುಡುಗಿ ತೋರಿಸಲೂ ಹಿಂದೇಟು ಹಾಕುವ ಸ್ಥಿತಿ ಇದೆ. ಯಾರನ್ನೇ ಕೇಳಿ ಒಕ್ಕಲುತನ ಮನೆತನ ಬ್ಯಾಡ್ರಿ.. ನಮ್ಮ ಹುಡುಗಿ ಸಾಲಿ ಕಲಿತಾಳ.., ರೊಟ್ಟಿ ಮಾಡೋದು, ಪಾತ್ರೆ ತಿಕ್ಕೋದು, ಸೆಗಣಿ ಹಿಡಿಯೋದು ಮಗಳಿಗೆ, ನಮಗೆ ಇಷ್ಟ ಇಲ್ಲ. ಸರ್ಕಾರಿ ನೌಕರಿ ಇರೋ ವರ ಇದ್ದರೆ ಹೇಳ್ರಿ, ಸಿಗಲಿಲ್ಲ ಅಂದ್ರೆ, ಕೊನೇ ಪಕ್ಷ ಖಾಸಗಿ ನೌಕರಿ ಅಥವಾ ಉತ್ತಮ ಗಳಿಕೆ ಇರುವ ಇತರ ವೃತ್ತಿಯಾದರೂ ಪರವಾಗಿಲ್ಲ ಎನ್ನುತ್ತಿದ್ದಾರೆ.

PREV
Stay informed with the latest news from Belagavi district (ಬೆಳಗಾವಿ ಸುದ್ದಿ) — covering local governance, industry & economy, agriculture and farming, heritage & tourism, community events, civic issues, and district-level developments in Belagavi only on Kannada Prabha News.

Recommended Stories

ಬೆಂಬಲ ಬೆಲೆಯಡಿ ಸೋಯಾಬೀನ್‌ ಖರೀದಿ ನೋಂದಣಿ ಬಂದ್‌
ಟನ್ ಕಬ್ಬಿಗೆ ₹ 4 ಸಾವಿರ ಬೆಂಬಲ ಬೆಲೆ ನಿಗದಿಗೆ ಒತ್ತಾಯ